ಧಾರವಾಡ: ದಟ್ಟ ಕಾನನದಲ್ಲಿ ದೈತ್ಯನಾಗಿ ಹಾರಾಡುವ ಹಾರ್ನ್‌ಬಿಲ್ ಇಲ್ಲಿಗೆ ವಾರದ ಅತಿಥಿ, ಬಿರು ಬೇಸಿಗೆಯಲ್ಲಿ ಬೆಳವಲದಿಂದ ಮಲೆನಾಡಿನತ್ತ ನೆಗೆದು ಹಾರುವ ಹಕ್ಕಿಗಳಿಗೆ ಇದು ನಿಲ್ದಾಣ, ವರ್ಷವಿಡೀ ಇಲ್ಲಿ ಒಂದಿಲ್ಲೊಂದು ಹಣ್ಣು, ಗುಟುಕರಿಸಲು ಒಂದಿಷ್ಟು ನೀರು ಇದ್ದೇ ಇರುತ್ತದೆ. ಇದು 75 ಬಗೆಯ ಹಣ್ಣಿನ ಕಾಡು, 38 ಬಗೆಯ ಪಕ್ಷಿಗಳ ಗೂಡು. ಕಾಡಿನ ಪರಿಕಲ್ಪನೆ ಎಲ್ಲರಿಗೂ ಗೊತ್ತು. ಆದರೆ ಹಣ್ಣಿನ ಕಾಡು ಬೆಳೆಸುವ ಮತ್ತೂಂದು ಪರಿಕಲ್ಪನೆ ಈಗ ಶುರುವಾಗಿದೆ.
ಹೌದು, ಒಂದೋ ಅಥವಾ ಎರಡು ಪಕ್ಷಿಗಳನ್ನು ಪಂಜರದಲ್ಲಿ ತಂದು ಕೂಡಿ ಹಾಕಿ ಅದಕ್ಕೆ ಹಣ್ಣು ತಿನ್ನಿಸುವ ಕಾಲವೊಂದಿತ್ತು. ಆದರೆ ಒಂದು ಪಕ್ಷಿಸಂಕುಲ ಉಳಿಸಲು ನೈಸರ್ಗಿಕ ಹಣ್ಣಿನ ಕಾಡು ಬೆಳೆಸಿ ಸಾವಿರ ಸಾವಿರ ಸಂಖ್ಯೆಯಲ್ಲಿ ಪಕ್ಷಿಗಳು ಬಂದು ತಮ್ಮ ಕಲರವದಿಂದ ಗಂಧರ್ವ ಲೋಕವನ್ನೇ ಸೃಷ್ಟಿಸುವಂತೆ ಮಾಡಿದ್ದಾರೆ ನೇಚರ್ ಫ್‌ಸ್ಟ್ ಇಕೋ ವಿಲೇಜ್‌ನಲ್ಲಿ.
ಬಯಲು ಸೀಮೆಯ ಬಾಗಿಲು ಧಾರವಾಡದಿಂದ ದಟ್ಟ ಕಾನನದ ಮಧ್ಯೆ ಇರುವ ಉತ್ತರ ಕನ್ನಡದ ಹಳಿಯಾಳಕ್ಕೆ ಸಾಗುವ ಮಾರ್ಗಮಧ್ಯೆ ಸರಿಯಾಗಿ ಅರಣ್ಯ ಆರಂಭಗೊಳ್ಳುವ ಜಾಗದಲ್ಲೇ ಮೈದಳೆದಿರುವ ಇಕೋ ವಿಲೇಜ್, ಕಳೆದ ಹತ್ತು ವರ್ಷಗಳಿಂದ ವಿಭಿನ್ನ ಪರಿಸರ ಪ್ರೇಮಿ ಪ್ರಯೋಗಗಳ ಮೂಲಕ ಗಮನ ಸೆಳೆದಿದೆ. ಇದೀಗ ಪಕ್ಷಿ ಸಂಕುಲಕ್ಕೆ ಅನುಕೂಲವಾಗುವ ಹಣ್ಣಿನ ಕಾಡೊಂದನ್ನು ಸೃಷ್ಟಿಸುವ ಮೂಲಕ ಪಕ್ಷಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಹಣ್ಣಿನ ಕಾಡು?: ಧಾರವಾಡ ತಾಲೂಕಿನ ಪಶ್ಚಿಮ ಭಾಗ ಉತ್ತರ ಕನ್ನಡ ಜಿಲ್ಲೆಯ ಪೂರ್ವಭಾಗದಲ್ಲಿ ಹತ್ತಾರು ವರ್ಷಗಳ ಹಿಂದೆ ದಟ್ಟ ನೈಸರ್ಗಿಕ ಕಾಡಿತ್ತು. ಇಲ್ಲಿ ತೇಗ, ಬಿಳಿಮತ್ತಿ, ನಂದಿ, ಹೊನ್ನೆ, ಕರಿಮತ್ತಿ, ದಿಂಡಲ ಜೊತೆಗೆ ಪರಗಿ, ತಡಸಲ, ಕವಳಿ, ನೇರಳೆ, ಬಾಣ ಬಗರಿಕಾಯಿ, ಶಿವಪರಗಿ, ಹುಚ್ಚಪರಗಿ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಬೇಧದ ಹಣ್ಣಿನ ಗಿಡಮರಗಳು, ಕಂಠಿಗಳು ಇದ್ದವು. ಆದರೆ ಕಾಡು ನಾಶಗೊಂಡಂತೆ ಮತ್ತು ಸರ್ಕಾರದ ಏಕಪ್ರಬೇಧ ಗಿಡಗಳ ನೆಡುವಿಕೆಯಿಂದ ಅವೆಲ್ಲವೂ ಮಾಯವಾಗಿವೆ. ಈ ಹಣ್ಣಿನ ವೃಕ್ಷಸಂಕುಲ ನಾಶವಾದಂತೆ ಪಕ್ಷಿಗಳ ಸಂಕುಲದ ಸಂಚಾರ ಮಾರ್ಗವೂ ಇಲ್ಲಿ ಬದಲಾಗಿ ಹೋಯಿತು.
Related Articles
ಇದೀಗ ನೇಚರ್ ಫಸ್ಟ್ ಇಕೋವಿಲೇಜ್ ಇಲ್ಲಿ ನಾಶಗೊಂಡ ಹಣ್ಣಿನ ಗಿಡಗಳಿಗೆ ಪರ್ಯಾಯವಾಗಿ ಕೆಲವು ದೇಶಿ ಮತ್ತು ವಿದೇಶಿ ಮೂಲದ ಹಣ್ಣಿನ ಗಿಡಗಳನ್ನು ನೆಟ್ಟಿದ್ದು ಕಳೆದ ಮೂರು ವರ್ಷಗಳಿಂದ ಅವೆಲ್ಲವೂ ಫಲಗೊಡುತ್ತಿವೆ. ಮಾವು, ಚಿಕ್ಕು, ಪೇರಲ, ನೇರಳೆ, ಕವಳಿ, ಪರಗಿ ಜೊತೆಗೆ ಕೋಕೊಸ, ವಾಟರ್ ಆ್ಯಪಲ್, ಬರಬೋಡಸ್ ಚೆರಿ, ಸ್ಟಾರ್ ಪ್ರೂಟ್ಸ್, ಬಟರ್ ಫ್ರೂಟ್ಸ್ ಹಾಗೂ ಮೆಲ್‌ಬರಿ ಸೇರಿದಂತೆ 75ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಗಿದ್ದು, ಇದೆಲ್ಲವೂ ಈಗ ಹಣ್ಣಿನ ಕಾಡಾಗಿದೆ.
ಏರುತ್ತಿದೆ ಪಕ್ಷಿಗಳ ಸಂಖ್ಯೆ
ಹಣ್ಣಿನ ಕಾಡು ಫಲಕೊಡಲು ಶುರುಮಾಡಿದ್ದೇ ತಡ ಇಲ್ಲಿಗೆ ಭೇಟಿ ಕೊಡುವ ಪಕ್ಷಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ. ದೇಶಿ ಗುಬ್ಬಚ್ಚಿಯಿಂದ ಹಿಡಿದು ದೈತ್ಯ ಪಕ್ಷಿ ದಾಂಡೇಲಿಯನ್ನೇ ರಾಜಧಾನಿ ಮಾಡಿಕೊಂಡಿರುವ ಹಾರ್ನ್‌ಬಿಲ್ ಸಹ ಇಲ್ಲಿ ಗೂಡು ಕಟ್ಟಿದ್ದು ವಿಶೇಷವಾಗಿದೆ. ಸಾಮಾನ್ಯವಾಗಿ ಹಾರ್ನ್‌ಬಿಲ್ ಎಲ್ಲೆಂದರಲ್ಲಿ ಗೂಡು ಕಟ್ಟುವುದಿಲ್ಲ. ಅದಕ್ಕೆ ಸಮೃದ್ಧ ಹಣ್ಣಿನ ಸರಪಳಿ ಆಹಾರವಾಗಿ ಸಿಕ್ಕುವ, ಜನದಟ್ಟಣೆ ಕಡಿಮೆ ಇರುವ, ವೃಕ್ಷಸಂಗಾತ ಪರ್ಯಾಯ ಪಕ್ಷಿಗಳ ಒಡನಾಟ ಇರುವ ಸ್ಥಳ ಹುಡುಕುತ್ತದೆ. ಅಂತಹ ಹಾರ್ನ್‌ಬಿಲ್ ಹಣ್ಣಿನ ಕಾಡಿಗೆ ಅತಿಥಿಯಾಗಿದ್ದು ವಿಶೇಷ. ಇನ್ನುಳಿದಂತೆ ಬಣ್ಣದ ಗಿಳಿಗಳು,ನೀಲಿಗುಬ್ಬಿ, ಹಳದಿ ಗುಬ್ಬಿ, ಬಾಲದ ಗುಬ್ಬಿ ಸೇರಿದಂತೆ ಒಟ್ಟು 38 ಬಗೆಯ ಪಕ್ಷಿಗಳು ಹಣ್ಣಿನ ಕಾಡಿನಲ್ಲಿ ವಾಸ್ತವ್ಯ ಹೂಡಿವೆ.
ಪಕ್ಷಿ-ಕಾಡುಪ್ರಾಣಿಗಳಿಗೆ ಮೀಸಲು
ಧಾರವಾಡ ಮತ್ತು ಉತ್ತರ ಕನ್ನಡದಲ್ಲಿನ ಕಾಡುನಾಶದಿಂದಾಗಿ ಬೇಡ್ತಿ, ಕಾಳಿ, ಫಾಂಡರಿ ಕೊಳ್ಳದಲ್ಲಿನ ಅದೆಷ್ಟೋ ಪಕ್ಷಿ ಸಂಕುಲಗಳು ವಿಲ ವಿಲ ಎನ್ನುತ್ತಿವೆ. ಅದರಲ್ಲೂ ಬಯಲು ಅತಿಥಿ ಪಕ್ಷಿಗಳಿಗೆ ಬೇಸಿಗೆ ಆಹಾರ ದೇಶಿ ಹಣ್ಣಿನ ಗಿಡಮರಗಳು. ಅವೆಲ್ಲವೂ ನಾಶವಾಗಿದ್ದು, ಇದೀಗ ಪರ್ಯಾಯ ಹಣ್ಣಿನ ಕಾಡುಗಳು ಹುಟ್ಟಿಕೊಳ್ಳಬೇಕಿದೆ. ಇದೀಗ ಇಕೋ ವಿಲೇಜ್‌ನಲ್ಲಿನ ಹಣ್ಣಿನ ಕಾಡಿನ ಬೀಜಗಳು ಸುತ್ತಲಿನ ಹತ್ತಾರು ಕಿಮೀ ಕಾಡಿನಲ್ಲಿ ಪಕ್ಷಿಗಳಿಂದ ಬೀಜ ಪ್ರಸರಣಕ್ಕೆ ಮುನ್ನುಡಿ ಬರೆದಾಗಿದೆ. ಇಲ್ಲಿನ ಮಾವು ಮತ್ತು ಚಿಕ್ಕು ತೋಟಗಳಲ್ಲಿನ ಹಣ್ಣುಗಳನ್ನು ಕೀಳುವುದಿಲ್ಲ. ಬದಲಿಗೆ ಅವೆಲ್ಲವೂ ಪಕ್ಷಿ
ನಿಸರ್ಗದಿಂದ ನಾವು ಸಾಕಷ್ಟು ಪಡೆದುಕೊಂಡಿದ್ದೇವೆ. ಪಕ್ಷಿಸಂಕುಲ ಬೀಜ ಪ್ರಸರಣ ಮತ್ತು ಕಾಡು ಬೆಳೆಸುವಲ್ಲಿ ಮಾನವನಿಗೆ ಮಾಡಿದ ಉಪಕಾರ ದೊಡ್ಡದು. ಅದಕ್ಕೆ ಪ್ರತಿಯಾಗಿ ನಾನು ಪಕ್ಷಿಗಳಿಗೆ ವರ್ಷವಿಡಿ ಆಹಾರ ನೀಡುವ ವಿಭಿನ್ನ ಹಣ್ಣಿನ ಗಿಡಗಳನ್ನು ಬೆಳೆಸಿದ್ದೇನೆ. ಇದೀಗ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. –ಪಂಚಯ್ಯ ಹಿರೇಮಠ, ಇಕೋ ವಿಲೇಜ್ ಮುಖ್ಯಸ್ಥ
-ಬಸವರಾಜ ಹೊಂಗಲ್