ನವದೆಹಲಿ:ಆಡಳಿತಾರೂಢ ಕೇಂದ್ರ ಸರ್ಕಾರದ ಸಂಸದರು ಹಾಗೂ ವಿಪಕ್ಷಗಳ ಭಾರೀ ವಾಕ್ಸಮರದ ನಂತರ ಭಯೋತ್ಪಾದನಾ ನಿಗ್ರಹ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಲಿಷ್ಠಗೊಳಿಸುವ ಕಾಯ್ದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ವಿದೇಶಗಳಲ್ಲಿಯೂ ಭಾರತೀಯ ಮೇಲೆ ನಡೆದ ದಾಳಿಯ ತನಿಖೆ ನಡೆಸಲು ಎನ್ ಐಎಗೆ ವಿಶೇಷ ಅಧಿಕಾರ ನೀಡುವ ಕಾಯ್ದೆ ಇದಾಗಿದೆ.
ಎನ್ ಐಎ (ತಿದ್ದುಪಡಿ) ಮಸೂದೆ 2019 ಅನ್ನು ಸರ್ಕಾರ ಯಾವ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ ಧಾರ್ಮಿಕ ನೆಲೆಯಲ್ಲೂ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲ್ಲ ಎಂದು ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ತಿರುಗೇಟು ನೀಡಿದರು.
ಆರೋಪಿ ಯಾವುದೇ ಮತ, ಧರ್ಮಕ್ಕೆ ಸೇರಿರಲಿ, ಜಾತ್ಯಾತೀತವಾಗಿ ಭಯೋತ್ಪಾದನೆಯನ್ನು ಮಟ್ಟಹಾಕುವುದೇ ಸರ್ಕಾರದ ಧ್ಯೇಯವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಎನ್ ಐಎ ತಿದ್ದುಪಡಿ ಕಾಯ್ದೆಯನ್ನು ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಭಯೋತ್ಪಾದನಾ ನಿಗ್ರಹದ ಪೋಟಾ ಕಾಯ್ದೆಯನ್ನು ರದ್ದು ಮಾಡಿರುವುದಾಗಿ ವಾಗ್ದಾಳಿ ನಡೆಸಿದ ಶಾ, ಇದು ದುರುಪಯೋಗ ಅಲ್ಲ, ಆದರೆ ತಮ್ಮ ವೋಟ್ ಬ್ಯಾಂಕ್ ಅನ್ನು ಉಳಿಸಿಕೊಳ್ಳಲು ಮಾಡಿದ್ದು ಎಂದು ಚಾಟಿ ಬೀಸಿದರು.