ವಾಷಿಂಗ್ಟನ್: ಒಂದು ವಾರಗಳ ದೀರ್ಘ ಭಾರತದ ಪ್ರವಾಸದ ನಂತರ ಮೈಕ್ರೋಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಅಮೆರಿಕಕ್ಕೆ ಮರಳಿದ್ದಾರೆ. ಭಾರತ ಪ್ರವಾಸದ ವೇಳೆ ಗೇಟ್ಸ್ ಹಲವಾರು ರಾಜಕಾರಣಿಗಳು, ಉದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಆ ಹಿನ್ನೆಲೆಯಲ್ಲಿ ತಾವು ಭೇಟಿಯಾದ ಜನರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶೀಘ್ರದಲ್ಲೇ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುವ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಜನಾರ್ದನ ರೆಡ್ಡಿ ಹಣದ ಜಾಡು: 4 ದೇಶಗಳಿಗೆ ಮನವಿ ಪತ್ರ ನೀಡಲು ಸಿಬಿಐ ಕೋರ್ಟ್ ಆದೇಶ
ಭಾರತ ಪ್ರವಾಸದಲ್ಲಿ ಬ್ರಿಡ್ಜ್ ಚಾಂಪಿಯನ್ ಅನ್ಶುಲ್ ಭಟ್, ಯೂಟ್ಯೂಬರ್, Mismatched ಸ್ಟಾರ್ ಪ್ರಜಾಕತಾ ಕೋಲಿ, ಎನ್ ಜಿಒ ಕಾರ್ಯಕರ್ತರು ಹಾಗೂ ಇತರ ಚಟುವಟಿಕೆಗಳಲ್ಲಿ ಒಳಗೊಂಡವರನ್ನು ಭೇಟಿಯಾದ ಫೋಟೊವನ್ನು ಬಿಲ್ ಗೇಟ್ಸ್ ತಮ್ಮ Instagramನಲ್ಲಿ ಶೇರ್ ಮಾಡಿದ್ದಾರೆ.
“ಭಾರತದ ಪ್ರವಾಸ ಮುಗಿಸಿ ನಾನು ಅಮೆರಿಕಕ್ಕೆ ವಾಪಸ್ ಆಗಿದ್ದೇನೆ. ನಾನು ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡಲು ಹೆಚ್ಚು ಕಾಯುವುದಿಲ್ಲ. ನಾನು ಭಾರತಕ್ಕೆ ಭೇಟಿ ನೀಡುವುದನ್ನು ಇಷ್ಟಪಡುತ್ತೇನೆ ಯಾಕೆಂದರೆ ಪ್ರತಿ ಪ್ರವಾಸವು ನನಗೆ ಕಲಿಯಲು ಬೇಕಾದ ಅಭೂತಪೂರ್ವ ಅವಕಾಶ ನೀಡಿದೆ” ಎಂದು ಬಿಲ್ ಗೇಟ್ಸ್ ತಮ್ಮ ಪೋಸ್ಟ್ ನಲ್ಲಿ ನೀಡಿರುವ ಕ್ಯಾಪ್ಶನ್ ನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವಾರ ನಾನು ಪ್ರಯಾಣಿಸಿದ ಮುಂಬೈ, ದೆಹಲಿ ಮತ್ತು ಬೆಂಗಳೂರು ನಗರದಲ್ಲಿ ಅದ್ಭುತ ಜನರನ್ನು ಭೇಟಿಯಾಗಿದ್ದೆ. ಅವರು ಜಾಗತಿಕ ಆರೋಗ್ಯ, ಹವಾಮಾನ ಮತ್ತು ಅಭಿವೃದ್ಧಿಯ ಸವಾಲುಗಳಿಗೆ ಪರಿಹಾರ ಕಂಡು ಹಿಡಿಯಲು ನಾವೀನ್ಯತೆಯ ಹುಡುಕಾಟದ ಬಗ್ಗೆ ತಿಳಿಸಿಕೊಟ್ಟಿದ್ದರು ಎಂದು ಬಿಲ್ ಗೇಟ್ಸ್ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
ಭಾರತದ ಪ್ರವಾಸದ ವೇಳೆ ಬಿಲ್ ಗೇಟ್ಸ್ ಅವರು ಪ್ರಧಾನಿ ನರೇಂದ್ರ ಮೋದಿ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್ ಜಿ, ಝಿರೋಧಾ ಸ್ಥಾಪಕ ನಿತಿನ್ ಮತ್ತು ನಿಖಿಲ್ ಕಾಮತ್, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಸ್ಮೃತಿ ಇರಾನಿ, ಅಶ್ವಿನಿ ವೈಷ್ಣವ್ ಸೇರಿದಂತೆ ಇನ್ನಿತರ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಿದ್ದರು.