Advertisement

ಬಿಳಿಗಿರಿ ತುಂಬೆಲ್ಲಾ ಗೋವಿಂದ ನಾಮಸ್ಮರಣೆ

01:11 PM Jan 17, 2023 | Team Udayavani |

ಯಳಂದೂರು: ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ನಡೆದ ಚಿಕ್ಕಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು,

Advertisement

ಕಳೆದ 5 ವರ್ಷಗಳಿಂದ ಜೀರ್ಣೋದ್ಧಾರ ಹಾಗೂ ಕೋವಿಡ್‌ನಿಂದ ನಿಂತಿದ್ದ ಜಾತ್ರೆಗೆ ವಿವಿಧ ರಾಜ್ಯ, ಜಿಲ್ಲೆ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು. ರಂಗನ ತೇರನ್ನು ಎಳೆದು ಪುನೀತರಾದರು.

ಎಲ್ಲೆಲ್ಲೂ ಗೋವಿಂದ ನಾಮಾವಳಿ, ಗರುಡ ನಮನ: ಪ್ರಾತಃಕಾಲ ಕಲ್ಯಾಣೋತ್ಸವ, ಮುಯ್ಯಿ ಸಮರ್ಪಣೆ ನಂತರ ಪವಿತ್ರ ಚಿನ್ನಾಭರಣವನ್ನು ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕೃತವಾದ ಉತ್ಸವಮೂರ್ತಿಯನ್ನು ವಿವಿಧ ಬಣ್ಣ,ಬಣ್ಣದ ಪಟಗಳು, ಪುಷ್ಪದಿಂದ ಅಲಂಕೃತವಾದ ತೇರಿನಲ್ಲಿ 10.46 ರ ಸಮಯದಲ್ಲಿ ಕುಳ್ಳಿರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿ ತೇರಿನ ಸಂದರ್ಭದಲ್ಲೂ ಬರುವಂತೆ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿದ್ದು ನೆರೆದಿದ್ದ ಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಇದೇ ಸಂದರ್ಭದಲ್ಲಿ ನೆರೆದಿದ್ದ ದಾಸಂದಿರ ಶಂಖ, ಜಾಗಟೆ, ನಾದಸ್ವರದ ಸಪ್ಪಳದೊಂದಿಗೆ ಗೋವಿಂದ ನಾಮಾವಳಿಯನ್ನು ಹಾಡಿ ಸಾವಿರಾರು ಭಕ್ತರು ಎಳೆದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ತಾವು ಬೆಳೆದಿದ್ದ ದವಸಧಾನ್ಯ, ಚಿಲ್ಲರೆ ಕಾಸು, ನವದಂಪತಿ ಜವನ ಎಸೆದು ಪುನೀತರಾದರು.

ಕೆಲವರು ಚಾಕ್ಲೆಟ್‌ಗಳನ್ನು ತೇರಿಗೆ ಎಸೆದಿದ್ದೂ ವಿಶೇಷವಾಗಿತ್ತು. ಶಾಸಕ ಎನ್‌. ಮಹೇಶ್‌, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಕೂಡ ತೇರು ಎಳೆದು ಭಕ್ತಿ ಮೆರೆದಿದ್ದು ವಿಶೇಷವಾಗಿತ್ತು. ದೇಗುಲದ ಒಂದು ಸುತ್ತ ಪ್ರದಕ್ಷಿಣೆ ಹಾಕಿದ ಚಿಕ್ಕತೇರು ಮತ್ತೆ ಸ್ವಸ್ಥಾನಕ್ಕೆ ಸೇರಿತು. ನಂತರ ಚಿನ್ನಾಭರಣಗಳಿಂದ ಅಲಂಕೃತವಾದ ಉತ್ಸವ ಮೂರ್ತಿಯನ್ನು ಮಂಟಪೋತ್ಸವಕ್ಕೆ ಕರೆದೊಯ್ಯಲಾಯಿತು.

ಬ್ಯಾಟೆಮನೆ ಸೇವೆ, ಭಕ್ತಿ ಪರವಶರಾದ ಭಕ್ತಗಣ: ಈ ದೇಗುದಲ್ಲಿ ಪ್ರತಿ ವರ್ಷ ಎರಡು ಬಾರಿ ರಥೋತ್ಸವ ನಡೆಯುತ್ತದೆ. ಸಂಕ್ರಾಂತಿಯ ಮಾರನೇ ದಿನ ಚಿಕ್ಕ ಜಾತ್ರೆ ನಡೆದರೆ, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ವೇಳೆ ಇಲ್ಲಿ ದಾಸಂದಿರು. ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಹಾಕುವ ಸಂಪ್ರದಾಯವಿದೆ. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಹಾಪರಾಕ್‌, ಬೋಪರಾಕ್‌ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೂ ಚಿಕ್ಕ ಜಾತ್ರೆ ಸಾಕ್ಷಿಯಾಯಿತು. ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನವನ್ನು ಪಡೆದರು.

Advertisement

ದೇವರನ್ನು ಮೈಸೂರಿನ ಮಹಾರಾಜರು ನೀಡಿರುವ ಕಿರೀಟ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಭಕ್ತರು ಇಲ್ಲಿರುವ ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಹೊಡಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು.

ದ್ವಿಚಕ್ರ ವಾಹನಕ್ಕೆ ಬ್ರೇಕ್‌, ವಾಹನ ದಟ್ಟಣೆ ತಡೆಯುವಲ್ಲಿ ಯಶಸ್ವಿ: ರಥೋತ್ಸವಕ್ಕೆ ಕಳೆದ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ನಡೆದ ವಾಹನ ಕಿರಿಕಿರಿಯನ್ನು ತಪ್ಪಿಸಲು ಈ ಬಾರಿ ಪೊಲೀಸ್‌ ಇಲಾಖೆ ಹೆಚ್ಚಿನ ಕಾಳಜಿ ವಹಿಸಿತ್ತು. ಬೆಟ್ಟಕ್ಕೆ ದ್ವಿಚಕ್ರವಾಹನವನ್ನು ನಿಷೇಧಿಸಲಾ ಗಿತ್ತು. ಗುಂಬಳ್ಳಿ ಚೆಕ್‌ ಪೋಸ್ಟ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಬೆಟ್ಟದಲ್ಲಿ ಏಟ್ರಿ ಸಂಸ್ಥೆಯ ಬಳಿ ಹಾಗೂ ರೇಷ್ಮೆ ಇಲಾಖೆಯ ಬಳಿ ಖಾಸಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಬೆಟ್ಟದ ಕಮರಿ ಮೇಲಿರುವ ದೇಗುಲದಲ್ಲಿ ವಾಹನ ದಟ್ಟಣೆ ಕಡಿಮೆ ಇತ್ತು. ಸಾಲಿನಲ್ಲಿ ಬಸ್‌ ಹತ್ತಲು ಇಳಿಯಲು ವ್ಯವಸ್ಥೆ ಮಾಡಲಾಗಿತ್ತು. ದೇಗುಲದ ವತಿಯಿಂದ ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಬಸ್‌ಗಾಗಿ ಭಕ್ತರ ಪರದಾಟ, ಹಿಡಿಶಾಪ: ಪಟ್ಟಣದಿಂದ ಬೆಟ್ಟಕ್ಕೆ ತೆರಳಲು ಬೆಳಿಗ್ಗೆ ಕೆಎಸ್‌ಆರ್‌ ಟಿಸಿ ವತಿಯಿಂದ ಕಡಿಮೆ ಸಂಖ್ಯೆಯ ಬಸ್‌ಗಳು ಇತ್ತು. ಹಾಗಾಗಿ ಭಕ್ತರು ಬೆಟ್ಟಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಇಲ್ಲಿರುವ ಚಿಕ್ಕ ಬಸ್‌ ನಿಲ್ದಾಣದಲ್ಲೇ ಬಸ್‌ ಹತ್ತಿಳಿಯಲು ವ್ಯವಸ್ಥೆ ಮಾಡಿದ್ದರಿಂದ ಟ್ರಾಫಿಕ್‌ ಜಾಮ್‌ನ ಕಿರಿಕಿರಿ ಉಂಟಾಗಿತ್ತು. ಪ್ರತಿ ಬಾರಿಯೂ ಇದಕ್ಕಾಗಿ ತಾತ್ಕಾಲಿಕ ಬಸ್‌ ನಿಲ್ದಾಣದ ವ್ಯವಸ್ಥೆ ಇರುತ್ತಿದ್ದು ಈ ಬಾರಿ ಇಲ್ಲದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಮುಂದೆ ಇದನ್ನು ಸರಿಪಡಿಸುವಂತೆ ಭಕ್ತರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next