ಮರಗಳ ಜಾಗದಲ್ಲಿ ಕಟ್ಟಡಗಳು ಬಂದಿವೆ. ಕೆರೆಗಳು ಕರಗಿ, ರಸ್ತೆ-ನಿವೇಶನಗಳಾಗಿವೆ. ನೀರಿಗೇ ಬೆಂಕಿ ಹೊತ್ತಿಕೊಳ್ಳುತ್ತಿದೆ. ಗಾಳಿ ವಿಷವಾಗುತ್ತಿದೆ. ಇದರಿಂದ ಪ್ರಾಣಿ-ಪಕ್ಷಿಗಳ ಲೆಕ್ಕಾಚಾರವೇ ತಲೆಕೆಳಗಾಗುತ್ತಿದೆ. ಈ ಮಧ್ಯೆ ವಾತಾವರಣದ ವ್ಯತ್ಯಾಸದಿಂದ ಬೆಂಗಳೂರು ಬೇಯುತ್ತಿದೆ. ಸೂಕ್ಷ್ಮಮತಿಯ ಪ್ರಾಣಿ-ಪಕ್ಷಿಗಳು ಸುಸ್ತಾಗುತ್ತಿವೆ. ಕೆಲವು ವಲಸೆ ಹೋಗುತ್ತಿವೆ. ಪ್ರತಿ ಸೀಜನ್‌ನಲ್ಲಿ ಇಲ್ಲಿಗೆ ವಲಸೆ ಬರುವ ಪಕ್ಷಿಗಳು ದೂರದಿಂದಲೇ ಬೆಂಗಳೂರಿಗೆ ಬೈ-ಬೈ ಹೇಳುತ್ತಿವೆ. ಹಾಗಿದ್ದರೆ, ವಾಸ್ತವವಾಗಿ ಪ್ರಾಣಿ-ಪಕ್ಷಿಗಳು ಎದುರಿಸುತ್ತಿರುವ ಸಮಸ್ಯೆಗಳೇನು? ಅವುಗಳ ಪರಿಹಾರ ಹೇಗೆ? ಈ ಮೂಕರೋದನಕ್ಕೆ ಮಿಡಿದ ಹೃದಯಗಳ ಮಾಹಿತಿ ಈ ಬಾರಿ “ಸುದ್ದಿ ಸುತ್ತಾಟ’ದಲ್ಲಿ…
ಮಳೆಗಾಲದಲ್ಲಿ ಬೇಸಿಗೆ ಇರುತ್ತದೆ. ಚಳಿಗಾಲದಲ್ಲಿ ಮಳೆ ಬರುತ್ತದೆ. ಇನ್ನು ಬೇಸಿಗೆಯಲ್ಲಿ ವರ್ಷದಿಂದ ವರ್ಷಕ್ಕೆ ಉಷ್ಣಾಂಶ ಏರಿಕೆ ಆಗುತ್ತಲೇ ಇದೆ. ಕೆಲವೊಮ್ಮೆ ವರುಣ ಆರ್ಭಟಿಸಿ, ಮಳೆಗಾಲದ ದಿನಗಳನ್ನು ನೆನಪಿಸುತ್ತಾನೆ. ಹೀಗೆ ಋತುಮಾನಗಳಲ್ಲಿ ಏರುಪೇರು ಆಗುತ್ತಲೇ ಇದೆ. ಇದಕ್ಕೆ ಜಾಗತಿಕ ತಾಪಮಾನ ಒಂದೇ ಕಾರಣವೇ? ಅಲ್ಲ, ಸ್ಥಳೀಯ ಅಂಶಗಳೂ ಸಾಕಷ್ಟು ಕೊಡುಗೆ ನೀಡಿವೆ. ಈ ವ್ಯತ್ಯಾಸಗಳು ಕೇವಲ ಮನುಷ್ಯರ ಮೇಲೆ ಅಲ್ಲ; ಪ್ರಾಣಿ-ಪಕ್ಷಿಗಳ ಮೇಲೂ ಪರಿಣಾಮ ಬೀರುತ್ತಿದೆ. ಆಯಾ ಋತುಮಾನಕ್ಕೆ ಅನುಗುಣವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದ ಪ್ರಾಣಿ-ಪಕ್ಷಿಗಳ ಲೆಕ್ಕಾಚಾರವೇ ಇದರಿಂದ ತಲೆಕೆಳಗಾಗುತ್ತಿದೆ.
ವಾತಾವರಣದಲ್ಲಿನ ಈ ವ್ಯತ್ಯಾಸದಿಂದ ನಗರದಲ್ಲಿ ಪ್ರಾಣಿ-ಪಕ್ಷಿಗಳಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಮುಖ್ಯವಾಗಿ ನೀರಿನ ಅಭಾವ ಸೃಷ್ಟಿಯಾಗಿದೆ. “ಎಲ್ಲೆಂದರಲ್ಲಿ ನೀರಿನ ಹೊಂಡಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಪ್ರಾಣಿ-ಪಕ್ಷಿಗಳೂ ಒಂದು ಪ್ರದೇಶಕ್ಕೆ ತಕ್ಕಂತೆ ಹೊಂದಿಕೊಂಡಿರುತ್ತವೆ. ನಮಗೆ ಒಂದು ಪ್ರದೇಶದ ಮೇಲೆ ಇರುವಷ್ಟೇ ಸಂಬಂಧ ಅವಕ್ಕೂ ಇರುತ್ತವೆ. ಅವು ಇರುವ ಪ್ರದೇಶಕ್ಕೆ ಅನುಗುಣವಾಗಿ ಯೋಜನೆಯನ್ನು ರೂಪಿಸಿಕೊಳ್ಳಬೇಕು ಎಂಬುದು ಬನ್ನೇರುಘಟ್ಟ ಅಭಯಾರಣ್ಯದಲ್ಲಿ 15ಕ್ಕೂ ಹೆಚ್ಚು ಪ್ರಭೇದಗಳ ಕುರಿತು ಅಧ್ಯಯನ ನಡೆಸಿರುವ ಅರೋಚಾ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಅವಿನಾಶ್ ಅಭಿಪ್ರಾಯ.
ರಾಜಾಜಿನಗರ, ಜಯನಗರ ಮತ್ತು ಶಿವಾಜಿನಗರ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಪ್ರಾಣಿ-ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿತ್ರಾಣವಾಗುತ್ತಿವೆ. ಕೆಲವೇ ತಿಂಗಳುಗಳಲ್ಲಿ ಬಿಸಿಲಿನ ಹೊಡೆತಕ್ಕೆ ನಿತ್ರಾಣವಾದ 40ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಲಾಗಿದೆ. ಮಾಂಸದ ವ್ಯಾಪಾರ ಹೆಚ್ಚಾಗಿರುವ ಶಿವಾಜಿನಗರದ ಸುತ್ತಲೂ ನಿತ್ರಾಣಗೊಂಡ ಪ್ರಾಣಿ-ಪಕ್ಷಿಗಳ ಸಂಖ್ಯೆ ಅಧಿಕ. ಅಲ್ಲಿ ಕುಡಿಯುವುದಕ್ಕೆ ನೀರು ಸಿಗುವುದಿಲ್ಲ. ಇಲ್ಲಿನ ಒಳಚರಂಡಿ ನೀರು ಸೇವಿಸಿ ಪಕ್ಷಿಗಳು ಸಾವಿಗಿಡೀಗಾಡಿವೆ’ ಎನ್ನುತ್ತಾರೆ ಸಂಜೀವ್.
ಆಮೆಗಳು ನೀರಿನಿಂದ ಹೊರಕ್ಕೆ ಬರುತ್ತಿವೆ!: ನೀರಿನ ಅಭಾವ ಹೆಚ್ಚುತ್ತಲೇ ಇರುವುದರಿಂದ ಅಮೆಗಳೂ ನೀರಿನಿಂದ ಹೊರಕ್ಕೆ ಬರುತ್ತಿವೆ. ಬೆಳ್ಳಂದೂರು, ತಾತಗುಣಿ ಕೆರೆಗಳಲ್ಲಿ ಉಂಟಾದ ನೀರಿನ ಅಭಾವ ಮತ್ತು ಅನೈರ್ಮಲ್ಯದಿಂದ ಆಮೆಗಳು ನೀರಿನಿಂದ ಹೊರಕ್ಕೆ ಬರುತ್ತಿವೆ. ನೀರಿನಲ್ಲಿ ಸಮರ್ಪಕ ಆಹಾರ ಸಿಗದ ಕಾರಣ ಆಮೆ ಹಾಗೂ ಇತರ ಜಲಚರಗಳು ನೀರಿನಿಂದ ಹೊರಕ್ಕೆ ಬಂದು ಸಾವನ್ನಪ್ಪುತ್ತಿವೆ.
ಕಲುಷಿತ ನೀರಿನಿಂದ ಕಾಯಿಲೆ: ಬಿಸಿಲಿನಿಂದ ಪಕ್ಷಿಗಳು ಮಾತ್ರವಲ್ಲದೆ ನಾಯಿ, ಬೆಕ್ಕು, ಮಂಗ, ಕುದುರೆ, ದನಕರುಗಳೂ ಬಸವಳಿಯುತ್ತಿವೆ. ಅವುಗಳಿಗೆ ಕೆರೆ ಕುಂಟೆಗಳು ಸುಲಭವಾಗಿ ಸಿಗದೆ, ಗುಂಡಿ, ಚರಂಡಿಗಳಲ್ಲಿ ನಿಂತ ಕಲುಷಿತ ನೀರು ಕುಡಿದು ಆರೋಗ್ಯ ಹದಗೆಡುತ್ತಿದೆ. ಕಲುಷಿತ ನೀರನ್ನು ಕುಡಿಯುವುದರಿಂದ ನಾಯಿ ಮತ್ತು ಹಸುಗಳು ಚರ್ಮರೋಗ, ಕ್ಯಾನ್ಸರ್ ರೀತಿಯ ಸಮಸ್ಯೆಗೆ ತುತ್ತಾಗುತ್ತಿವೆ.
ಕೆಲವು ಸಂದರ್ಭದಲ್ಲಿ ಕಲುಷಿತ ನೀರು ಕೂಡ ಸಿಗದೇ ನಾಯಿ, ಹಸುಗಳ ಬಾಯಲ್ಲಿ ಜೊಲ್ಲು ಸುರಿಯುತ್ತಿರುತ್ತದೆ. ಆದರೆ, ಅದನ್ನು ಜನರು ರೇಬಿಸ್ ಎಂದು ತಪ್ಪಾಗಿ ಭಾವಿಸಿ ನಾಯಿಗಳನ್ನು ಹೊಡೆದು ಸಾಯಿಸುವುದುಂಟು ಎನ್ನುತ್ತಾರೆ ಪಶುವೈದ್ಯರು. ಪಕ್ಷಿಗಳು ನಿತ್ರಾಣವಾಗಿ ಕೆಳಕ್ಕೆ ಬಿದ್ದ ಕೂಡಲೇ ಅವುಗಳಿಗೆ ನೀರು ಕುಡಿಸಬಾರದು. ತೆಳುವಾದ ಬಟ್ಟೆ ಹೊದಿಸಿ, ತಣ್ಣನೆಯ ಗಾಳಿಯಲ್ಲಿ ಅದಕ್ಕೆ ವಿಶ್ರಾಂತಿ ನೀಡಬೇಕು ಎನ್ನುತ್ತಾರೆ ಸಂಜೀವ್.
ಕೆರೆಗಳ ಕಣ್ಮರೆ; ವಲಸೆ ಹಕ್ಕಿಗಳು ವಿಮುಖ: ಬ್ರೆಜಿಲ್, ಚಿಲಿ, ಅರ್ಜೆಂಟೈನಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಚೀನಾ, ನೇಪಾಳ, ಶ್ರೀಲಂಕಾ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಪಕ್ಷಿಗಳು ಸಂತಾನೋತ್ಪತ್ತಿ ಅರಸಿ ಬೆಂಗಳೂರಿನ ಕೆರೆಗಳಿಗೆ ಬರುತ್ತವೆ. ಪ್ರಮುಖವಾಗಿ ವಿದೇಶಗಳ ವುಡ್ ಸ್ಯಾಂಡ್‌ಪೈಪರ್, ಗ್ರೀಬ್ ಸ್ಯಾಂಡ್‌ಪೈಪರ್, ಲಿಟ್ಲ ಸ್ಟ್ರಿಂಟ್, ಇಂಡಿಯನ್ ಗೋಲ್ಡನ್ ಒರೊಯಿಲೆ, ಆಸ್‌ಪರೆ, ಬ್ಲಿಫ್, ಕಾಮನ್ ಸ್ಟೋನ್ ಚಾಟ್, ರೋಜಿ ಸ್ಟಗ್ಲಿಂಗ್, ವೈಟ್ ವಗಟೈಲ್, ಬ್ಲೂ ರಾಕ್‌ಟ್ರಸ್ ಮುಂತಾದ ಪಕ್ಷಿಗಳು ಬರುತ್ತಿದ್ದವು. ಆದರೆ, ಈಗ ವಲಸೆ ಹಕ್ಕಿಗಳ ಪ್ರಮಾಣ ಶೇ.30ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ತಜ್ಞರು.
ಪ್ರಯೋಜನವಾಗದ ವೃಕ್ಷ ಬೇಸಾಯ: ಅರಣ್ಯ ಇಲಾಖೆಯು ನಗರದಲ್ಲಿ ಪಕ್ಷಿಗಳಿಗೆ ಅವುಗಳಿಗೆ ಆಹಾರ ಒದಗಿಸುವ ಗಿಡಗಳನ್ನು ನೆಡುತ್ತಿಲ್ಲ. ಬದಲಾಗಿ ಅಂಕಿ ಸಂಖ್ಯೆಗಾಗಿ ಒಂದಷ್ಟು ಗಿಡಗಳನ್ನು ನೆಡಲಾಗುತ್ತಿದೆ. ಆದರ ಬದಲು ಪಕ್ಷಿಗಳ ಆಹಾರವಾದ ಹಣ್ಣು- ಕಾಯಿಗಳನ್ನು ಬಿಡುವ ಉತ್ತಮ ಗಿಡಗಳನ್ನು ಬೆಳೆಸಿದರೆ ನಗರ ಪ್ರದೇಶದಲ್ಲಿ ಪಕ್ಷಿ ಸಂಕುಲ ಬದುಕುತ್ತದೆ.
ರಕ್ಷಣೆಗೆ ಬಂದ ಸಂಘ-ಸಂಸ್ಥೆಗಳು: ಪ್ರಾಣಿ, ಪಕ್ಷಿಗಳ ಈ ಸಾವು-ನೋವು ತಪ್ಪಿಸುವ ಉದ್ದೇಶದಿಂದ ಹಲವು ಸ್ವಯಂ ಸೇವಾ ಸಂಸ್ಥೆಗಳು ಪ್ರಾಣಿ-ಪಕ್ಷಿಗಳ ದಾಹವನ್ನು ನೀಗಿಸುವ ಕೆಲಸ ಮಾಡುತ್ತಿವೆ. ಕೆಂಗೇರಿ ಸಮೀಪದ ತುರಹಳ್ಳಿ ಕಾಡಿನಲ್ಲಿರುವ ಪ್ರಾಣಿಗಳಿಗೆ ನೀರುಣಿಸುವ ಕೆಲಸವನ್ನು ಪೀಪಲ್ ಫಾರ್ ಅನಿಮಲ್ ಸಂಸ್ಥೆ ಮಾಡುತ್ತಿದೆ. ಅಂದಾಜು 600 ಕಿ.ಮೀ ವ್ಯಾಪ್ತಿಯ ಈ ಕಾಡಿನಲ್ಲಿ ಜಿಂಕೆ, ಮೊಲ, ನವಿಲು ಸೇರಿದಂತೆ ಹಲವು ವನ್ಯಜೀವಿಗಳ ಸಂಕುಲವೇ ಇದೆ. ಬಿರು ಬೇಸಿಗೆಯಿಂದ ಉಂಟಾದ ನೀರಿನ ಅಭಾವದಿಂದ ಇಲ್ಲಿನ ಪ್ರಾಣಿ-ಪಕ್ಷಿಗಳು ತತ್ತರಿಸಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆ, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಪ್ರತಿ ದಿನ 6ರಿಂದ 8 ಟ್ಯಾಂಕರ್ ನೀರನ್ನು ಕಾಡಿನಲ್ಲಿರುವ ಹೊಂಡಗಳಿಗೆ ತುಂಬಿಸಿದೆ. ಆ ಮೂಲಕ ವನ್ಯಜೀವಿಗಳ ದಾಹ ನೀಗಿಸುತ್ತಿದೆ. “ತುರಹಳ್ಳಿ ಕಾಡಿನಲ್ಲಿ ನೀರಿನ ಅಭಾವ ಹೆಚ್ಚಾಗಿರುವುದರಿಂದ ಜಿಂಕೆ ಸೇರಿದಂತೆ ಹಲವು ಪ್ರಾಣಿಗಳು ಕಾಡಿನಿಂದ ಹೊರಕ್ಕೆ ಬರುತ್ತಿದ್ದವು. ಈ ವೇಳೆ ಅಪಘಾತ, ನಾಯಿಗಳ ದಾಳಿಗೆ ತುತ್ತಾಗಿದ್ದವು. ಇದನ್ನು ಗಮನಿಸಿ ನೀರು ಪೂರೈಸಲು ಮುಂದಾದೆವು’ ಎನ್ನುತ್ತಾರೆ ಪೀಪಲ್ ಫಾರ್ ಅನಿಮಲ್ ಸಂಸ್ಥೆಯ ಸಂಸ್ಥಾಪಕ ಮತ್ತು ಪಶುವೈದ್ಯ ನವಾಜ್.
60 ನಾಯಿಗಳ ರಕ್ಷಣೆ: ನಗರದಲ್ಲಿ ಪಕ್ಷಿಗಳ ಸಂರಕ್ಷಣೆ ಜತೆಗೆ ಮಂಗಗಳು, ನಾಯಿ, ಬೆಕ್ಕು, ದನಕರುಗಳನ್ನು ರಕ್ಷಿಸುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಹೆವೆನ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಬಿಸಿಲ ಬೇಗೆಗೆ ತತ್ತರಿಸುತ್ತಿರುವ ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ನೀಡಿ, ಆಶ್ರಯ ನೀಡುತ್ತಿದೆ. ಈ ಟ್ರಸ್ಟ್‌ನಿಂದ ಈ ಬಾರಿ ಬೇಸಿಗೆಯಲ್ಲಿ ಹಾನಿಗೊಳಗಾದ 60 ನಾಯಿಗಳನ್ನು ರಕ್ಷಣೆ ಮಾಡಲಾಗಿದೆ. ಟ್ರಸ್ಟ್‌ನ ಪುನರ್ವಸತಿ ಕೇಂದ್ರವು ಹೊಸಕೋಟೆಯಲ್ಲಿದ್ದು, ಸದ್ಯ ಇಲ್ಲಿ 200 ನಾಯಿಗಳು ಆಶ್ರಯ ಪಡೆದಿವೆ.
ಸಮಾನ ಮನಸ್ಕರ ತಂಡವೊಂದು “ವಾಟರ್ ಫಾರ್ ವಾಯ್ಸಲೆಸ್’ ಹೆಸರಿನಲ್ಲಿ ಕೆಲಸ ಮಾಡುತ್ತಿದೆ. ಸ್ವಂತ ಖರ್ಚಿನಲ್ಲಿ ನೀರಿನ ಕುಂಡಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಬೇಸಿಗೆಯಲ್ಲಿ ಪ್ರಾಣಿಗಳ ದಾಹ ನೀಗಿಸುವ ಕೆಲಸ ಮಾಡುತ್ತಿದೆ. “ಕೆಲ ವರ್ಷಗಳ ಹಿಂದೆ ತುಮಕೂರಿನಲ್ಲಿ ಸನ್ನಿಜೆನ್ ಎಂಬವರು ಆರಂಭಿಸಿದ ಈ ಅಭಿಯಾನ, ಇಂದು ಹಲವು ಭಾಗಗಳಿಗೆ ಹಬ್ಬಿದೆ’ ಎನ್ನುತ್ತಾರೆ ತಂಡದ ಬೆಂಗಳೂರಿನ ಸದಸ್ಯ ಎಂ. ಪ್ರಸಾದ್.
ಆಹಾರ ನೀರು ನೀಡಲು ಹೀಗೆ ಮಾಡಿ: ಪಕ್ಷಿಗಳು ಹಸಿವಿನಿಂದ ಹಾಗೂ ಬಾಯಾರಿಕೆಯಿಂದ ಬಳಲುವಾಗ ಆಹಾರ ಹುಡುಕುತ್ತ ಸುತ್ತುತ್ತಿರುತ್ತವೆ. ಈ ವೇಳೆ ನಗರದ ಉದ್ಯಾನವನಗಳಲ್ಲಿ ಜನ ತಿಂದು ಬಿಸಾಡಿದ ಬೇಕರಿ ತಿನಿಸು, ಕರಿದ ಪದಾರ್ಥ ಸೇವಿಸಿ, ಅಜೀರ್ಣವಾಗಿ ತಲೆ ಸುತ್ತಿ ನೆಲಕ್ಕೆ ಬೀಳುತ್ತವೆ. ಇದನ್ನು ತಪ್ಪಿಸಲು ಕಾಳುಗಳನ್ನು ನೀರಲ್ಲಿ ನೆನೆಸಿಟ್ಟು, ಅದಕ್ಕೆ ಒಂದಷ್ಟು ಗ್ಲೂಕೋಸ್ ಮಿಕ್ಸ್ ಮಾಡಿ ಮನೆಯ ತರಾಸಿ ಮೇಲೆ ಇರಿಸಿ. ಜತೆಗೆ ಒಂದು ಬಟ್ಟಲು ನೀರನ್ನು ಇಟ್ಟರೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೆರವಾದಂತಾಗುತ್ತದೆ ಎನ್ನುತ್ತಾರೆ ಪಕ್ಷಿ ಪ್ರೇಮಿ ದಿಲೀಪ್.
ಪ್ರಾಣಿಗಳ ದೇಹದಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್!: ಒಂದು ಕಡೆ ನಗರದಲ್ಲಿರುವ ನಾಯಿ, ಹಸು, ಎಮ್ಮೆ ಮತ್ತಿತರ ಪ್ರಾಣಿಗಳು ನೀರು ಸಿಗದೆ ನಿತ್ರಾಣವಾಗುತ್ತಿವೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸೇವಿಸಿ ಪ್ರಾಣ ಕಳೆದುಕೊಳ್ಳುತ್ತಿವೆ. ನಗರದಲ್ಲಿ ದಿನದಿಂದ ದಿನಕ್ಕೆ ಹಲವು ಪ್ರಾಣಿಗಳ ದೇಹದಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಪಶುವೈದ್ಯರು ಮತ್ತು ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾವುಗಳಿಗೆ ಕುಡಿಯಲು ನೀರಿಲ್ಲ: ಈ ಹಿಂದೆ ರಸ್ತೆ ಅಕ್ಕಪಕ್ಕದಲ್ಲಿ ನೀರು ಹರಿದು ಗಟಾರ ಸೇರುತ್ತಿದ್ದರಿಂದ ಗಟಾರವನ್ನೇ ಆವಾಸ ಸ್ಥಳವಾಗಿಸಿಕೊಂಡಿದ್ದ ಹಾವುಗಳಿಗೆ ನೀರು ಸಿಗುತ್ತಿಲ್ಲ. ನಗರದಲ್ಲಿ ಕಾಂಕ್ರಿಟ್ ರಸ್ತೆಗಳು ಹೆಚ್ಚಾಗಿದ್ದು, ನೀರು ಭೂಮಿಗೆ ಸೇರದೆ ನೇರವಾಗಿ ರಾಜಕಾಲುವೆ ಸೇರುತ್ತಿದೆ. ಹೀಗಾಗಿ, ತಗ್ಗು ಪ್ರದೇಶಗಳಲ್ಲಿ ಉಷ್ಣಾಂಶ ಕೂಡ ಹೆಚ್ಚಾಗಿದ್ದು, ಕುಡಿಯಲು ನೀರು ಸಿಗದೇ ಹಾವುಗಳು ಉದ್ಯಾನ, ಖಾಲಿ ನಿವೇಶನ, ಮನೆಗಳಿಗೆ ನುಗ್ಗುತ್ತಿವೆ. ಈ ಕುರಿತು ನಿತ್ಯ 10 ರಿಂದ 12 ದೂರುಗಳು ಬಿಬಿಎಂಪಿ ಅರಣ್ಯ ಘಟಕಕ್ಕೆ ಬರುತ್ತಿವೆ ಎಂದು ವನ್ಯಜೀವಿ ಸಂರಕ್ಷಕರು ತಿಳಿಸಿದರು.
ಗ್ಲಾಸ್ ಪ್ರತಿಬಿಂಬದಿಂದ ಪಕ್ಷಿಗಳಿಗೆ ಹಾನಿ: ಬಹುಮಹಡಿ ಕಟ್ಟಡಗಳ ಹೊರ ವಿನ್ಯಾಸ ಆಕರ್ಷಕಗೊಳಿಸಲು ಗ್ಲಾಸ್ ಅಳವಡಿಸಲಾಗುತ್ತಿದೆ. ಆ ಗ್ಲಾಸ್‌ನಲ್ಲಿ ಕಟ್ಟಡಗಳ ಎದುರಿನ ಮರ ಗಿಡಗಳು ಅಥವಾ ಖಾಲಿ ಸ್ಥಳಗಳು ಪ್ರತಿಫಲನವಾಗಿ ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ಪಕ್ಷಿಗಳಿಗೆ ಗೊಂದಲ ಮೂಡಿಸುತ್ತಿವೆ. ಬಿಸಿಲಿನ ಜಳಕ್ಕೆ ಮೊದಲೇ ನಿತ್ರಾಣವಾಗಿರುವ ಪಕ್ಷಿಗಳು ಅಲ್ಲಿ ಮರವಿದೆ ಅಥವಾ ಖಾಲಿ ಜಾಗವಿದೆ ಎಂದು ವೇಗವಾಗಿ ಬಂದು ಡಿಕ್ಕಿ ಹೊಡೆದು ಗಾಯಗೊಳ್ಳುತ್ತವೆ. ಹೀಗೆ ಗಾಯಗೊಂದು ಪ್ರಾಣ ಬಿಡುವ ಪಕ್ಷಿಗಳಲ್ಲಿ ಹದ್ದುಗಳ ಸಂಖ್ಯೆ ಹೆಚ್ಚು ಎನ್ನುತ್ತಾರೆ ವನ್ಯಜೀವಿ ಪರಿಪಾಲಕ ಎ.ಪ್ರಸನ್ನ ಕುಮಾರ್.
ಇದ್ದೂ ಇಲ್ಲದಾದ ಬಿಬಿಎಂಪಿ ವನ್ಯಜೀವ ಸಂರಕ್ಷಣಾ ವಿಭಾಗ: ನಗರದಲ್ಲಿ ಹದ್ದು, ಕಾಗೆ, ಕಾಮನ್‌ಮೈನಾ, ನವಿಲು, ಮಂಗ, ಹಾವುಗಳು, ಇತ್ಯಾದಿ ವನ್ಯಜೀವಿಗಳಿಗಾಗುವ ಹಾನಿ ಕುರಿತು ಬಿಬಿಎಂಪಿ ವನ್ಯಜೀವ ಸಂರಕ್ಷಣಾ ವಿಭಾಗಕ್ಕೆ ನಿತ್ಯ 50 -60 ಕರೆಗಳು ಬರುತ್ತವೆ. ಅವುಗಳ ಪೈಕಿ 15ರಿಂದ 20 ಪ್ರಕರಣಗಳಲ್ಲಿ ಮಾತ್ರ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ವಿಭಾಗದಲ್ಲಿ ಸಿಬ್ಬಂದಿ, ಸಾಮಗ್ರಿ ಹಾಗೂ ಆ್ಯಂಬುಲೆನ್ಸ್ ಕೊರತೆ.
ಸದ್ಯ ಬಿಬಿಎಂಪಿ ಅರಣ್ಯ ವಿಭಾಗದ ವನ್ಯಜೀವಿ ಸಂರಕ್ಷಣಾ ಉಪ ವಿಭಾಗದಲ್ಲಿ ಪ್ರಾಣಿ ಪಕ್ಷಿಗಳ ಸಂರಕ್ಷಣೆಗೆಂದು 8 ಸಿಬ್ಬಂದಿ ಇದ್ದು, ವಲಯವಾರು ಪ್ರಕರಣಗಳನ್ನು ನೋಡುತ್ತಾರೆ. ವಿಭಾಗಕ್ಕೆ ಬರುವ ಕರೆಗಳ ಸಂಖ್ಯೆ ಹೆಚ್ಚಿದ್ದು, ಪ್ರಕರಣದ ತೀವ್ರತೆ ನೋಡಿಕೊಂಡು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ, ಕರೆ ಬಂದ ಕೂಡಲೇ ಸ್ಥಳ ತಲುಪಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಆ್ಯಂಬುಲೆನ್ಸ್ ಇಲ್ಲ.
ಇರುವ ಹಳೆಯ ವಾಹನಕ್ಕೆ ಚಾಲಕರಿಲ್ಲ. ಜತೆಗೆ ಪ್ರಾಣಿಗಳನ್ನು ಹಿಡಿಯಲು, ಅವುಗಳನ್ನು ಸಾಗಿಸಲು ಬೇಕಾದ ಅಗತ್ಯ ಭದ್ರತಾ ಸಲಕರಣೆಗಳೂ ಇಲ್ಲ. ಹೀಗಾಗಿ, ಇಂದಿಗೂ ದ್ವಿಚಕ್ರವಾಹನದಲ್ಲಿ ತೆರಳಿ ಪಕ್ಷಿ, ಮಂಗಗಳನ್ನು ಹಿಡಿದು ಹೋಗುತ್ತಿದ್ದಾರೆ. ಇನ್ನು ಕಳೆದ ಬಾರಿ ಬಜೆಟ್‌ನಲ್ಲಿ 25 ಲಕ್ಷ ರೂ. ಈ ಬಾರಿ ಬಜೆಟ್‌ನಲ್ಲಿ 50 ಲಕ್ಷ ರೂ. ಅನುದಾನವನ್ನು ವನ್ಯಜೀವಿ ಸಂರಕ್ಷಣೆಗೆ ಇರಿಸಿದ್ದು, ಅನುದಾನ ಬಳಕೆಯಾಗುತ್ತಿಲ್ಲ.
ಪ್ರಾಣಿ ಪಕ್ಷಿ ಹಾನಿ ಕುರಿತು ನಿತ್ಯ 50 -60 ಕರೆ ಬರುತ್ತದೆ: ನಗರದಲ್ಲಿ ವಿವಿಧ ಕಾರಣಗಳಿಂದ ತಿಂಗಳಿಗೆ 15-20 ಪ್ರಾಣಿ ಪಕ್ಷಿಗಳು ಸಾವಿಗೀಡಾಗುತ್ತಿವೆ. ನಗರದಲ್ಲಿ 23 ಜಾತಿ ಸರಿ ಸೃಪಗಳು, 53 ಜಾತಿ ಪಕ್ಷಿ ಪ್ರಭೇದಗಳಿವೆ.
ನಗರದಲ್ಲಿ ಕಾಣಿಸುವ ಪ್ರಮುಖ ಪಕ್ಷಿಗಳು: ಕಿಂಗ್ ಫಿಶರ್, ಪರ್ಪಲ್ ಹೆರಾನ್, ಇಂಡಿಯನ್ ಪಾಂಡ ಹೆರೋನ್, ಮ್ಯಾಗ್ಪೀ ರಾಬಿನ್, ಗ್ರೇ ಹೆರಾನ್, ಕ್ರೋವ್ ಫೆಸಂಟ್, ಕಾಮನ್ ಮೈನಾ.
ಬೇಸಿಗೆ ಬಿಸಿಲು ಹೆಚ್ಚಾಗಿರುವ ಕಾರಣ ಪ್ರಾಣಿ, ಪಕ್ಷಿಗಳು ನಿತ್ರಾಣಗೊಂಡು ಅಸುನೀಗುತ್ತಿವೆ. ಕುಡಿಯಲು ನೀರು ಸಿಗದೇ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಈ ಕುರಿತು ನಿತ್ಯ 50ಕ್ಕೂ ಹೆಚ್ಚು ಕರೆಗಳು ಬರುತ್ತವೆ. ಹೀಗಾಗಿ, ನಗರದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಬೇಕು.
-ಎ.ಪ್ರಸನ್ನ ಕುಮಾರ್, ವನ್ಯಜೀವಿ ಸಂರಕ್ಷಕರು, ವನ್ಯಜೀವ ಸಂರಕ್ಷಣಾ ವಿಭಾಗ
ಸಹಾಯವಾಣಿ
ಪ್ರಾಣಿ-ಪಕ್ಷಿಗಳ ರಕ್ಷಣೆಗೆ ದೂ: 080- 22221188/ 98440 37424/ 98455 39880 ಸಂಪರ್ಕಿಸಬಹುದು. 8884751916/9738007723, ಉಚಿತ ಮಣ್ಣಿನ ಕುಡಿಕೆ – 9886308281, ಅನಿಮಲ್ ಪಾರ್ ಲೈಫ್ ಸಂಪರ್ಕ: 080-26811986/28612767
* ಜಯಪ್ರಕಾಶ್ ಬಿರಾದಾರ್/ವೈ.ಹಿತೇಶ್