Advertisement

ಹಕ್ಕಿಜ್ವರ: ಆರು ಸಾವಿರಕ್ಕೂ ಹೆಚ್ಚು ಕೋಳಿಗಳ ಹನನ

09:20 PM Mar 17, 2020 | Lakshmi GovindaRaj |

ಮೈಸೂರು: ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ದೃಢಪಟ್ಟ ಹಿನ್ನೆಲೆಯಲ್ಲಿ ಇತರೆಡೆಗೆ ಸೋಂಕು ಹರಡದಂತೆ ಎಚ್ಚರವಹಿಸಿರುವ ಜಿಲ್ಲಾಡಳಿತ, ಕುಂಬಾರಕೊಪ್ಪಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿನ ಕೋಳಿ ಮಾಂಸದ ಅಂಗಡಿಗಳನ್ನು ಬಂದ್‌ ಮಾಡಿಸಿದೆ.

Advertisement

ಹಕ್ಕಿಜ್ವರದಿಂದ ಕೋಳಿ ಸಾವನ್ನಪ್ಪಿದ್ದ ಕುಂಬಾರಕೊಪ್ಪಲಿನ ರಾಮಚಂದ್ರ ಅವರ ಮನೆಯನ್ನು ಕೇಂದ್ರವಾಗಿಟ್ಟುಕೊಂಡು, ಸುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿನ 17,820 ಮನೆಗಳ ಪೈಕಿ 144 ಮನೆಗಳಲ್ಲಿ ಪಕ್ಷಿಗಳನ್ನು ಸಾಕಲಾಗಿದೆ. 1252 ನಾಟಿಕೋಳಿ, ಫೌಲ್ಟ್ರಿಫಾರಂನಲ್ಲಿದ್ದ 5,100 ಬಾಯ್ಲರ್‌ ಕೋಳಿಗಳು, 254 ಸಾಕು ಪಕ್ಷಿಗಳು, 18 ಟರ್ಕಿ ಕೋಳಿಗಳು ಸೇರಿದಂತೆ 6,436 ಸಾಕುಪಕ್ಷಿಗಳನ್ನು ಹನನ ಮಾಡಲು ಗುರುತಿಸಲಾಗಿದೆ.

ನಗರದ ಹೊರ ವರ್ತುಲ ರಸ್ತೆಯ ಮೇಟಗಳ್ಳಿಯ ಅಶ್ವಿ‌ನಿ ಫೌಲ್ಟ್ರಿಫಾರಂನಲ್ಲಿರುವ ಕೋಳಿಗಳನ್ನು ಸಾಯಿಸಿ ಹೂತು ಹಾಕುವಂತೆ ಫೌಲ್ಟ್ರಿಫಾರಂ ಮಾಲೀಕರಿಗೆ ನಗರ ಪಾಲಿಕೆಯಿಂದ ಸೂಚಿಸಲಾಗಿತ್ತು. ಮಂಗಳವಾರ ನಗರಪಾಲಿಕೆ ವತಿಯಿಂದಲೇ ತೋಟಕ್ಕೆ ಜೆಸಿಬಿ ಕಳುಹಿಸಿ ಬೃಹತ್‌ ಗುಂಡಿಯನ್ನು ತೋಡಿಸಿ,

ಪಶುಪಾಲನಾ ಇಲಾಖೆ ಸಿಬ್ಬಂದಿ 5,100 ಬಾಯ್ಲರ್‌ ಕೋಳಿಗಳನ್ನು ಸಾಯಿಸಿ, ಗುಂಡಿಗೆ ಸುಣ್ಣ-ಉಪ್ಪು ಸುರಿದು, ರಾಸಾಯನಿಕವನ್ನು ಸಿಂಪಡಿಸಿದ ನಂತರ ಕೋಳಿಗಳನ್ನು ಹೂತು ಹಾಕಿದರು. ಇದೇ ರೀತಿ ಕುಂಬಾರಕೊಪ್ಪಲು ಸ್ಮಶಾನದ ಬಳಿಯಲ್ಲೂ ಸಾವಿರಾರು ಕೋಳಿಗಳನ್ನು ಸಾಯಿಸಿ, ಹೂಳಲಾಯಿತು.

ಕಣ್ಣೀರಿಟ್ಟ ಮಾಲೀಕರು: ಕಳೆದ 23 ವರ್ಷಗಳಿಂದ ಫೌಲ್ಟ್ರಿಫಾರಂ ನಡೆಸಿಕೊಂಡು ಬಂದಿರುವ ಮಾಲೀಕರಾದ ಶ್ರೀನಿವಾಸ, ರಾಮಚಂದ್ರ ಅವರು ಕೋಳಿಗಳ ಹನನ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕಣ್ಣೀರಿಟ್ಟರು. ಸೋಮವಾರ ರಾತ್ರಿ ಅಧಿಕಾರಿಗಳು ಬಂದು ಹಕ್ಕಿಜ್ವರ ಬಂದಿರುವುದರಿಂದ ನಿಮ್ಮ ಫಾರಂನಲ್ಲಿರುವ ಕೋಳಿಗಳನ್ನ ಸಾಯಿಸಬೇಕು.

Advertisement

ಬೆಳಗ್ಗೆ ನಮ್ಮದೇ ಜೆಸಿಬಿ ಬರಲಿದ್ದು, ಹಳ್ಳತೋಡಿ ಹೂತು ಹಾಕುವುದಾಗಿ ತಿಳಿಸಿ ಹೋದರು. ನಮಗೆ ನಷ್ಟವಾದರೂ ಜನರ ಹಿತ ಮುಖ್ಯ. ಜಿಲ್ಲಾಧಿಕಾರಿಗಳ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಹೀಗಾಗಿ ಸರ್ಕಾರದ ನಿಯಮವನ್ನು ಪಾಲಿಸುತ್ತಿದ್ದೇವೆ. ಈ ಕಾರ್ಯಾಚರಣೆಯಿಂದ ನಮಗೆ ಅಂದಾಜು 7 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ.

ಆದರೆ, ಪರಿಹಾರ ಕೊಡುವ ಬಗ್ಗೆ ಈವರೆಗೆ ನಮಗೆ ಯಾರೂ ಮಾಹಿತಿ ನೀಡಿಲ್ಲ. ಕೋಳಿಗಳನ್ನೇ ನಂಬಿ ನಾವು ಜೀವನ ನಡೆಸುತ್ತಿದ್ದೇವೆ. ಮುಂದಾದರೂ ನಮಗೆ ಒಂದಿಷ್ಟು ಪರಿಹಾರ ಕೊಟ್ಟರೆ ಸಹಾಯವಾಗಲಿದೆ ಎಂದು ಅಳಲು ತೋಡಿಕೊಂಡರು.

ಕೋಳಿ ಮಾಂಸದ ಅಂಗಡಿಗಳ ಬಂದ್‌ : ಕುಂಬಾರಕೊಪ್ಪಲು, ಮೇಟಗಳ್ಳಿ, ಹೆಬ್ಟಾಳು ಮುಖ್ಯರಸ್ತೆ, ಸೂರ್ಯ ಬೇಕರಿ, ಮಹದೇಶ್ವರ ಬಡಾವಣೆಯಲ್ಲಿರುವ ಕೋಳಿಮಾಂಸದ ಅಂಗಡಿಗಳನ್ನು ಬಂದ್‌ ಮಾಡಿಸಲಾಯಿತು. ಮಹಾ ನಗರಪಾಲಿಕೆ ಸಿಬ್ಬಂದಿ, ಕೋಳಿ ಮಾಂಸದ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡುವ ಜತೆಗೆ ಮೈಕ್‌ನಲ್ಲಿ ಪ್ರಚಾರ ಮಾಡಿದ್ದರು.

ಹೀಗಾಗಿ ಈ ಭಾಗದ ಕೋಳಿ ಮಾಂಸದ ಅಂಗಡಿಗಳ ಬಂದ್‌ ಮಾಡಲಾಗಿತ್ತು. ಆದರೆ, ಮಾಂಸದ ಅಂಗಡಿಗಳು ಎಂದಿನಂತೆ ಬಾಗಿಲು ತೆರೆದಿದ್ದರಿಂದ ಕುರಿ-ಮೇಕೆ ಮಾಂಸ ಹಾಗೂ ಮೀನು ಅಂಗಡಿಗಳಲ್ಲಿ ಬೇಡಿಕೆ ಹೆಚ್ಚಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next