Advertisement
3 ಗ್ರಾ.ಪಂ. ಕೇಂದ್ರಗಳಲ್ಲಿ ಬಯೋಗ್ಯಾಸ್ ಉಡುಪಿ ಜಿಲ್ಲೆಯಲ್ಲಿ 2017ರಲ್ಲಿ ಎಸ್‌ಎಲ್‌ಆರ್‌ಎಂ ಕೇಂದ್ರ ಸ್ಥಾಪನೆ ಯೋಜನೆ ಆರಂಭಗೊಂಡಿತ್ತು. ಕಾರ್ಕಳ ತಾಲೂಕಿನ ಎಲ್ಲ ಗ್ರಾ.ಪಂ.ಗಳಲ್ಲಿ ಆರಂಭಗೊಂಡಿದೆ. ಇಲ್ಲಿ ಸದ್ಯ ಒಣಕಸವನ್ನು ಸಂಗ್ರಹಿಸಿ ವಿಂಗಡಿಸಲಾಗುತ್ತಿದ್ದು ಯಶಸ್ವಿಯಾಗಿದೆ. ಕಾರ್ಕಳ ಸೇರಿದಂತೆ ಜಿಲ್ಲೆಯ ಒಟ್ಟು 45 ಗ್ರಾಮ ಪಂಚಾಯತ್‌ಗಳಲ್ಲಿ ಎಸ್‌ಎಲ್‌ಆರ್‌ಎಂ ಕೇಂದ್ರಗಳಿವೆ. ಮುಂದಿನ ವರ್ಷದೊಳಗೆ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿಯೂ ಕಾರ್ಯ ಗತಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದರ ಜತೆಗೆ ವಾರಂಬಳ್ಳಿ, ವಂಡ್ಸೆ ಮತ್ತು ನಿಟ್ಟೆ ಎಸ್‌ಎಲ್‌ಆರ್‌ಎಂ ಕೇಂದ್ರಗಳಲ್ಲಿ ಅಡುಗೆ ಅನಿಲ ಉತ್ಪಾದಿಸುವ ಘಟಕ ಕೂಡ ಆರಂಭವಾಗಲಿದೆ.
ವಾರಂಬಳ್ಳಿಯಲ್ಲಿ ಅಲ್ಲಿನ ಗ್ರಾ.ಪಂ. ಹಸಿತ್ಯಾಜ್ಯ ಅಡುಗೆ ಅನಿಲ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಇಲ್ಲಿ ಪಕ್ಕದಲ್ಲೇ ಇರುವ ಶಾಲೆಗೆ ಬೇಕಾದ ಅಡುಗೆ ಅನಿಲ ಪೂರೈಕೆ ಮಾಡುವ ಉದ್ದೇಶವಿದೆ. ನಿಟ್ಟೆಯಲ್ಲಿಯೂ ಎಸ್‌ಎಲ್‌ಆರ್‌ಎಂ ಕೇಂದ್ರದಲ್ಲಿ ಅಡುಗೆ ಅನಿಲ ಘಟಕ ಆರಂಭಿಸಿ ಪಕ್ಕದಲ್ಲಿರುವ ವಿದ್ಯಾಸಂಸ್ಥೆಗೆ ಅಡುಗೆ ಅನಿಲ ಪೂರೈಸುವ ಉದ್ದೇಶವಿದೆ. ಉಳಿದ ಕಡೆಗಳಲ್ಲಿಯೂ ಇದೇ ರೀತಿ ಹತ್ತಿರದ ಶಾಲೆಗಳಿಗೆ ಅಡುಗೆ ಅನಿಲ ದೊರೆಯುವ ರೀತಿಯಲ್ಲಿ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಆಸ್ಪತ್ರೆ ಆವರಣದ ಕಸ ಕಾಂಪೋಸ್ಟ್
ಜಿಲ್ಲಾಸ್ಪತ್ರೆಯ ವೈದ್ಯಕೀಯ ತ್ಯಾಜ್ಯ (ಜನರಲ್ ವೇಸ್ಟ್) ಸಂಗ್ರಹಿಸಿ ಅದನ್ನು ಬೇರ್ಪಡಿಸಿ ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಅಜ್ಜರಕಾಡಿನ ಎಸ್‌ಎಲ್‌ಆರ್‌ಎಂ(ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರ) ಘಟಕದ ಎದುರು ಇದೀಗ ಆಸ್ಪತ್ರೆ ಆವರಣ ಮತ್ತು ಪಕ್ಕದ ತರಗಲೆಗಳನ್ನು ಸಂಗ್ರಹಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಜಿಲ್ಲೆಯ 18 ಎಸ್‌ಎಲ್‌ಆರ್‌ಎಂ ಘಟಕಗಳು ಈಗಾಗಲೇ ಸಾವಯವ ಗೊಬ್ಬರವನ್ನು ಕೂಡ ತಯಾರಿಸುತ್ತಿವೆ.
Related Articles
ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದ ತ್ಯಾಜ್ಯ, ಪಕ್ಕದಲ್ಲೇ ಇರುವ ನರ್ಸಿಂಗ್ ತರಬೇತಿ ಸಂಸ್ಥೆ, ಆಸ್ಪತ್ರೆ ಕ್ಯಾಂಟೀನ್, ಹೊರಗಿನಿಂದ ತರುವ ಆಹಾರಗಳ ತ್ಯಾಜ್ಯ ಸೇರಿದಂತೆ ಹಸಿ ತ್ಯಾಜ್ಯ ಬಳಸಿ ಅದನ್ನು ಅಡುಗೆ ಅನಿಲವನ್ನಾಗಿಸಿ ಆಸ್ಪತ್ರೆಯ ಅಡುಗೆ ಕೋಣೆಗೆ ಬಳಸುವ ಯೋಜನೆ ಇದು. ಎಸ್‌ಎಲ್‌ಆರ್‌ಎಂ ಸಹಭಾಗಿತ್ವದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಒಟ್ಟು ಅಂದಾಜು 7 ಲ.ರೂ. ವೆಚ್ಚದ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲುದ್ದೇಶಿಸಲಾಗಿದ್ದು ನೀಲನಕಾಶೆ ಸಿದ್ಧಗೊಂಡಿದೆ. ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಅನುದಾನದ ಕೊರತೆ ಇರುವುದರಿಂದ ದಾನಿಗಳ ಸಹಕಾರ ಕೋರಲಾಗಿದ್ದು ಅಂಬಲಪಾಡಿ ದೇಗುಲದಿಂದ ನೆರವಿನ ಭರವಸೆ ದೊರೆತಿದೆ. ಅನುದಾನ ಹೊಂದಿಕೆಯಾದ ಕೂಡಲೇ ಘಟಕದ ಕಾಮಗಾರಿ ಆರಂಭಗೊಳ್ಳಲಿದೆ.
Advertisement
ಗೋವರ್ಧನ್ ಪ್ರಾಜೆಕ್ಟ್ಗೆ 2 ಗ್ರಾ.ಪಂ.ಗಳು ಆಯ್ಕೆ ಕೇಂದ್ರ ಸರಕಾರದ ಗೋವರ್ಧನ್ ಪ್ರಾಜೆಕ್ಟ್‌ನಡಿ ಬಯೋಗ್ಯಾಸ್ ಪ್ಲಾಂಟ್ ಸ್ಥಾಪನೆಗೆ (ಪೈಲಟ್ ಯೋಜನೆ) ರಾಜ್ಯದ 5 ಜಿಲ್ಲೆಗಳ ಗ್ರಾ.ಪಂ.ಗಳು ಆಯ್ಕೆಯಾಗಿದ್ದು ಅದರಲ್ಲಿ ಉಡುಪಿ ಜಿಲ್ಲೆಯ ವಂಡ್ಸೆ ಮತ್ತು ನಿಟ್ಟೆ ಗ್ರಾ.ಪಂ.ಗಳು ಸೇರಿವೆ. ಇಲ್ಲಿ ಘಟಕ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಏಜೆನ್ಸಿ ನಿಯೋಜಿಸುವ ಪ್ರಕ್ರಿಯೆ ನಡೆಯುತ್ತಿದೆ. ವಾರಂಬಳ್ಳಿಯಲ್ಲಿ ಗ್ರಾ.ಪಂ. ವತಿಯಿಂದಲೇ ಇಂತಹ ಘಟಕ ಸ್ಥಾಪನೆಯಾಗಲಿದೆ.
– ಶ್ರೀನಿವಾಸ ರಾವ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಮೀಕ್ಷೆ ಪೂರ್ಣ
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮಾದರಿಯಾಗಿ ಹಸಿರು ತ್ಯಾಜ್ಯ (ಆಹಾರ ತ್ಯಾಜ್ಯ)ದಿಂದ ಅಡುಗೆ ಅನಿಲ ಉತ್ಪಾದನಾ ಘಟಕ ಆರಂಭಿಸುವ ಯೋಜನೆಗೆ ಸಮೀಕ್ಷೆ ಪೂರ್ಣಗೊಂಡಿದೆ. ಕಟಪಾಡಿಯ ವಿಜಯ ಇಂಡಸ್ಟ್ರೀಸ್‌ನವರ ತಾಂತ್ರಿಕ ನಿರ್ದೇಶನದಲ್ಲಿ ವರದಿ ತಯಾರಿಸಲಾಗಿದೆ. ಆಹಾರ ತ್ಯಾಜ್ಯದ ನಿರ್ವಹಣೆ ಸಮರ್ಪಕವಾಗುವುದು ಮಾತ್ರವಲ್ಲದೆ ಅಡುಗೆ ಅನಿಲವೂ ದೊರೆಯಲಿದೆ.
– ಮೂರ್ತಿ ಟಿ., ಜಿಲ್ಲಾ ಸಮನ್ವಯಾಧಿಕಾರಿ, ಎಸ್‌ಎಲ್‌ಆರ್‌ಎಂ ಅನುದಾನ ದೊರೆತರೆ ಕೆಲಸ
ಆಸ್ಪತ್ರೆಯ ವೈದ್ಯಕೀಯ ತ್ಯಾಜ್ಯ (ಜನರಲ್ ವೇಸ್ಟ್) ಈಗ ಸಂಪನ್ಮೂಲವಾಗುತ್ತಿದೆ. ಅದರ ಜತೆಗೆ ಆಹಾರ ತ್ಯಾಜ್ಯ ಕೂಡ ಅಡುಗೆ ಅನಿಲ ಮೂಲಕ ಸಂಪನ್ಮೂಲವಾಗಬೇಕೆಂಬ ಉದ್ದೇಶ ನಮ್ಮದು. ಅಂಬಲಪಾಡಿ ದೇಗುಲದವರು ನೆರವು ನೀಡುವ ಭರವಸೆ ನೀಡಿದ್ದಾರೆ.
– ಡಾ| ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ, ಉಡುಪಿ — ಸಂತೋಷ್ ಬೊಳ್ಳೆಟ್ಟು