ಮುಂಬಯಿ: 2016-17ನೇ ಶೈಕ್ಷಣಿಕ ಸಾಲಿನಲ್ಲಿ ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಸಿಎ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಕರಣ್ ಎ. ಪೂಜಾರಿ ಅವರನ್ನು ಬಿಲ್ಲವರ ಅಸೋಸಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ಆ. 3ರಂದು ಬಿಲ್ಲವರ ಅಸೋಸಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಗುರುಪೂಜೆ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಕೆ. ಪೂಜಾರಿ, ಉಪ ಕಾರ್ಯಾಧ್ಯಕ್ಷ ಕೃಷ್ಣ ಎ. ಪೂಜಾರಿ, ಕಾರ್ಯದರ್ಶಿ ದಿನೇಶ್ ಸಿ. ಸಾಲ್ಯಾನ್ ಅವರು ಕರಣ್ ಪೂಜಾರಿ ಅವರನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಗೌರವಿಸಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜತೆ ಕಾರ್ಯದರ್ಶಿ ಶಂಕರ ಎಚ್. ಪೂಜಾರಿ, ಮಹಾಬಲ ಪೂಜಾರಿ, ರಾಮ ಡಿ. ಪೂಜಾರಿ, ಜಯ ಪೂಜಾರಿ, ಲೀಲಾ ಮಹಾಬಲ ಪೂಜಾರಿ, ಇತರ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಮಲಾಡ್ ರಾಜನ್‌ಪಾಡಾದ ದೀಪ್ತಿನಿಕೇತನ್ ಸೊಸೈಟಿಯ ನಿವಾಸಿಯಾಗಿರುವ ಕರಣ್ ಎ. ಪೂಜಾರಿ ಅವರು ಗೋರೆಗಾಂವ್ ಪಶ್ಚಿಮದ ವಿವೇಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸಿಎ ಸುರೇಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿದ್ದರು. ಕರಣ್ ಮೂಲತಃ ಮೂಡಬಿದ್ರೆಯ ಅಣ್ಣಿ ಪೂಜಾರಿ ಮತ್ತು ಮೂಲ್ಕಿಯ ಶರ್ಮಿಳಾ ಪೂಜಾರಿ ದಂಪತಿಯ ಪುತ್ರ.
ಚಿತ್ರ-ವರದಿ: ರಮೇಶ್ ಉದ್ಯಾವರ