Advertisement

ಜಿಲ್ಲಾಸ್ಪತ್ರೆಯಲ್ಲಿ ಆಹಾರ ತ್ಯಾಜ್ಯದಿಂದ ಬಯೋಗ್ಯಾಸ್‌

10:38 PM Jul 02, 2019 | sudhir |

ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆಹಾರದ ತ್ಯಾಜ್ಯದಿಂದ ಬಯೋಗ್ಯಾಸ್‌ ಉತ್ಪಾದಿಸುವ ಘಟಕ ಶೀಘ್ರ ಆರಂಭಗೊಳ್ಳಲಿದೆ. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದೆ. ವಿಶೇಷವೆಂದರೆ ದೇವಸ್ಥಾನವೊಂದು ಮೊದಲ ಬಾರಿಗೆ ಎಂಬಂತೆ ಇಂಥ ಮಾದರಿ ಕಾರ್ಯಕ್ಕೆ ನೆರವಾಗಿದೆ.

Advertisement

ಏನಿದು ಯೋಜನೆ?

ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಒಟ್ಟು 350ರಷ್ಟು ಮಂದಿ ರೋಗಿಗಳಿಗೆ ಉಚಿತ ಊಟ, ಬೆಳಗ್ಗೆ ಉಚಿತವಾಗಿ ಉಪಾಹಾರ ನೀಡಲಾಗುತ್ತದೆ. ಇದರಲ್ಲಿ ಮಿಕ್ಕುಳಿಯುವ ಆಹಾರ ಪದಾರ್ಥ, ಅಡುಗೆಗೆ ಬಳಸಿದ ತರಕಾರಿ ಮತ್ತಿತರ ತ್ಯಾಜ್ಯಗಳು, ಮಾತ್ರವಲ್ಲದೆ ಆಸ್ಪತ್ರೆ ಪಕ್ಕದಲ್ಲೇ ಇರುವ ನರ್ಸಿಂಗ್‌ ತರಬೇತಿ ಸಂಸ್ಥೆ, ಆಸ್ಪತ್ರೆ ಕ್ಯಾಂಟೀನ್‌, ಹೊರಗಿನಿಂದ ರೋಗಿಗಳಿಗೆ ತರುವ ಆಹಾರದಿಂದ ಉಂಟಾಗುವ ತ್ಯಾಜ್ಯ ಇವೆಲ್ಲವೂ ಸೇರಿದಂತೆ ದಿನಕ್ಕೆ ಸರಿಸುಮಾರು 150 ಕೆ.ಜಿ ತ್ಯಾಜ್ಯ ಸಂಗ್ರಹಿಸಿ ಅದರಿಂದ ಅಡುಗೆ ಅನಿಲ ಉತ್ಪಾದಿಸಿ ಆಸ್ಪತ್ರೆಯ ಅಡುಗೆ ಕೋಣೆಯಲ್ಲಿ ಅದನ್ನು ಬಳಸುವ ಯೋಜನೆ ಇದು.

7 ಲ.ರೂ. ವೆಚ್ಚ

ಕಟಪಾಡಿಯ ವಿಜಯ ಇಂಡಸ್ಟ್ರೀಸ್‌ನವರ ತಾಂತ್ರಿಕ ನಿರ್ದೇಶನದಲ್ಲಿ ವರದಿ ತಯಾರಿಸಲಾಗಿದ್ದು ಇದಕ್ಕೆ ಒಟ್ಟು 7 ಲ.ರೂ. ವೆಚ್ಚ ತಗಲಲಿದೆ. ಈ ಮೊತ್ತವನ್ನು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದವರೇ ನೀಡಿದ್ದಾರೆ.

Advertisement

ಒಂದೆರಡು ತಿಂಗಳಲ್ಲಿ ಕಾರ್ಯಾರಂಭ

ಪ್ರಸ್ತುತ ಈ ಘಟಕದ ಕಾಮಗಾರಿಗಾಗಿ ಇ-ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಈ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭವಾಗುವ ನಿರೀಕ್ಷೆ ಇದೆ.

ಆಸ್ಪತ್ರೆಯ ಪಕ್ಕದಲ್ಲೇ ವೈದ್ಯಕೀಯ ತ್ಯಾಜ್ಯ ಬೇರ್ಪಡಿಸಿ ಸಂಪನ್ಮೂಲವನ್ನಾಗಿಸುವ ಘಟಕ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.

ಸದ್ಯ ಇ – ಟೆಂಡರ್‌ ಪ್ರಕ್ರಿಯೆ

ಬಯೋಗ್ಯಾಸ್‌ ಘಟಕ ಯೋಜನೆ ಸಿದ್ಧವಾಗಿ ಹಲವು ತಿಂಗಳುಗಳು ಕಳೆದಿವೆ. ಆದರೆ ಅನುದಾನದ ಕೊರತೆ ಇತ್ತು. ಇದೀಗ ಅಂಬಲಪಾಡಿ ದೇಗುಲದವರು 7 ಲ.ರೂ.ಗಳನ್ನು ನೀಡಿದ್ದಾರೆ. ಅದು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಬಳಿ ಇದೆ. ಸದ್ಯ ಇ – ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.
– ಡಾ| ಮಧುಸೂದನ್‌ ನಾಯಕ್‌,ಜಿಲ್ಲಾ ಸರ್ಜನ್‌
ಜಿಲ್ಲಾಸ್ಪತ್ರೆಯ ಬಯೋಗ್ಯಾಸ್‌ ಪ್ಲಾಂಟ್‌ಗೆ 7 ಲ.ರೂ.

ನಮ್ಮ ತಂದೆಯವರಾದ ದಿ| ನಿ.ಬಿ.ಅಣ್ಣಾಜಿ ಬಲ್ಲಾಳ್‌ ಅವರು ಕೂಡ ಜಿಲ್ಲಾಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು. ಆಸ್ಪತ್ರೆಗೆ ಅಪಾರ ಕೊಡುಗೆ ನೀಡಿದ್ದಾರೆ. ನಾನು ಕೂಡ ಮುಂದುವರೆಸಿಕೊಂಡು ಬಂದಿದ್ದೇನೆ. ಇತರ ಹಲವಾರು ಸೇವಾ ಕಾರ್ಯಗಳಿಗೂ ನೆರವು ಒದಗಿಸಲಾಗುತ್ತಿದೆ. ಜಿಲ್ಲಾಧಿಕಾರಿಯವರ ವಿನಂತಿಯ ಮೇರೆಗೆ ಜಿಲ್ಲಾಸ್ಪತ್ರೆಯ ಬಯೋಗ್ಯಾಸ್‌ ಪ್ಲಾಂಟ್‌ಗೆ 7 ಲ.ರೂ. ಚೆಕ್‌ನ್ನು ಈಗಾಗಲೇ ನೀಡಿದ್ದೇವೆ.
– ಡಾ| ವಿಜಯ ಬಲ್ಲಾಳ್‌,ಅಂಬಲಪಾಡಿ ದೇಗುಲದ ಧರ್ಮದರ್ಶಿ, ಜಿಲ್ಲಾಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯರು
Advertisement

Udayavani is now on Telegram. Click here to join our channel and stay updated with the latest news.

Next