Advertisement

ನರೇಗಾದಲ್ಲಿ ಬಯೋಗ್ಯಾಸ್‌ ಘಟಕ ರಚನೆಗೆ ಅವಕಾಶ

12:38 AM Dec 12, 2022 | Team Udayavani |

ಪುತ್ತೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯಡಿ ಜೈವಿಕ ಅನಿಲ (ಬಯೋಗ್ಯಾಸ್‌) ಸ್ಥಾವರಗಳನ್ನು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಯಾಗಿ ಸ್ಥಾಪಿಸಲು ಅವಕಾಶ ನೀಡಲಾಗಿದೆ.

Advertisement

ಈ ಬಗ್ಗೆ ಸುತ್ತೋಲೆ ಹೊರಡಿ ಸಲಾಗಿದ್ದು, ವೈಯಕ್ತಿಕ ದನದ ಕೊಟ್ಟಿಗೆ ಹೊಂದಿರುವ ನರೇಗಾ ಫಲಾನುಭವಿಗಳಿಗೆ ಮತ್ತು ಸಮುದಾಯ ಜೈವಿಕ ಅನಿಲ ಸ್ಥಾವರವನ್ನು ಘನ ತಾಜ್ಯ ವಿಲೇವಾರಿ ಘಟಕ/ಘಟಕದ ಹತ್ತಿರ ಸ್ಥಾಪಿಸುವುದರಿಂದ ಕಚ್ಚಾವಸ್ತುಗಳು ಸುಲಭವಾಗಿ ಲಭಿಸಿ ಜೈವಿಕ ಅನಿಲ ಉತ್ಪಾದನೆ ಸುಲಭಸಾಧ್ಯವಾಗಲಿದೆ ಎಂದು ತಿಳಿಸಿದೆ.

ವೆಚ್ಚ ಪಾಲು
2 ಘನ ಮೀಟರ್‌ ಬಯೋಗ್ಯಾಸ್‌ ಘಟಕಗಳನ್ನು 2 ವಿಧದ ಮಾದರಿಯಡಿ ಅನುಷ್ಠಾನಿಸ ಬಹುದಾಗಿದ್ದು 50 ಸಾವಿರ ರೂ. ಅಂದಾಜು ಮೊತ್ತದಡಿ ಶೇ. 50ರಷ್ಟು ಫಲಾನುಭವಿಯು ಬಂಡವಾಳ ಹೂಡಬೇಕು. ದೀನ ಬಂಧು ಮಾದರಿಯಡಿ 14,964 ರೂ. ಕೂಲಿಯಂತೆ 38 ಮಾನವ ದಿನಗಳು ಸೃಜನೆಯಾಗಲಿದ್ದು, 10,036 ರೂ. ಸಾಮಗ್ರಿ ದೊರೆಯಲಿದೆ. ಆರ್‌ಸಿಸಿ ರಿಂಗ್‌ ಕೆವಿಐಸಿ ಮಾದರಿಯಡಿ 9,863 ರೂ. ಕೂಲಿಯಂತೆ 30 ಮಾನವ ದಿನಗಳು ಸೃಜನೆಯಾಗಲಿದ್ದು, 15,137 ರೂ. ಸಾಮಗ್ರಿ ದೊರೆಯಲಿದೆ.

ಅಡುಗೆ ಅನಿಲ
ಮನೆ ಅಗತ್ಯಕ್ಕಿರುವ ಅಡುಗೆ ಅನಿಲವನ್ನು ಪಡೆಯಬಹುದಾಗಿದೆ. ಘಟಕದಿಂದ ಬರುವ ಸ್ಲರಿಯನ್ನು ಕೃಷಿಗೆ ಉಪಯೋಗಿಸುವುದರಿಂದ ಅಧಿಕ ಇಳುವರಿ ಪಡೆಯಬಹುದು. ಇದು ಪರಿಸರ ಸಂರಕ್ಷಣೆ ಹಾಗೂ ಘನ ತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಹಕಾರಿಯಾಗಲಿದೆ.

ಯಾರೆಲ್ಲ ಅರ್ಹರು
ಪರಿಶಿಷ್ಟ ಜಾತಿ/ಪಂಗಡ, ಅಲೆಮಾರಿ ಬುಡಕಟ್ಟು ಜನಾಂಗ, ಬಿಪಿಎಲ್‌ ಕುಟುಂಬಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ವಿಶೇಷ ಚೇತನರು ಮುಖ್ಯಸ್ಥರಾಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ಭೂ ಸುಧಾರಣ ಫಲಾನುಭವಿಗಳು, ಅರಣ್ಯ ಹಕ್ಕುಗಳ ಕಾಯ್ದೆ 2006ರ ಫಲಾನುಭವಿಗಳು, ವಸತಿ ಯೋಜನೆಗಳ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಗ್ರಾ.ಪಂ.ನಿಂದ ಉದ್ಯೋಗ ಚೀಟಿ ಪಡೆದುಕೊಂಡು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ.

Advertisement

ಜೈವಿಕ ಅನಿಲ
ಜೈವಿಕ ಅನಿಲವು ಕಾರ್ಬನ್‌ ಡೈ ಆಕ್ಸೆಡ್‌ ಮತ್ತು ಮಿಥೇನ್‌ ಹೊರಸೂಸುವಿಕೆಯನ್ನು ತಡೆಯುವ ಮೂಲಕ ಪರಿಸರ ಮಾಲಿನ್ಯ ಕಡಿಮೆ ಮಾಡುತ್ತದೆ. ಗ್ರಾಮೀಣ ಭಾಗದ ಹೈನುಗಾರರಿಗೆ, ಕೃಷಿಕರಿಗೆ ತಮ್ಮ ಭೂಮಿ ಯಲ್ಲೇ ಸಾಕಷ್ಟು ಜೈವಿಕ ವಿಘಟನೀಯ ವಸ್ತುಗಳು ಲಭ್ಯವಾಗುವುದರಿಂದ ವೈಯಕ್ತಿಕ ಮಾದರಿಯ ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸಬಹುದು.

ಕೃಷಿ ತ್ಯಾಜ್ಯ, ಗೊಬ್ಬರ, ಸಸ್ಯ ಸಾಮಗ್ರಿಗಳು, ಒಳಚರಂಡಿ, ಹಸುರು ತ್ಯಾಜ್ಯ ಅಥವಾ ಆಹಾರ ತ್ಯಾಜ್ಯದಂತಹ ಕಚ್ಚಾ ವಸ್ತುಗಳಿಂದ ಜೈವಿಕ ಅನಿಲವನ್ನು ಉತ್ಪಾದಿಸಬಹುದು. ಅತೀ ಮುಖ್ಯವಾಗಿ ನೀರು ಮಿಶ್ರಿತ ಹಸುವಿನ ಸೆಗಣಿಯು (50:50) ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. 25 ಕೆ.ಜಿ. ಸೆಗಣಿಯಿಂದ (2-3 ಹಸು), 1 ಘನ ಮೀ. ಅನಿಲ ಪಡೆಯಬಹುದು. ಇದು 3-4
ಜನರಿಗೆ ಆಹಾರ ತಯಾರಿಸಲು ಸಾಕು.

ನರೇಗಾ ಯೋಜನೆಯಡಿ ದನ, ಕುರಿ, ಆಡಿನ ಶೆಡ್‌ ಹೊಂದಿರುವ ಫಲಾನುಭವಿಗಳಿಗೆ ಆದ್ಯತೆಯಲ್ಲಿ ವೈಯಕ್ತಿಕ ಜೈವಿಕ ಅನಿಲ ಸ್ಥಾವರ ನಿರ್ಮಿಸಲು ಸರಕಾರ ಅವಕಾಶ ಕಲ್ಪಿಸಿದೆ. ಘಟಕ ವೆಚ್ಚ 50 ಸಾವಿರ ರೂ.ಗಳಾಗಿದ್ದು, 25 ಸಾವಿರ ರೂ. ನರೇಗಾ ಹಾಗೂ 25 ಸಾವಿರ ರೂ. ಫಲಾನುಭವಿ ವಂತಿಗೆಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
– ಶೈಲಜಾ ಪ್ರಕಾಶ್‌, ಸಹಾಯಕ ನಿರ್ದೇಶಕರು, (ಗ್ರಾ.ಉ)

– ಕಿರಣ್ ಪ್ರಸಾದ್ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next