Advertisement

Birds ರಾಜ್ಯದ ಪಕ್ಷಿ ಪ್ರಭೇದಕ್ಕೆ ಕುತ್ತು: ಹಕ್ಕಿಗಳ ಸ್ಥಿತಿಗತಿ ವರದಿಯಲ್ಲಿ ಆತಂಕ

01:06 AM Aug 29, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಿಹಿದನಿಯ, ಬಣ್ಣದ ಪಕ್ಷಿಗಳು ವಿನಾಶದಂಚಿಗೆ ಸರಿಯುತ್ತಿವೆ. ಮಂಗಟ್ಟೆ, ಪಿಕಳಾರ, ಸಿಳ್ಳಾರ, ಶೋಲಕ್ಕಿ, ಮಿಂಚುಳ್ಳಿ ಸಹಿತ 20ಕ್ಕೂ ಹೆಚ್ಚು ಪಕ್ಷಿಗಳು ಮೌನವಾಗಿ ಕಣ್ಮರೆಯಾಗುತ್ತಿವೆ ಎಂದು “ಭಾರತದ ಹಕ್ಕಿಗಳ ಸ್ಥಿತಿಗತಿ -2023 ವರದಿ’ ಬಹಿರಂಗ ಪಡಿಸಿದೆ.

Advertisement

ದೇಶದ 30 ಸಾವಿರ ಪಕ್ಷಿ ವೀಕ್ಷಕರು ಸಂಗ್ರಹಿಸಿದ ದತ್ತಾಂಶವನ್ನು ಪರಿಷ್ಕರಿಸಿ 13 ಸರಕಾರಿ ಮತ್ತು ಸರಕಾರೇತರ ಸಂಘಟನೆಗಳ ಒಕ್ಕೂಟ “ಭಾರತದ ಪಕ್ಷಿಗಳ ಪಾಲುದಾರಿಕೆ ಸ್ಥಿತಿಗತಿ’ ಬಿಡುಗಡೆ ಮಾಡಿರುವ ವರದಿಯಲ್ಲಿ ಪಕ್ಷಿಗಳ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಲಾಗಿದೆ.

ರಾಜ್ಯದ ಮಲೆ ಮಂಗಟ್ಟೆ, ಹಳದಿ ಕೊರಳಿನ ಪಿಕಳಾರ, ನೀಲಗಿರಿ ಶೋಲಕ್ಕಿ, ಬಿಳಿ ಹೊಟ್ಟೆಯ ನೊಣಹಿಡುಕ, ನೀಲಗಿರಿ ಪಾರಿವಾಳ, ಕ್ರೌಂಚ, ಸೂಜಿಬಾಲದ ಉಲ್ಲಂಕಿ, ಮೀಸೆ ರೀವ, ಕಪ್ಪು ಕೊಕ್ಕಿನ ಚೊಟ್ಟಿರೀವ, ಸಣ್ಣ ಚುಕ್ಕೆ ಗಿಡುಗ, ಕಂದು ಗಿಡುಗ, ಪಟ್ಟಿರೆಕ್ಕೆಯ ಸೆಳೆವ, ಕರಿ ತಲೆ ಮಿಂಚುಳ್ಳಿ, ಅಗಲ ಬಾಲದ ಉಲಿಯಕ್ಕಿ ಸಹಿತ ಹಲವು ಹಕ್ಕಿಗಳನ್ನು ಗರಿಷ್ಠ ಸಂರಕ್ಷಣ ಆದ್ಯತೆಯ ಪಟ್ಟಿಗೆ ವರದಿಯಲ್ಲಿ ಸೇರಿಸಲಾಗಿದೆ.

ದೇಶದಲ್ಲಿ 178 ಪಕ್ಷಿಗಳನ್ನು ಗರಿಷ್ಠ ಸಂರಕ್ಷಣ ಕ್ರಮಗಳ ಅದ್ಯತ ಪಟ್ಟಿಗೆ ಪರಿಗಣಿಸಲಾಗಿದ್ದು, ಇದರಲ್ಲಿ 22 ಪಕ್ಷಿಗಳು ರಾಜ್ಯದಲ್ಲಿವೆ.ಪಶ್ಚಿಮ ಘಟ್ಟ, ಕರಾವಳಿಯಲ್ಲಿ ಪಕ್ಷಿ ಸಂರಕ್ಷಣೆ ವ್ಯವಸ್ಥಿತವಾಗಿ ನಡೆಯದ ಕಾರಣ ವಿನಾಶದಂಚಿನ ಪಕ್ಷಿ ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.

ಎಲ್ಲೆಲ್ಲಿ ಆತಂಕ?
ನದಿ ಮತ್ತು ಸಮುದ್ರ ತೀರ, ದಟ್ಟ ಅರಣ್ಯ, ಹುಲ್ಲುಗಾವಲು, ಅರೆ ಒಣಭೂಮಿ ಪ್ರದೇಶ ಗಳಲ್ಲಿ ವಾಸಿಸುವ ಹಕ್ಕಿಗಳ ಸಂಖ್ಯೆ ವೇಗವಾಗಿ ಕುಸಿಯುತ್ತಿದೆ. ನೆಲದಲ್ಲಿ ವಾಸಿಸುವ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮನುಷ್ಯ ಪರಿಸರಕ್ಕೆ ಹೊಂದಿಕೊಂಡು ಹೋಗುವ ಸಾಮರ್ಥ್ಯ ರೂಢಿಸಿಕೊಂಡಿರುವ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

Advertisement

ರಣಹದ್ದುಗಳ ಬಗ್ಗೆ ಆತಂಕ
ಕೆಲವು ವರ್ಷಗಳ ಹಿಂದೆ ರಣಹದ್ದುಗಳ ಸಂಖ್ಯೆ ಯಲ್ಲಿ ಕಂಡುಬರುತ್ತಿದ್ದ ತೀವ್ರ ಕುಸಿತಕ್ಕೆ ತಡೆ ಬಿದ್ದಿದ್ದರೂ ಕುಸಿತ ಮುಂದುವರಿದಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ರಣಹದ್ದು ಗಳಿಗೆ ವಿನಾಶಕಾರಿಯಾದ ಡಿಕ್ಲೊಫೆನಕ್‌ ಅನ್ನು 2008ರಲ್ಲಿ ದೇಶದಲ್ಲಿ ನಿಷೇಧಿಸಿದ ಬಳಿಕ ಕೆಲವು ಪ್ರದೇಶಗಳಲ್ಲಿ ರಣಹದ್ದುಗಳ ಅವಸಾನದ ಕುಸಿತದ ವೇಗ ಕಡಿಮೆಯಾಗಿದೆ.

ಕೋಗಿಲೆ ಕಾರುಬಾರು
ರಾಜ್ಯದಲ್ಲಿ ರಾಷ್ಟ್ರ ಪಕ್ಷಿ ನವಿಲು, ಕೋಗಿಲೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಯಲ್ಲಿ ತಿಳಿಸ ಲಾಗಿದೆ. ಈ ಪಕ್ಷಿಗಳ ಸಂಖ್ಯೆ ಹೆಚ್ಚಲು ನಿಖರ ಕಾರಣ ಪತ್ತೆಯಾಗಿಲ್ಲ. ಕಾಗೆ ಮತ್ತು ಮೈನಾ ಪಕ್ಷಿಗಳ ಜತೆ ವಿಭಿನ್ನ ಆವಾಸ ಸ್ಥಾನಗಳಲ್ಲಿ ನೆಲೆ ಸುವ ಕೋಗಿಲೆಯ ಸಾಮರ್ಥ್ಯ ಅದರ ಸಂಖ್ಯೆ ಹೆಚ್ಚಲು ಕಾರಣವಾಗಿರಬಹುದು ಎನ್ನಲಾಗಿದೆ.
ನವಿಲಿನ ಸಂಖ್ಯೆ ಹೆಚ್ಚುವುದರಿಂದ ಹಾವು ಮತ್ತು ಸರಿಸೃಪಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಲಿದೆ ಎಂಬ ಅಭಿಪ್ರಾಯ ವಿದೆ. ನವಿಲುಗಳಿಂದ ಕೃಷಿ ಹಾನಿ ಆಗುತ್ತಿರುವ ದೂರುಗಳು ಬರುತ್ತಿವೆ. ಜನರು ಮತ್ತು ಪರಿಸರ ವ್ಯವಸ್ಥೆ ಮೇಲೆ ನವಿಲುಗಳ ಸಂಖ್ಯೆ ಹೆಚÛಳದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಯಬೇಕು ಎಂದು ವರದಿ ಹೇಳಿದೆ.

ಹಕ್ಕಿಗಳ ಸಂಖ್ಯೆ ಕುಸಿಯಲು ಕಾರಣ
-ವಿದ್ಯುತ್‌ ತಂತಿಗಳು, ಪವನ ಯಂತ್ರಗಳು, ಸೌರ ಶಕ್ತಿ
-ಚೌಗು ಪ್ರದೇಶಗಳು ಕಡಿಮೆ ಆಗುತ್ತಿರುವುದು
-ಅರಣ್ಯ ನಾಶ, ಹುಲ್ಲುಗಾವಲುಗಳ ನಾಶ
-ಆಹಾರ ಕಲಬೆರಕೆ
-ಭೂ ಬಳಕೆ ಬದಲಾವಣೆ, ಕುಸಿಯುತ್ತಿರುವ ಪರಿಸರದ ಗುಣಮಟ್ಟ
-ಏಕ ವಿಧದ ಸಸ್ಯಗಳು
-ಹಕ್ಕಿ ಕಾಯಿಲೆಗಳು
-ಹಕ್ಕಿಗಳ ಕಳ್ಳಸಾಗಣೆ, ಬೇಟೆ, ದುರ್ಬಲ ಕಾನೂನುಗಳು

– ರಾಕೇಶ್‌ ಎನ್‌.ಎಸ್‌.

 

 

Advertisement

Udayavani is now on Telegram. Click here to join our channel and stay updated with the latest news.

Next