Advertisement

ಯೋಧರ ನಾಡಿನ ಮೇಲಿನ ಅಭಿಮಾನ; ಕೊಡಗಿಗೆ 3 ಬಾರಿ ಬಿಪಿನ್‌ ರಾವತ್‌ ಭೇಟಿ

01:39 AM Dec 09, 2021 | Team Udayavani |

ಮಡಿಕೇರಿ: ದೇಶದ ಸೇನಾಕ್ಷೇತ್ರಕ್ಕೆ ಅತೀ ಹೆಚ್ಚು ಸೈನಿಕರನ್ನು ನೀಡಿರುವ ಹೆಗ್ಗಳಿಕೆಯ ಕೊಡಗು ಜಿಲ್ಲೆಗೆ ಭಾರತದ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ 2016, 2017 ಮತ್ತು 2020ರಲ್ಲಿ ಭೇಟಿ ನೀಡುವ ಮೂಲಕ ಯೋಧರ ನಾಡಿನ ಮೇಲಿನ ಅಭಿಮಾನವನ್ನು ತೋರಿದ್ದರು.

Advertisement

ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್‌ ಕೆ.ಎಸ್‌. ತಿಮ್ಮಯ್ಯ ಅವರ ಬಗ್ಗೆ ವಿಶೇಷ ಗೌರವ ಹೊಂದಿದ್ದ ರಾವತ್‌ ಕೊಡಗಿಗೆ ಬರುವ ಯಾವುದೇ ಅವಕಾಶ ತಪ್ಪಿಸಿಕೊಳ್ಳುತ್ತಿರಲಿಲ್ಲ. ಬಿಟ್ಟಂಗಾಲದಲ್ಲಿ 2016ರಲ್ಲಿ ನಡೆದ ಆಮ್ಡ್ ಫೋರ್ಸಸ್‌ ಗಾಲ್ಫ್ ಪಂದ್ಯಾವಳಿ ಉದ್ಘಾಟಿಸಲು ಮತ್ತು ಮಡಿಕೇರಿಯಲ್ಲಿ ನಡೆದ ಸೈನಿಕರ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಂದು ಲೆಫ್ಟಿನೆಂಟ್‌ ಜನರಲ್‌ ಹುದ್ದೆಯಲ್ಲಿದ್ದ ರಾವತ್‌ ಜಿಲ್ಲೆಗೆ ಪ್ರಥಮ ಭೇಟಿ ನೀಡಿದ್ದರು.

2017ರಲ್ಲಿ ಅಂದಿನ ಸೇನಾ ಮುಖ್ಯಸ್ಥ ಜನರಲ್‌ ದಲ್ಬಿàರ್‌ ಸಿಂಗ್‌ ಜತೆಗೆ ಆಗಮಿಸಿದ್ದರು. ಆಗ ಅವರು ಜ| ತಿಮ್ಮಯ್ಯ ಮ್ಯೂಸಿಯಂ ಸ್ಥಾಪನೆಗೆ ಅಗತ್ಯ ನೆರವನ್ನು ನೀಡುವ ಆಶ್ವಾಸನೆ ನೀಡಿದ್ದಲ್ಲದೆ, ಅದರಂತೆ ನಡೆದುಕೊಂಡಿದ್ದರು.
ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆವರಣದಲ್ಲಿ ಸ್ಥಾಪಿಸಲಾಗಿದ್ದ ಫೀ|ಮಾ| ಕೆ.ಎಂ. ಕಾರ್ಯಪ್ಪ ಮತ್ತು ಜ| ತಿಮ್ಮಯ್ಯ ಪ್ರತಿಮೆಗಳ ಅನಾವರಣ ಸಮಾರಂಭಕ್ಕೆ ಜನರಲ್‌ ಬಿಪಿನ್‌ ರಾವತ್‌ ಆಗಮಿಸಿ ಮಹಾನ್‌ ಸೇನಾನಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಿದ್ದರು.

ಇದನ್ನೂ ಓದಿ:ಪ್ರಧಾನಮಂತ್ರಿ ಆವಾಜ್‌ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆ

ಅನಂತರದ ದಿನಗಳಲ್ಲಿ ಫೀ|ಮಾ| ಕಾರ್ಯಪ್ಪ ಮತ್ತು ಜ| ತಿಮ್ಮಯ್ಯ ಫೋರಂ ಪದಾಧಿಕಾರಿಗಳು ರಾವತ್‌ ಅವರನ್ನು ಸಂಪರ್ಕಿಸಿ ಜ| ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆತರುವಂತೆ ಮನವಿ ಮಾಡಿದ್ದರು. ರಾವತ್‌ ಸಹಕಾರದಿಂದ 2021ರಲ್ಲಿ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಆಗಮಿಸಿದ್ದರು. ರಾವತ್‌ ಜತೆಯಲ್ಲಿದ್ದರು.

Advertisement

ಕೊಡಗಿನ ಪೀಚೆ ಕತ್ತಿ ಕೊಡುಗೆ
ಬಿಪಿನ್‌ ರಾವತ್‌ ಅವರ ತಂದೆ ಲಕ್ಷ್ಮಣ ಸಿಂಗ್‌ ರಾವತ್‌ ಮತ್ತು ಕೊಡಗಿನ ಲೆಫ್ಟಿನೆಂಟ್‌ ಜನರಲ್‌ ಬಿ.ಸಿ. ನಂದ ಸಮಕಾಲೀನರು. ಈ ಹಿನ್ನೆಲೆಯಲ್ಲಿ ರಾವತ್‌ ಕೊಡಗಿಗೆ ಆಗಮಿಸಿದ ಸಂದರ್ಭ ಅವರಿಗೆ ಬಿ.ಸಿ. ನಂದ ಅವರು ಕೊಡವರ ಸಾಂಪ್ರದಾಯಿಕ ಪೀಚೆಕತ್ತಿಯನ್ನು ನೀಡಿ “ಈ ಪೀಚೆ ಕತ್ತಿ ತಂದೆ ಮಗನಿಗೆ ನೀಡುವಂಥದ್ದು. ನಿನ್ನ ತಂದೆ ಮತ್ತು ನಾನು ಸಮಕಾಲೀನರಾಗಿರುವುದರಿಂದ ತಂದೆಯ ಸ್ಥಾನದಲ್ಲಿರುವ ನಾನು ನಿನಗೆ ಪೀಚೆಕತ್ತಿ ನೀಡುತ್ತಿದ್ದೇನೆ’ ಎಂದು ಹೇಳಿರುವ ಹೃದಯ ಸ್ಪರ್ಶಿ ಘಟನೆಯನ್ನು ನಿವೃತ್ತ ಮೇಜರ್‌ ಬಿ.ಎ. ನಂಜಪ್ಪ ನೆನಪಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next