ಕನ್ನಡದಲ್ಲಿ ಈ ಹಿಂದೆ “ಬಿಂದಾಸ್’ ಎಂಬ ಚಿತ್ರ ಬಂದಿತ್ತು. ಆ ನಂತರ “ಗೂಗ್ಲಿ’ ಎಂಬ ಚಿತ್ರ ಬಿಡುಗಡೆಯಾಯ್ತು. ಈಗ ಅವರೆಡನ್ನೂ ಸೇರಿಸಿ, “ಬಿಂದಾಸ್ ಗೂಗ್ಲಿ’ ಎಂಬ ಹೊಸ ಚಿತ್ರವನ್ನು ಮಾಡುವುದಕ್ಕೆ ಹೊರಟಿದ್ದಾರೆ ಸಂತೋಷ್. ಈ ಹಿಂದೆ ಅವರು “ಸ್ಟೂಡೆಂಟ್ಸ್’ ಎಂಬ ಕಾಲೇಜು ಹುಡುಗರ ಚಿತ್ರ ಮಾಡಿದ್ದರು. ಈಗ ಇನ್ನೊಂದು ಕಾಲೇಜ್ ಕಥೆಯನ್ನು ಅವರು ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಚಿತ್ರ ಆರಂಭಿಸಲಿದ್ದಾರೆ.
ಮೊದಲೇ ಹೇಳಿದಂತೆ ಇದೊಂದು ಕಾಲೇಜ್ ಕಥೆ. ಬರೀ ಕಾಲೇಜ್ ಕಥೆಯಲ್ಲ, ನೃತ್ಯವನ್ನಾಧರಿಸಿದ ಸಿನಿಮಾ. ಅದೊಂದು ಕಾಲೇಜು. ಹೆಸರು ಗುರುಕುಲ. ಇಲ್ಲಿ ಓದೇ ಮುಖ್ಯ. ಹೀಗಿರುವಾಗ ಒಂದಿಷ್ಟು ಲೋಕಲ್ ಹುಡುಗರು ಬೌಂಡರಿ ದಾಟಿ, ರಾಷ್ಟ್ರೀಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಚಿತ್ರದ ಕಥೆಯಂತೆ. “ಸಾಮಾನ್ಯವಾಗಿ ತಂದೆ-ತಾಯಿ ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂದು ಬಯಸುತ್ತಾರೆ.
ಮಕ್ಕಳಲ್ಲಿ ಇನ್ನೇನು ಪ್ರತಿಭೆ ಇದೆ, ಅದನ್ನು ಹೇಗೆ ಪೋಷಿಸಬೇಕು ಎಂದು ಯೋಚಿಸುವುದಿಲ್ಲ. ಈ ವಿಷಯವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಮುಖ್ಯವಾಗಿ ಡ್ಯಾನ್ಸ್ ಕುರಿತ ಸಿನಿಮಾ ಇದು. ಲೋಕಲ್ ಹುಡುಗರು ಬೌಂಡರಿ ದಾಟಿ ಹೇಗೆ ಜೀವನದಲ್ಲಿ ಸಾಧನೆ ಮಾಡುತ್ತಾರೆ ಎನ್ನುವುದೇ ಕಥೆ. ಈ ಚಿತ್ರದಲ್ಲಿ ಒಂದಿಷ್ಟು ಹೊಸ ಡ್ಯಾನ್ಸ್ ತರುತ್ತಿದ್ದೇವೆ. ಅಷ್ಟೇ ಅಲ್ಲ, ಡ್ಯಾನ್ಸರ್‌ಗಳನ್ನಿಟ್ಟುಕೊಂಡೇ ಈ ಚಿತ್ರ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸಂತೋಷ್.
“ಬಿಂದಾಸ್ ಗೂಗ್ಲಿ’ಯಲ್ಲಿ ಅಕಾಶ್ ವಿಜಯ್, ಸಶಿಲ್ಪ, ರವಿ ಶೇಠ್, ಶ್ರುತಿ, ಅಶೋಕ್, ಚಿಕ್ಕಣ್ಣ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ಅವರೇ ಕಥೆ ಬರೆದು ನಿದೆಏìಶಿಸುತ್ತಿದ್ದಾರೆ. ಇನ್ನು ಬೆಳಗಾವಿಯ ವಿಜಯ್ ಕುಮಾರ್ ಎನ್ನುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿರುವ ಈ ಚಿತ್ರದ ಚಿತ್ರೀಕರಣ ಮಣಿಪಾಲ, ಉಡುಪಿ, ಕಾರವಾರ, ಮಡಿಕೇರಿ ಮುಂತಾದ ಕಡೆ ನಡೆಯಲಿದೆ.