Advertisement

ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌: ಪದಕ ನಿರೀಕ್ಷೆಯೊಂದಿಗೆ ಗುರುರಾಜ್‌ ಪಯಣ

12:08 AM Jul 04, 2022 | Team Udayavani |

ಕುಂದಾಪುರ: ನಾಲ್ಕು ವರ್ಷಗಳ ಹಿಂದೆ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು, ಭಾರತಕ್ಕೆ ಮೊತ್ತಮೊದಲ ಪದಕ ತಂದಿತ್ತ ಕುಂದಾಪುರ ಮೂಲದ ವೇಟ್‌ಲಿಫ್ಟರ್‌ ಗುರುರಾಜ್‌ ಈಗ ಮತ್ತೂಂದು ಪದಕದ ನಿರೀಕ್ಷೆಯೊಂದಿಗೆ ಇಂಗ್ಲೆಂಡ್‌ಗೆ ಪಯಣ ಬೆಳೆಸಿದ್ದಾರೆ.

Advertisement

ಇಂಗ್ಲೆಂಡ್‌ನ‌ ಬರ್ಮಿಂಗ್‌ಹ್ಯಾಮ್‌ನಲ್ಲಿ ಜು. 28ರಿಂದ ಆ. 8ರ ವರೆಗೆ 22ನೇ ಕಾಮನ್ವೆಲ್ತ್‌ ಗೇಮ್ಸ್‌ ನಡೆಯಲಿದ್ದು, ಗುರುರಾಜ್‌ ಅವರನ್ನೊಳಗೊಂಡ ಭಾರತೀಯ ವೇಟ್‌ಲಿಫ್ಟರ್‌ಗಳ ತಂಡ ಈಗಾಗಲೇ ತೆರಳಿದೆ.

ವಂಡ್ಸೆ ಸಮೀಪದ ಚಿತ್ತೂರಿನ ಚಾಲಕರಾಗಿರುವ ಮಹಾಬಲ ಪೂಜಾರಿ ಹಾಗೂ ಪದ್ದು ಪೂಜಾರಿ ದಂಪತಿ ಪುತ್ರನಾಗಿರುವ ಗುರುರಾಜ್‌, ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ ದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಅವರೀಗ ವಾಯು ಸೇನೆಯ ಉದ್ಯೋಗಿಯಾಗಿದ್ದಾರೆ. ಕಳೆದ ಒಂದು ವರ್ಷ ದಿಂದ ಪಟಿಯಾಲದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂ ಡಿದ್ದು, ಅಲ್ಲಿಂದಲೇ ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದಾರೆ.

61 ಕೆಜಿ ವಿಭಾಗದಲ್ಲಿ ಸ್ಪರ್ಧೆ
ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರುರಾಜ್‌ ಒಟ್ಟು 249 ಕೆಜಿ (111+138) ಭಾರ ಎತ್ತಿ ಬೆಳ್ಳಿ ಪದಕ ಗೆದ್ದು, ವೈಯಕ್ತಿಕ ಶ್ರೇಷ್ಠ ನಿರ್ವಹಣೆಯನ್ನು ಸರಿಗಟ್ಟಿದರು. ಇದು ಅವರ ಚೊಚ್ಚಲ ಕಾಮನ್ವೆಲ್ತ್‌ ಗೇಮ್ಸ್‌ ಆಗಿತ್ತು. ಈ ಬಾರಿ 61 ಕೆಜಿ ವಿಭಾಗದಲ್ಲಿ ಗುರುರಾಜ್‌ ಸ್ಪರ್ಧಿಸುತ್ತಿದ್ದು, ಈ ವಿಭಾಗದಲ್ಲಿ ಭಾರತಕ್ಕೆ ಈವರೆಗೆ ಪದಕ ಒಲಿದಿಲ್ಲ. ಗುರುರಾಜ್‌ ಸ್ಪರ್ಧೆಯಿಂದಾಗಿ ಪದಕ ನಿರೀಕ್ಷೆ ಮೂಡಿದೆ.

ಧೈರ್ಯ ತುಂಬಿದ ಹೆತ್ತವರು
ಎರಡನೇ ಬಾರಿಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ತನಗೆ ತಂದೆ-ತಾಯಿ ಧೈರ್ಯ ತುಂಬಿದ್ದಾರೆ. ಅವರು ಆತ್ಮವಿಶ್ವಾಸದ ಮಾತುಗಳನ್ನಾಡಿ ಹಾರೈಸಿದ್ದಾರೆ ಎನ್ನುವುದಾಗಿ ಗುರುರಾಜ್‌ ಹೇಳಿಕೊಂಡಿದ್ದಾರೆ.

Advertisement

ಪದಕದ ನಿರೀಕ್ಷೆಯಲ್ಲಿದ್ದೇನೆ…
ಬರ್ಮಿಂಗ್‌ಹ್ಯಾಮ್‌ನಿಂದ “ಉದಯವಾಣಿ’ ಜತೆ ಮಾತನಾಡಿದ ಗುರುರಾಜ್‌, ಕಳೆದ ಬಾರಿ 56 ಕೆಜಿಯಲ್ಲಿ ಸ್ಪರ್ಧಿಸಿದ್ದು, ಈ ಬಾರಿ 61 ಕೆಜಿಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಜು. 30ರಂದು ನನ್ನ ಸ್ಪರ್ಧೆ ನಡೆಯಲಿದೆ. ಕಠಿನ ಅಭ್ಯಾಸದಲ್ಲಿ ತೊಡಗಿದ್ದು, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಮುಖ್ಯ. ಈ ವಿಭಾಗದಲ್ಲಿ ಪ್ರಬಲ ಪೈಪೋಟಿ ಯಿದ್ದು, ಪದಕ ಗೆಲ್ಲುವ ನಿರೀಕ್ಷೆಯಿದೆ ಎಂದಿದ್ದಾರೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next