Advertisement

BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ

07:53 PM Dec 07, 2024 | Team Udayavani |

ಬಳ್ಳಾರಿ: ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಸ್ಪತ್ರೆ ಎದುರು ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಶನಿವಾರ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಭೇಟಿ ನೀಡಿ ಸತ್ಯಾಗ್ರಹ ನಿರತರ ಬೇಡಿಕೆಗಳ ಆಲಿಸಿದರು.

Advertisement

ಸತ್ಯಾಗ್ರಹ ನಿರತ ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರೊಂದಿಗೆ ಚರ್ಚಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೇಡಿಕೆಗಳನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈಡೇರಿಸುವುದಾಗಿ ಭರವಸೆ ನೀಡಿ, ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಬಳಿಕ ಸತ್ಯಾಗ್ರಹ ನಿರತರು ಧರಣಿಯ ಕೈಬಿಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು, ಬಾಣಂತಿಯರ ಸಾವು ನಿಲ್ಲಬೇಕು. ಆರೋಗ್ಯ ಸಚಿವರು ರಾಜೀನಾಮೆ ಕೊಡಬೇಕಿಲ್ಲ. ಆದರೆ ಆರೋಗ್ಯ ವ್ಯವಸ್ಥೆ ಸುಧಾರಣೆ ಆಗಬೇಕು. ರಾಜ್ಯದಲ್ಲಿ ನೂರಾರು ಬಾಣಂತಿಯರು ಮೃತಪಟ್ಟಿದ್ದಾರೆ. ಗುಣಮಟ್ಟದ ಔಷಧಿ ಖರೀದಿ ಆಗಬೇಕು. ಪಶ್ಚಿಮ ಬಂಗಾಳದ ಕಂಪನಿಯ ಪ್ಲೂಯಿಡ್ ನಿಂದ ಸತ್ತಿದ್ದಾರೆ ಎಂಬ ಮಾಹಿತಿ ಇದ್ದು, ವೈದ್ಯರ ನಿರ್ಲಕ್ಷ್ಯ ಅಲ್ಲ, ಸರ್ಕಾರದ ಲೋಪ ಎಂದರು.

ಈ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನಿಂದ ಜನ ಭಯಬಿದ್ದು ಇಲ್ಲಿಗೆ ಬರದಂತಾಗಿದೆ. ಎಷ್ಟು ಬಾಣಂತಿಯರು ಸತ್ತಿದ್ದಾರೆ. ಅವರ ಪೋಸ್ಟ್‌ ಮಾರ್ಟ್ಂ ವರದಿ ಎಲ್ಲಿ ಎಂದು ಪ್ರಶ್ನಿಸಿದರು. ಬಡ ಜನರಿಗೆ ವಿಶ್ವಾಸ ತುಂಬುವ ಸಲುವಾಗಿ ಆಗಿರುವ ತಪ್ಪನ್ನು ಸರಿಯಾದ ಕ್ರಮದಲ್ಲಿ ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು. ಹಾಲಿ ನ್ಯಾಯಾಧೀಶರ ಮೂಲಕ ತನಿಖೆಯಾಗಬೇಕು. ಸತ್ತಿರುವ ಬಾಣಂತಿಯರ ಕೂಸುಗಳಿಗೆ ರೂ.25 ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ವೈದ್ಯರ ಕರ್ತವ್ಯ ಲೋಪವಿಲ್ಲ: 
ಪ್ರತಿಭಟನಾ ನಿರತರ ಮನವಿಯ ಆಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಾಣಂತಿಯರ ಸಾವು ಸಂಭವಿಸಿದ ತಕ್ಷಣ ತನಿಖಾ ತಂಡ ಕಳಿಸಲಾಗಿದ್ದು, ತಂಡದ ಪ್ರಕಾರ ವೈದ್ಯರ ಕರ್ತವ್ಯ ಲೋಪದಿಂದ ಅಲ್ಲ, ಆದರೆ ಐವಿ ಪ್ಲೂಯಿಡ್ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

Advertisement

ಉನ್ನತ ಮಟ್ಟದಲ್ಲಿ ತನಿಖೆಗೆ ಕ್ರಮ:
ಪ್ಲೂಯಿಡ್ ಬಗ್ಗೆ ಅನುಮಾನ ಪಟ್ಟು ಈ ಹಿಂದೆ ಪರೀಕ್ಷೆ ಮಾಡಿಸಿದಾಗ ಸರಿಯಿಲ್ಲ ಎಂದು ವರದಿ ಬಂದಿತ್ತು. ಇದರಿಂದಾಗಿ ತಡೆ ಹಿಡಿದಿದ್ದರಿಂದ ಅವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು. ಕೇಂದ್ರದ ಲ್ಯಾಬ್ ಗೆ ಕಳಿಸಿ ಪರೀಕ್ಷೆ ಮಾಡಿದಾಗ ಸರಿಯಿದೆ ಎಂದು ವರದಿ ಬಂತು. ಹಾಗಾಗಿ ಮುಂದುವರಿಸಿತ್ತಾದರೂ, 22 ಲಾಟ್ ಪರೀಕ್ಷೆ ಸರಿಯಿಲ್ಲ ಎಂದಿದ್ದರಿಂದ ಅದನ್ನು ನಿಲ್ಲಿಸಿತ್ತು. ಈ ಪ್ರಕರಣದಲ್ಲಿ ಯಾವುದನ್ನು ಮುಚ್ಚಿ ಹಾಕಲ್ಲ. ರಾಜ್ಯದಲ್ಲಿನ 327 ಬಾಣಂತಿಯರ ಸಾವಿನ ವರದಿ ಕೇಳಲಾಗಿದೆ. ಬಳ್ಳಾರಿ ಪ್ರಕರಣವನ್ನು ಇನ್ನೂ ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುವುದು. ಅಲ್ಲದೇ, ಪ್ರಾಸಿಕ್ಯೂಷನ್ ಮಾಡಿಸಲಾಗುವುದು ಎಂದು ತಿಳಿಸಿದರು.

ಶ್ರೀರಾಮುಲು ಸತ್ಯಾಗ್ರಹ ವಾಪಸ್‌: 
ನಿಮ್ಮ ಪ್ರತಿಭಟನೆ ಪ್ರಜಾಪ್ರಭುತ್ವದಲ್ಲಿ ಸರಿಯಾದ ಕ್ರಮ, ಬಾಣಂತಿಯರ ಸಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸದನದಲ್ಲೂ ಚರ್ಚೆ ಆಗಲಿದೆ. ಪರಿಹಾರದ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಆಗಲಿದೆ ನೀವು ಸತ್ಯಾಗ್ರಹ ಹಿಂದಕ್ಕೆ ಪಡೆಯಬೇಕೆಂದು ಶ್ರೀರಾಮುಲುಗೆ ಮನವಿ ಮಾಡಿದರು. ಮನವಿ  ಮೇರೆಗೆ ಶ್ರೀರಾಮುಲು ತಮ್ಮ ಸತ್ಯಾಗ್ರಹ ಹಿಂದಕ್ಕೆ ಪಡೆದರು.

ಈ ವೇಳೆ ಶಾಸಕ ಗಣೇಶ್, ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ , ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next