Advertisement

ಮಂದಾರ: ತ್ಯಾಜ್ಯ ತೆರವಿಗೆ ರಾಜ್ಯ ಸರಕಾರ ಅಂಕಿತ

03:22 AM Mar 11, 2022 | Team Udayavani |

ಮಹಾನಗರ: ಪಚ್ಚನಾಡಿಯ ಮಂದಾರ ಪ್ರದೇಶದಲ್ಲಿ ಎರಡೂವರೆ ವರ್ಷಗಳ ಹಿಂದೆ ಉಂಟಾದ ತ್ಯಾಜ್ಯ ದುರಂತದಿಂದ ಶೇಖರಣೆಗೊಂಡ ಸುಮಾರು 9 ಲಕ್ಷ ಟನ್‌ ತ್ಯಾಜ್ಯವನ್ನು ಕರಗಿಸಲು “ಬಯೋಮೈನಿಂಗ್‌’ ವ್ಯವಸ್ಥೆ ಅಂತಿಮ ಗೊಂಡಿದ್ದು, ಈ ಯೋಜನೆ ಆರಂಭಕ್ಕೆ ರಾಜ್ಯ ಸರಕಾರದಿಂದ ಅಂಕಿತ ದೊರಕಿದೆ.

Advertisement

ಪಚ್ಚನಾಡಿಯಲ್ಲಿ ಬಯೋಮೈನಿಂಗ್‌ ವ್ಯವಸ್ಥೆ ಮೂಲಕ ಕಸ ಕರಗಿಸಲು ಟೆಂಡರ್‌ ವಹಿಸಿಕೊಳ್ಳಲು ಒಟ್ಟು ಮೂರು ಸಂಸ್ಥೆಗಳು ಮುಂದೆ ಬಂದಿದ್ದವು. ಈ ಪಟ್ಟಿಯನ್ನು ಮಹಾನಗರ ಪಾಲಿಕೆಯು ತಾಂತ್ರಿಕ ಮೌಲ್ಯಮಾಪನಕ್ಕಾಗಿ ರಾಜ್ಯ ಸರಕಾರಕ್ಕೆ ಕಳುಹಿಸಿತ್ತು. ಸರಕಾರದ ಮಟ್ಟದಲ್ಲಿ ತಾಂತ್ರಿಕ ಮೌಲ್ಯಮಾಪನ, ಹಣಕಾಸಿನ ವರದಿಯನ್ನು ಪರಿಗಣಿಸಿ ನ್ಯಾಕ್‌ ಆಫ್‌ ಎಂಬ ಸಂಸ್ಥೆಗೆ, ಸುಮಾರು 56 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅಂತಿಮಗೊಂಡಿದೆ. ಈ ಸಂಸ್ಥೆಯಿಂದ ಪಚ್ಚನಾಡಿಯಲ್ಲಿ ಈಗಾಗಲೇ ಪ್ರಾಥಮಿಕ ಹಂತದ ಕೆಲಸ ಆರಂಭಗೊಂಡಿದ್ದು, ಕಸ ರಾಶಿ ಬಿದ್ದಿರು ವಂತಹ ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ಸರ್ವೇ ಕಾರ್ಯ ನಡೆಯಲಿದೆ. ಬಳಿಕ ಯಂತ್ರಗಳ ಜೋಡಣೆ ನಡೆದು ಈ ಯೋಜನೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳ ಲಾಗುತ್ತದೆ. ಯೋಜನೆ ಆರಂಭಗೊಂಡು ನಾಲ್ಕು ವರ್ಷಗಳ ಕಾಲ ಟೆಂಡರ್‌ ಅವಧಿ ಇರಲಿದೆ. ಪಚ್ಚನಾಡಿ ತ್ಯಾಜ್ಯರಾಶಿ ಜರಿದು ಮಂದಾರ ಪ್ರದೇಶವನ್ನು ತ್ಯಾಜ್ಯಮಯವಾಗಿ ಬದಲಾಯಿಸಿದ ಘಟನೆಗೆ ಸುಮಾರು ಎರಡೂವರೆ ವರ್ಷ ಪೂರ್ಣಗೊಂಡಿದೆ. ತ್ಯಾಜ್ಯ ಹರಡಿರುವ ಪ್ರದೇಶ ಇನ್ನೂ ತ್ಯಾಜ್ಯದಲ್ಲಿಯೇ ಮುಳುಗಿದೆ.

ಎರಡೂವರೆ ವರ್ಷಗಳ ಹಿಂದೆ ಆಗಸ್ಟ್‌ ಮೊದಲ ವಾರದಲ್ಲಿ ಪಚ್ಚನಾಡಿಯ ತ್ಯಾಜ್ಯರಾಶಿ ಜರಿದು ಮಂದಾರ ಭಾಗಕ್ಕೆ ಕುಸಿದು ಸುಮಾರು 2 ಕಿ.ಮೀ.ನಷ್ಟು ದೂರಕ್ಕೆ ಸರಿದಿತ್ತು.ಇಲ್ಲಿನ ಸುಮಾರು 27 ಮನೆಯವರಿಗೆ ಪ್ರತ್ಯೇಕ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ.

ಯಾವ ವಿಧಾನ ?
ಗುಡ್ಡೆಯಂತೆ ಬೆಳೆದಿರುವ ಡಂಪಿಂಗ್‌ ಯಾರ್ಡ್‌ಗಳ ತ್ಯಾಜ್ಯವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ “ಬಯೋಮೈನಿಂಗ್‌’ ಎನ್ನಲಾಗುತ್ತದೆ. ಈ ವಿಧಾನದಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ. ಪ್ರಕೃತಿಯಲ್ಲಿ ಕರಗುವ ಮತ್ತು ಕರಗ ದಿರುವ ತ್ಯಾಜ್ಯವನ್ನು ಬೇರ್ಪಡಿಸಿ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ನೀಡಬಹುದು. ಅದೇ ರೀತಿ, ಪ್ಲಾಸ್ಟಿಕ್‌, ರಬ್ಬರ್‌, ಗಾಜು ಮರು ಬಳಕೆಗಾಗಿ ಸಿಮೆಂಟ್‌ ಕಾರ್ಖಾನೆಗೆ ನೀಡಬಹುದು. ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತದೆ. ಉಳಿದ ತ್ಯಾಜ್ಯ ನಾಶಪಡಿ ಸಲಾಗುತ್ತದೆ. ಇನ್ನು, ಮರಳನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಅವಕಾಶ ಇದೆ.

ಅನುಮತಿ ದೊರಕಿದೆ
ಪಚ್ಚನಾಡಿ ತ್ಯಾಜ್ಯ ದುರಂತ ಪ್ರದೇಶದಲ್ಲಿ ಬಯೋಮೈನಿಂಗ್‌ ಮುಖೇನ ಕಸ ವಿಲೇವಾರಿ ವಿಧಾನ ಆರಂಭಿಸಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಈ ಆಧಾರದಲ್ಲಿ ರಾಜ್ಯ ಸರಕಾರದಿಂದ ಅನುಮತಿ ಪತ್ರವೂ ಬಂದಿದೆ. ಟೆಂಡರ್‌ ವಹಿಸಿಕೊಂಡ ಸಂಸ್ಥೆಯು ಈಗಾಗಲೇ ಪ್ರಾಥಮಿಕ ಹಂತದ ಕೆಲಸ ಆರಂಭಿಸಿದೆ
-ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತರು

Advertisement
Advertisement

Udayavani is now on Telegram. Click here to join our channel and stay updated with the latest news.

Next