Advertisement

ಪ್ರೇರಣೆಯಾಗಿದ್ದ ಜ.ರಾವತ್‌ 

02:45 PM Dec 10, 2021 | Team Udayavani |

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ವಿವಿಧ ಆವಿಷ್ಕಾರ ಮತ್ತು ಉಪಕರಣಗಳ ತಯಾರಿಕೆ ಹಾಗೂ ಅದನ್ನು ಖಾಸಗಿ ವಲಯಕ್ಕೆ ವರ್ಗಾವಣೆಯಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಜ. ಬಿಪಿನ್‌ ರಾವತ್‌ ಪ್ರೇರಣೆಯಾಗಿದ್ದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ಡಿಆರ್‌ಡಿಒ ಮತ್ತು ಡಿಎಫ್ಆರ್‌ಎಲ್‌ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳಿಗೆ ಆಹಾರ ಹಾಗೂ ಲಾಜಿಸ್ಟಿಕ್‌ ನೆರವು ಕುರಿತ ವಸ್ತುಪ್ರದರ್ಶನ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಭಾರತವನ್ನು ಆತ್ಮ ನಿರ್ಭರ ಮಾಡುವ ಹಂಬಲ ರಾವತ್‌ ಅವರಲ್ಲಿತ್ತು.

ಈ ನಿಟ್ಟಿನಲ್ಲಿ ಸ್ಥಳೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆ ಪ್ರಾರಂಭಿಸಿದರು. ಈ ಮೂಲಕ ಡಿಆರ್‌ ಡಿಒ ಹಾಗೂ ಹಲವಾರು ಸಂಸ್ಥೆಗಳು ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಪ್ರೇರಣೆಯಾದರು ಎಂದರು. ಆವಿಷ್ಕಾರ, ಉಪಕರಣಗಳನ್ನು ತಯಾರು ಮಾಡಿ ಸೇನೆಗಳಿಗೆ ಸರಬರಾಜು ಮಾಡುವುದಷ್ಟೇ ಅಲ್ಲ, ಖಾಸಗಿ ವಲಯದಲ್ಲಿಯೂ ಆ ಜ್ಞಾನವನ್ನು ವರ್ಗಾಯಿಸಿ ಬಹಳ ಪ್ರೋತ್ಸಾಹ ನೀಡಿದ್ದರು.

ಇದನ್ನೂ ಓದಿ:- ಅಪಾಯಕಾರಿ ವಲಯದಲ್ಲಿದೆ ಈ ಸರ್ಕಾರಿ ಶಾಲೆ!

ಮೂರೂ ಪಡೆಯ ಮುಖ್ಯಸ್ಥರಾಗಿದ್ದ ಜ.ಬಿಪಿನ್‌ ರಾವತ್‌, ಯುದ್ಧಭೂಮಿಯಲ್ಲಿ ಹೊಸ ವಿಧಾನಗಳನ್ನು ಕಂಡುಕೊಂಡು ಅನುಷ್ಠಾನವನ್ನೂ ಮಾಡಿದರು. ಅವರ ದುರ್ಮರಣದಿಂದ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದೆ ಎಂದು ಕಂಬನಿ ಮಿಡಿದರು. ಭಾರತದ ಸುರಕ್ಷತೆ ಬಗ್ಗೆ ಹಿಂದೆಂದೂ ತೆಗೆದುಕೊಂಡಿರದ ಹಲವಾರು ದಿಟ್ಟ ನಿಲುಗಳನ್ನು ಪ್ರದರ್ಶಿಸಿದ್ದ ಅವರು ಚೀನಾ, ಭಾರತದ ಗಡಿಯಲ್ಲಿ ನಡೆದ ಚಕಮಕಿಯಲ್ಲಿ ದೇಶವನ್ನು ಬಹಳ ಗಟ್ಟಿಯಾಗಿ ನಿಲ್ಲಿಸಿ, ಚೀನಾವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

Advertisement

ಅವರ ನಾಯಕತ್ವ ಮುಂದಿನ ದಿನಗಳಲ್ಲಿ ನಮಗೆ ಬಹಳ ಅವಶ್ಯಕವಾಗಿತ್ತು ಎಂದರು. ಅವರ ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು. ಮುಂದಿನ ಪೀಳಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರ ಕಾರ್ಯಕ್ರಮಗಳನ್ನು ಮುಂದುವರಿಸಿ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ತಿಳಿಸಿದರು.

ಕರ್ನಾಟಕದೊಂದಿಗೆ ಜ.ರಾವತ್‌ ಅವಿನಾಭಾವ ಸಂಬಂಧ ಹೊಂದಿದ್ದರು. ಕೊಡಗಿನೊಂದಿಗೆ ವಿಶೇಷ ಸಂಬಂಧ ಅವರಿಗಿತ್ತು. ಜನರಲ್‌ ಕಾರಿಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರ ಬಗ್ಗೆ ಅಪಾರ ಗೌರವವಿತ್ತು. ಅವರ ಶೌರ್ಯವನ್ನು ಪದೇ ಪದೇ ಹೇಳುತ್ತಿದ್ದರು. ಇಲ್ಲಿನ ಜನರು ಹಾಗೂ ಸೈನಿಕರ ಬಗ್ಗೆ ಪ್ರೀತಿ ಹೊಂದಿದ್ದರು ಎಂದು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next