ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೊಡಿಯೇರಿಯನ್ನು ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆ ನಡೆಸಿದರು.
ಇಡಿ ಕಚೇರಿಯಲ್ಲಿ ತನಿಖಾಧಿಕಾರಿಗಳು ಆರು ಗಂಟೆಗಳಿಗೂ ಅಧಿಕ ಕಾಲ ಬಿನೇಶ್‌ನನ್ನು ವಿಚಾರಣೆ ನಡೆಸಿದ್ದಾರೆ.
ಡ್ರಗ್ಸ್ ದಂಧೆ ಕೇಸ್‌ನ ಆರೋಪಿ ಮೊಹಮದ್ ಅನೂಪ್‌ಗೆ 50 ಲಕ್ಷ ರೂ. ಸಾಲ ನೀಡಿದ ಆರೋಪದ ಬಗ್ಗೆ ಬಿನೇಶ್‌ನ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ಅನೂಪ್ ಜತೆಗಿನ ಸ್ನೇಹ ಎಂತಹುದು, ಇಬ್ಬರ ನಡುವೆ ವ್ಯಾವಹಾರಿಕ ಸಂಬಂಧವಿತ್ತೇ. ಜತೆಗೆ, ಅನೂಪ್‌ಗೆ ನೀಡಿರುವ 50 ಲಕ್ಷ ರೂ.ಗಳ ಮೂಲ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಿನೇಶ್‌ನನ್ನು ಸುದೀರ್ಘ ವಿಚಾರಣೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿನೇಶ್‌ನಿಂದ ಹಲವು ಹೇಳಿಕೆಗಳನ್ನು ದಾಖಲಿಸಿದ್ದೇವೆ. ಹಣಕಾಸು ವ್ಯವಹಾರದ ಬಗ್ಗೆಯೂ ಕೇಳಲಾಗಿದ್ದು ಅಗತ್ಯಬಿದ್ದರೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.