Advertisement
ನೂತನ ಸೇವೆಗೆ ಪಾಲಿಕೆಯಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದ ಮೇಯರ್ ಪ್ರೇಮಾನಂದ ಶೆಟ್ಟಿ, ಜನನ/ಮರಣ ಪ್ರಮಾಣ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಚಾಲನೆ ನೀಡಲಾಗಿದೆ. ನಗರ ವ್ಯಾಪ್ತಿ ಹೆಚ್ಚಿನ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿದ್ದು, ಗುಣಮಟ್ಟದ ಚಿಕಿತ್ಸೆ ದೊರಕುತ್ತದೆ. ಹೀಗಿದ್ದಾಗ ಜಿಲ್ಲೆ/ ಹೊರ ಜಿಲ್ಲೆಯ ಮತ್ತು ಹೊರ ರಾಜ್ಯದ ಹೆಚ್ಚಿನ ಮಂದಿ ವೈದ್ಯಕೀಯ ಸೇವೆಗೆ ಮಂಗಳೂರಿನ ಆಸ್ಪತ್ರೆಗಳಿಗೆ ಬರುತ್ತಾರೆ. ಅಂಚೆ ಇಲಾಖೆಯು ಜಾರಿಗೆ ತಂದ ಈ ಸೇವೆ ಬಳಿಸಿದರೆ ಜನನ/ಮರಣ ಸಂಭವಿಸಿದಾಗ ಪ್ರಮಾಣ ಪತ್ರ ಪಡೆಯಲು ಪಾಲಿಕೆಗೆ ಅಲೆದಾಡುವ ಪ್ರಮೇಯ ತಪ್ಪುತ್ತದೆ ಎಂದರು.
Related Articles
Advertisement
ಭವಿಷ್ಯದಲ್ಲಿ ಆನ್‌ಲೈನ್ ವ್ಯವಸ್ಥೆ
ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಜನನ/ಮರಣ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ಒಮ್ಮೆ ಪಾಲಿಕೆಗೆ ಆಗಮಿಸಲೇಬೇಕು. ಭವಿಷ್ಯದಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೊಳ್ಳಬಹುದು. ಪಾಲಿಕೆಯಲ್ಲಿ ಸದ್ಯ ಪ್ರತೀ ದಿನ ಸುಮಾರು 100 ಜನನ, 60 ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿಗಳು ಬರುತ್ತಿವೆ. ಅಂಚೆ ಇಲಾಖೆಯ ಮುಖೇನ ಪಾಲಿಕೆ ವ್ಯಾಪ್ತಿಯ ನೀರಿನ ಬಿಲ್ ಪಾವತಿ ಮಾಡಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದರು.
ಜನನ/ಮರಣ ಪ್ರಮಾಣ ಪತ್ರವನ್ನು ಅಂಚೆ ಮೂಲಕ ಮನೆ ಬಾಗಿಲಿಗೆ ತಲುಪಿಸಲು ಮೊದಲ ಅರ್ಜಿ ಪಡೆದುಕೊಳ್ಳಲಾಯಿತು. ನೂತನ ಒಡಂ ಬಡಿಕೆಗೆ ಈ ವೇಳೆ ಸಹಿ ಮಾಡಲಾಯಿತು. ಇದೇ ವೇಳೆ ಪಾಲಿಕೆ ಉಪಮೇಯರ್ ಸುಮಂಗಲಾ ರಾವ್, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಸೇರಿದಂತೆ ಪಾಲಿಕೆ, ಅಂಚೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಪಾಲಿಕೆ ಕೌಂಟರ್‌ನಲ್ಲಿ ಅರ್ಜಿ
ಪ್ರಮಾಣ ಪತ್ರವನ್ನು ಮನೆ ಬಾಗಿಲಿನಲ್ಲಿ ಪಡೆಯಲು ನಿಮ್ಮ ವಿಳಾಸವನ್ನು ಒಂದು ಸರಳವಾದ ಅರ್ಜಿಯಲ್ಲಿ ನಮೂದಿಸಿ ಕೋರಿಕೆ ಸಲ್ಲಿಸಬೇಕಾಗುತ್ತದೆ. ಈ ಅರ್ಜಿ ಫಾರಂ ಮಹಾನಗರ ಪಾಲಿಕೆಯ ಜನನ/ಮರಣ ನೋಂದಣಿ ಕೌಂಟರ್‌ನಲ್ಲಿ ಲಭ್ಯವಿರುತ್ತದೆ. ಈ ಸೇವೆಗಾಗಿ ಅರ್ಜಿ ಸಲ್ಲಿಸುವಾಗ ಯಾವುದೇ ಹೆಚ್ಚುವರಿ ಮೊತ್ತ ಪಾವತಿಸಬೇಕಾಗಿಲ್ಲ. ಪ್ರಮಾಣ ಪತ್ರವನ್ನು ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಕಳುಹಿಸಲಾಗುತ್ತದೆ. ಬಟವಾಡೆ ಸಂದರ್ಭದಲ್ಲಿ 100 ರೂ. ಪಾವತಿ ಮಾಡಿ ಮನೆ ಬಾಗಿಲಲ್ಲಿ ಪ್ರಮಾಣ ಪತ್ರ ಪಡೆಯಲು ಅವಕಾಶ ನೀಡಲಾಗಿದೆ.
ವೈಶಿಷ್ಟ್ಯ
ಜನನ/ಮರಣ ಪ್ರಮಾಣ ಪತ್ರ ವನ್ನು ಭಾರತಾದ್ಯಂತ ಯಾವುದೇ ಊರಿಗೂ ತಲುಪಿಸುವ ವ್ಯವಸ್ಥೆ ಇದೆ. ಪ್ರಮಾಣ ಪತ್ರದ ಪ್ರತಿ ಗಳು ಎಷ್ಟೇ ಇದ್ದರೂ ಮತ್ತು ಯಾವುದೇ ಊರಿಗಾದರೂ 100 ರೂ. ನಿಗದಿತ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಬಟವಾಡೆಯ ಸಂದರ್ಭ ಪೋಸ್ಟ್ ಮ್ಯಾನ್ ಮೂಲಕ ಶುಲ್ಕ ಪಾವತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಬಟವಾಡೆಯಾಗಬೇಕಾಗಿರುವ ವಿಳಾಸವು ಪ್ರಮಾಣ ಪತ್ರದ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆಯೂ ಆಗಿರಬಹುದು. ಪಾಲಿಕೆಗೆ ಅರ್ಜಿ ಸಲ್ಲಿಸಿದ ಮೂರರಿಂದ ಮೂವತ್ತು ದಿನಗಳ ಒಳಗಾಗಿ ಪ್ರಮಾಣ ಪತ್ರವು ಮುದ್ರಣಗೊಂಡು ಅನಂತರ ಅದನ್ನು ಎರಡರಿಂದ ಐದು ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅಂಚೆ ಇಲಾಖೆಯು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ.