ಹೊಸದಿಲ್ಲಿ : ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಮಾನ್ಯ ಕೆಟಗರಿಯಲ್ಲಿ ಶೇ.10 ಮೀಸಲಾತಿಯನ್ನು ಕಲ್ಪಿಸುವ ಉದ್ದೇಶ ಹೊಂದಿರುವ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಇಂದು ಗುರುವಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.
“ಮೀಸಲಾತಿಗೆ ಆರ್ಥಿಕ ಹಿಂದುಳಿದಿರುವಿಕೆಯೇ ಏಕೈಕ ನೆಲೆಗಟ್ಟಾಗಲು ಸಾಧ್ಯವಿಲ್ಲದಿರುವುದರಿಂದ ಪ್ರಸ್ತಾವಿತ ಮಸೂದೆಯನ್ನು ರದ್ದು ಪಡಿಸಬೇಕು” ಎಂದು ಯೂತ್ ಫಾರ್ ಈಕ್ವಾಲಿಟಿ ಆರ್ಗನೈಸೇಶನ್ ಮತ್ತು ಕೌಶಲ್ ಕಾಂತ ಮಿಶ್ರಾ ತಮ್ಮ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿಯ ಕಲ್ಪಿಸುವ ಪ್ರಸ್ತಾವಿತ ಮಸೂದೆಯು ಸಂವಿಧಾನದ ಮೂಲ ಸ್ವರೂಪದ ಉಲ್ಲಂಘನೆಯಾಗಿರುತ್ತದೆ. ಜನರಲ್ ಕೆಟಗರಿಯಡಿಯ ಮೀಸಲಾತಿಗೆ ಆರ್ಥಿಕ ಹಿಂದುಳಿದಿರುವಿಕೆಯೊಂದೇ ಮಾನದಂಡವಾಗುವಂತಿಲ್ಲ ಮತ್ತು ಮೀಸಲಾತಿಗಿರುವ ಶೇ.50ರ ಒಟ್ಟಾರೆ ಪರಿಮಿತಿಯನ್ನು ದಾಟುವಂತಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಸರಕಾರ ಲೋಕಸಭೆಯಲ್ಲಿ ಪಾಸು ಮಾಡಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣದಲ್ಲಿ ಕಲ್ಪಿಸುವ ಮಹತ್ವಾಕಾಂಕ್ಷೆಯ ಮಸೂದೆಯು ರಾಜ್ಯಸಭೆಯಲ್ಲಿ 165 – 7 ಮತಗಳ ಅಂತರದಲ್ಲಿ ನಿನ್ನೆ ಬುಧವಾರ ಪಾಸಾಗಿದೆ. ಸಂವಿಧಾನದ 2019ರ 124ನೇ ತಿದ್ದುಪಡಿಯ ಮಸೂದೆ ಇದಾಗಿದೆ.
ವಿರೋಧ ಪಕ್ಷಗಳು ಸೂಚಿಸಿದ್ದ ಐದು ತಿದ್ದುಪಡಿಗಳನ್ನು ಸರಕಾರ ತಿರಸ್ಕರಿಸಿದ ಬಳಿಕ ಮೂಸದೆಯು ಪಾಸಾಗಿದೆ. ಈ ಕೋಟಾ ಮಸೂದೆಯ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ) ಗಳಿಗೆ ಕಲ್ಪಿಸಲಾಗಿರುವ ಶೇ.50ರ ಮೀಸಲಾತಿಯ ಆಚೆಗೆ ಜನರಲ್ ಕೆಟಗರಿಯಲ್ಲಿ ಶೇ.10ರ ಮೀಸಲಾತಿಯನ್ನು ಕಲ್ಪಿಸುತ್ತದೆ.