Advertisement

ಅಕಾಡೆಮಿಯ ಸಾಧನೆ ಇತರರಿಗೆ ಮಾದರಿ: ಸಂಸದ ಗೋಪಾಲ್‌ ಶೆಟ್ಟಿ

11:15 AM Oct 18, 2022 | Team Udayavani |

ಮುಂಬಯಿ: ಪ್ರತಿಷ್ಠಿತ ಬಿಪಿನ್‌ ಫುಟ್‌ಬಾಲ್‌ ಅಕಾಡೆಮಿಯ 34ನೇ ವಾರ್ಷಿಕ ಬಿಪಿನ್‌ ಉಚಿತ ಫುಟ್‌ಬಾಲ್‌ ತರಬೇತಿ ಶಿಬಿರವನ್ನು ಅತಿಥಿಗಳಾದ ಬಿಜೆಪಿ ಸಂಸದ ಗೋಪಾಲ್‌ ಶೆಟ್ಟಿ ಹಾಗೂ ಭಾರತದ ಮಾಜಿ ಫುಟ್‌ಬಾಲ್‌ ಆಟಗಾರ, ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಗಾಡ್‌ ಫ್ರೆ ಪೆರೇರಾ ಅವರು ಅ. 17ರಂದು ಉದ್ಘಾಟಿಸಿ ಶುಭ ಹಾರೈಸಿದರು.

Advertisement

ಬೊರಿವಲಿಯ ಜೋಗರ್ಸ್‌ ಪಾರ್ಕ್‌ ಫುಟ್‌ಬಾಲ್‌ ಗ್ರೌಂಡ್‌ನ‌ಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಘಾಟನ ಕಾರ್ಯಕ್ರಮದಲ್ಲಿ ಸಂಸದ ಗೋಪಾಲ್‌ ಶೆಟ್ಟಿ ಮಾತನಾಡಿ, ಎಳವೆಯಿಂದಲೇ ಮಕ್ಕಳಿಗೆ ಕ್ರೀಡೆ ಬಗ್ಗೆ ಅರಿವು ಮೂಡಿಸಿ ಅವರನ್ನು ಪ್ರೋತ್ಸಾಹಿಸಬೇಕು. ಇಂತಹ ಪಂದ್ಯಾವಳಿಗಳಿಗೆ ಸಹಕರಿ ಸಲು ಉತ್ಸುಕನಾಗಿದ್ದೇನೆ. ಸರಕಾರವು ಕೂಡ ಇಂತಹ ಕ್ರೀಡೆಯನ್ನು ಬೆಳೆಸಲು ವಿಶ್ವದರ್ಜೆಯ ಮೂಲ ಸೌಕರ್ಯ ಒದಗಿ ಸುತ್ತಿದೆ. ಮಕ್ಕಳು ಎಳವೆಯಲ್ಲಿಯೇ ಕ್ರೀಡೆ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶದ ಕೀರ್ತಿ ಎತ್ತಿ ಹಿಡಿಯಬೇಕು. ಫುಟ್‌ಬಾಲ್‌ ಆಡುವುದರಿಂದ ದೇಹದ ಫಿಟ್ನೆಸ್‌ ವೃದ್ಧಿ ಜತೆಗೆ ಒಂದು ಶ್ರೇಷ್ಠ ತಂಡವನ್ನು ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಿಪಿನ್‌ ಫುಟ್‌ಬಾಲ್‌ ಅಕಾಡೆಮಿಯ ಕ್ರೀಡಾ ಕ್ಷೇತ್ರದ ಸಾಧನೆ ಅಪಾರವಾಗಿದೆ. ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಟೂರ್ನಿಗಳಲ್ಲಿ ಪಾಲ್ಗೊಂಡು ರಾಷ್ಟ್ರೀಯ ತಂಡದಲ್ಲಿ ಆಡುವಂತಾಗಬೇಕೆಂದು ಎಂದು ತಿಳಿಸಿದರು.

ಗಾಡ್‌ ಫ್ರೆ ಪೆರೇರಾ ಮಾತನಾಡಿ, ಭಾರತದ ಫುಟ್‌ಬಾಲ್‌ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿದ್ದು, ಇದಕ್ಕೆ ಸ್ಥಾನೀಯ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಎಐಎಫ್‌ ಎಫ್‌ನಂತಹ ಹಲವಾರು ಸಂಘ-ಸಂಸ್ಥೆಗಳು ಫುಟ್‌ಬಾಲ್‌ನ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿವೆ. ಆಟಗಾರರು ಉತ್ತಮ ಕೌಶಲಗಳನ್ನು ತಮ್ಮಲ್ಲಿ ವೃದ್ಧಿಸಿಕೊಂಡು ಶ್ರೇಷ್ಠ ಪ್ರದರ್ಶನ ನೀಡಬೇಕು. ಅತ್ಯುತ್ತಮವಾಗಿ ಆಡುವುದಲ್ಲದೆ ಫಿಟ್ನೆಸ್‌ ಕೂಡ ಕಾಪಾಡಿಕೊಳ್ಳುವುದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

16ರ ಹರೆಯದ ಬಾಲಕ – ಬಾಲಕಿಯರಿಗಾಗಿ ನಡೆಯುತ್ತಿರುವ ಉಚಿತ ಫುಟ್‌ಬಾಲ್‌ ತರಬೇತಿ ಶಿಬಿರವು ಅ. 17ರಂದು ಆರಂಭವಾಗಿದ್ದು, ಡಿ. 31 ಹಾಗೂ 2023ರ ಜ. 1ರಂದು ನಡೆಯಲಿರುವ ಲೀಗ್‌ ಹಂತದ ನಾಕೌಟ್‌ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. 2007ರ ಜ. 1ರ ಬಳಿಕ ಜನಿಸಿದ ಬಾಲಕ ಮತ್ತು ಬಾಲಕಿಯರಿಗೆ ಈ ಶಿಬಿರಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ಬೊರಿವಲಿ, ವಸಾಯಿ, ವಿರಾರ್‌, ಕಲ್ಯಾಣ್‌, ಕುರ್ಲಾ, ಉಲ್ಲಾಸ್‌ ನಗರ, ಕೊಲಬಾ, ಅಂಧೇರಿ ಮತ್ತು ಮದನ್‌ಪುರ ಹೀಗೆ 8 ಕೇಂದ್ರಗಳಲ್ಲಿ ಶಿಬಿರ ನಡೆಯುತ್ತಿದೆ. ಸಮಾರಂಭದಲ್ಲಿ ಮುನಿಸಿಪಲ್‌ ಮಾಜಿ ಕೌನ್ಸಿಲರ್‌ ಹರೀಶ್‌ ಚೆಡ್ಡಾ ಉಪಸ್ಥಿತರಿದ್ದರು.

ಗಾಡ್‌ ಫ್ರೆ ಪೆರೇರಾ ಅವರು ಆಟಗಾರರಿಗೆ ಉಪಯುಕ್ತ ಸಲಹೆ ನೀಡಿದರು. ಮಹಾರಾಷ್ಟ್ರದ ಮಾಜಿ ಆಟಗಾರ ಹಾಗೂ ಬೊರಿವಲಿ ಕೇಂದ್ರದ ತರಬೇತುದಾರ ಫ್ರಾನ್ಸಿಸ್‌ ನ್ಯೂಸ್‌ ಭಾಗವಹಿಸಿದ್ದರು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.

Advertisement

ಸಂಸ್ಥಾಪಕ ಸುರೇಂದ್ರ ಕರ್ಕೇರ : ಮೂಲತಃ ಉಡುಪಿ ಜಿಲ್ಲೆಯ ಕಾಪು ಪೊಲಿಪುವಿನವರಾದ ಸುರೇಂದ್ರ ಕರ್ಕೇರ ಅವರು ಬಿಪಿನ್‌ ಫ‌ುಟ್‌ಬಾಲ್‌ ಅಕಾಡೆಮಿಯ ಸಂಸ್ಥಾಪಕರಾಗಿದ್ದು, ಅಕಾಲಿಕವಾಗಿ ಮರಣ ಹೊಂದಿದ ತನ್ನ ಪುತ್ರನ ನೆನಪಿನಲ್ಲಿ ಅಕಾಡೆಮಿಯನ್ನು ಸ್ಥಾಪಿಸಿ ಅದರ ಮುಖಾಂತರ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಫ‌ುಟ್‌ಬಾಲ್‌ ತರಬೇತಿ ನೀಡುತ್ತಿದ್ದಾರೆ. ಮಹಾರಾಷ್ಟ್ರ ಫ‌ುಟ್‌ಬಾಲ್‌ ಕ್ಷೇತ್ರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ ಖ್ಯಾತಿ ಸುರೇಂದ್ರ ಕರ್ಕೇರರಿಗಿದೆ. ಮಹಾರಾಷ್ಟ್ರ ರಾಜ್ಯ ಫ‌ುಟ್‌ಬಾಲ್‌ ಸಂಸ್ಥೆಯ ಆಯ್ಕೆಗಾರರಾಗಿ, ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸಿರುವ ಇವರು, ಮುಂಬಯಿ ಫ‌ುಟ್‌ಬಾಲ್‌ ಅಸೋಸಿಯೇಶನ್‌ನ ಎಕ್ಸಿಕ್ಯುಟಿವ್‌ ಸಮಿತಿಯ ಸದಸ್ಯರಾಗಿ ಹಾಗೂ ಮಹಾರಾಷ್ಟ್ರ ವುಮೆನ್ಸ್‌ ಫ‌ುಟ್‌ಬಾಲ್‌ ಸಂಸ್ಥೆಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಪ್ರಥಮ ಉಚಿತ ಫ‌ುಟ್‌ಬಾಲ್‌ ತರಬೇತಿ ಶಿಬಿರವನ್ನು ಆರಂಭಿಸಿದ ಸುರೇಂದ್ರ ಕರ್ಕೇರ ಅವರು ಇದರ ಯಶಸ್ಸಿನ ಬಳಿಕ ಪ್ರತೀ ವರ್ಷವೂ ಉಚಿತ ತರಬೇತಿ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next