Advertisement

ಬಿಲ್‌ ಅಕ್ರಮ: ಶಸ್ತ್ರ ಚಿಕಿತ್ಸಕರ ಸಹಿಯೇ ಪೋರ್ಜರಿ!

04:14 PM Mar 10, 2018 | |

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯಲ್ಲೀಗ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಹಿಯನ್ನು ಪೋರ್ಜರಿ ಮಾಡಿ ಲಕ್ಷಾಂತರ
ರೂ. ವೆಚ್ಚದ ಸರ್ಕಾರಿ ನೌಕರರ ವೈದ್ಯಕೀಯ ಮರು ಪಾವತಿ ಬಿಲ್‌ಗ‌ಳನ್ನು ಸಿದ್ಧಪಡಿಸಿ ಜಿಲ್ಲಾ ಖಜಾನೆಗೆ ಸಲ್ಲಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

Advertisement

ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಅಥವಾ ನೌಕರರ ಸಂಗಾತಿ, ಮಕ್ಕಳು ಹಾಗೂ ತಂದೆ,
ತಾಯಿಂದಿರು ಕಾಯಿಲೆಗೆ ತುತ್ತಾಗಿ ಪ್ರತಿಷ್ಠಿತ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೆ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಇದಕ್ಕಾಗಿ ಇಲಾಖೆ ನೌಕರರು ತಮ್ಮ ಮೇಲಿನ ಅಧಿಕಾರಿಯ ಸಹಿಯೊಂದಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತಗುಲಿದ ವೆಚ್ಚದ ವಿವರಗಳನ್ನು ಕಡ್ಡಾಯ ವಾಗಿ ಸಲ್ಲಿಸಬೇಕಾಗುತ್ತದೆ. ಆಗ ಮೇಲಾಧಿಕಾರಿಗಳು ವೈದ್ಯಕೀಯ ಬಿಲ್ಲು ಮರು ಪಾವತಿಗಾಗಿ ನೌಕರರು ಸಲ್ಲಿಸುವ ಬಿಲ್ಲುಗಳನ್ನು ಜಿಲ್ಲಾಸ್ಪತ್ರೆಯ ಶಸ್ತ್ರಚಕಿತ್ಸಕರಿಗೆ ಸಲ್ಲಿಸುತ್ತಾರೆ. ಕಡ್ಡಾಯವಾಗಿ ಜಿಲ್ಲಾ ಶಸ್ತ್ರಚಿಕಿತ್ಸಕರೇ ನೌಕರರ ವೈದ್ಯಕೀಯ ಮರುಪಾವತಿ ಬಿಲ್ಲುಗಳನ್ನು ಪರಿಶೀಲಿಸಿ ತಮ್ಮ ಮೇಲು ಸಹಿಯೊಂದಿಗೆ ನೌಕರಿಗೆ ಪಾವತಿಸಬಹುದಾದ ವೈದ್ಯಕೀಯ ವೆಚ್ಚದ
ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಬೇಕಾಗುತ್ತದೆ. 

ಸಹಿ ಪೋರ್ಜರಿ: ಜಿಲ್ಲೆಯ ನೌಕರರು ಸಲ್ಲಿಸಿದ ವೈದ್ಯಕೀಯ ಮರು ಪಾವತಿ ಬಿಲ್ಲುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಮುರುಳಿಕೃಷ್ಣ ಎಂಬಾತ ಜಿಲ್ಲಾ ಶಸ್ತ್ರ ಚಿಕಿತ್ಸಕರ ಮೇಲು ಸಹಿಯನ್ನು ನಕಲು ಮಾಡಿ ನೌಕರರು ಸಲ್ಲಿಸಿದ ವೈದ್ಯಕೀಯ ಮರುಪಾವತಿ ಬಿಲ್‌ಗಳನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ್ದು, ಹಣ ಮರುಪಾವತಿಗಾಗಿ ಜಿಲ್ಲಾ ಖಜಾನೆಗೆ ಸಲ್ಲಿಸಿ ಸರ್ಕಾರಕ್ಕೆ ಲಕ್ಷಾಂತರ ರೂ. ವಂಚಿಸಿರುವುದು
ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರ ಸಹಿ ನಕಲು ಮಾಡಿ ಭಾರೀ ಹಣಕಾಸಿನ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಬೆಳಕಿಗೆ ಬಂದಿದ್ದು ಹೇಗೆ?: ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಸಲ್ಲಿಸಿದ್ದ ವೈದ್ಯಕೀಯ ಮರು ಪಾವತಿ ಬಿಲ್‌ಗ‌ಳು ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಪರಿಶೀಲನೆಗೆ ಒಳಪಟ್ಟು ಅವರ ಮೇಲು ಸಹಿಯೊಂದಿಗೆ ಜಿಲ್ಲಾ ಖಜಾನೆಗೆ ಸಲ್ಲಿಕೆಯಾಗಿದೆ. ಈ ವೇಳೆ ಖಜಾನೆ ಅಧಿಕಾರಿಗಳು ಬಿಲ್‌ಗ‌ಳಿಗೆ ಶಸ್ತ್ರ ಚಿಕಿತ್ಸರು ಮಾಡಿದ್ದ ಮೇಲು ಸಹಿ ಗಮನಿಸಿದಾಗ ಪ್ರತಿ ವೈದ್ಯಕೀಯ ಮರು ಪಾವತಿ ಬಿಲ್‌ಗ‌ಳಲ್ಲಿ ಶಸ್ತ್ರ ಚಿಕಿತ್ಸರ ಸಹಿ ವ್ಯತ್ಯಾಸ ಕಂಡು ಬಂದಿದೆ. ಇದನ್ನು ಗಮನಿಸಿದಾಗ ಸಹಿ ಪೋರ್ಜರಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಖಜಾನೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಸರ್ಕಾರಿ ನೌಕರರು ಸಲ್ಲಿಸಿದ್ದ ವೈದ್ಯಕೀಯ ಮರು ಪಾವತಿ ಬಿಲ್‌ಗ‌ಳಲ್ಲಿ ಅಕ್ರಮವಾಗ ನಕಲಿ ಬಿಲ್‌ಗ‌ಳನ್ನು ಸೃಷ್ಟಿಸಿ ಲಕ್ಷ ಲಕ್ಷ ರೂ. ಹಣವನ್ನು ವೈದ್ಯಕೀಯ ಮರು ಪಾವತಿಗಾಗಿ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರ ನಕಲಿ ಸಹಿಯೊಂದಿಗೆ ಪ್ರಥಮ ದರ್ಜೆ ಸಹಾಯಕ ಮುರುಳಿಕೃಷ್ಣ ಖಜಾನೆಗೆ ಸಲ್ಲಿಸಿರುವ ಬಿಲ್ಲುಗಳಲ್ಲಿ ನಮೂದಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಈ ಹಗರಣದಲ್ಲಿ ಜಿಲ್ಲಾಸ್ಪತ್ರೆಯ ಹಿರಿಯ ಅಧಿಕಾರಿಗಳು ಭಾಗಿದ್ದಾರೆಂಬ ಆರೋಪ ಸಹ ಕೇಳಿ ಬರುತ್ತಿದೆ.

Advertisement

ಸಂತ್ರಸ್ತರಿಗೆ ತೊಂದರೆ: ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಬೆಳಕಿಗೆ ಬಂದಿರುವ ವೈದ್ಯಕೀಯ ಮರು ಪಾವತಿ ಬಿಲ್‌ಗ‌ಳ ಅಕ್ರಮದಿಂದ ಜಿಲ್ಲಾ ಖಜಾನೆಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರ ವೈದ್ಯಕೀಯ ಮರು ಪಾವತಿ ಬಿಲ್‌ಗ‌ಳನ್ನು ತಡೆ ಹಿಡಿಯಲಾಗಿದೆ.

ಇದರಿಂದ ನಿಜವಾಗಿ ಸಂಕಷ್ಟದಲ್ಲಿರುವ ಸರ್ಕಾರಿ ನೌಕರರಿಗೆ ತೀವ್ರ ತೊಂದರೆ ಉಂಟಾಗಿದೆ. ಸುಮಾರು ಒಂದೊಂದು ಇಲಾಖೆಯಿಂದ 20 ಲಕ್ಷಕ್ಕೂ ಅಧಿಕ ಬಿಲ್ಲುಗಳು ಸಲ್ಲಿಕೆಯಾಗಿದ್ದು, ಸುಮಾರು ಕೋಟ್ಯಂತರ ರೂ. ವೈದ್ಯಕೀಯ ಮರು ಪಾವತಿ ಬಿಲ್‌ಗ‌ಳಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಹಿ ಪೋರ್ಜರಿ ಮಾಡಿ ಖಜಾನೆಗೆ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.’ 

ವೈದ್ಯಕೀಯ ಬಿಲ್ಲು ಮರುಪಾವತಿಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸರ ಸಹಿಯನ್ನು ಪೋರ್ಜರಿ ಮಾಡಿ ಆಸ್ಪತ್ರೆಯ ಎಫ್ಡಿಸಿ ಮುರುಳಿಕೃಷ್ಣ ಬಿಲ್ಲುಗಳನ್ನು ಜಿಲ್ಲಾ ಖಜಾನೆಗೆ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪ ಕೇಳಿ ಬಂದ ತಕ್ಷಣ ಮುರುಳಿಕೃಷ್ಣನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಡಾ.ವಿಜಯಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next