Advertisement

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

06:29 PM Dec 04, 2021 | Team Udayavani |

ಯಳಂದೂರು: ತಾಲೂಕಿನ ಬಿಳಿಗಿರಿರಂಗಬೆಟ್ಟ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಕಲ್ಲಿನ ನೆಲಹಾಸು ಕಾಮಗಾರಿಗೆ ಈ ಹಿಂದೆ 2018ರಲ್ಲಿ ತಾತ್ಕಾಲಿಕವಾಗಿ ಬಳಕೆಯಾಗಿದ್ದ ತೆಳುಪದರದ ನೆಲಹಾಸು ಕಲ್ಲುಗಳನ್ನೇ ಮತ್ತೆ ಬಳಸಲಾಗುತ್ತಿದೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಸುಮಾರು 500 ವರ್ಷಗಳ ಹಳೆಯದಾದ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರ ದೇವಸ್ಥಾನವಿದೆ. ನೂರಾರು ವರ್ಷಗಳ ಹಳೆಯದಾದ ದೇವಸ್ಥಾನವು ಶಿಥಿಲಾವಸ್ಥೆ ತಲುಪಿತ್ತು. ಅದರಂತೆ ಪುರಾತತ್ವ ಇಲಾಖೆಯು 2.40 ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಮುಂದಾಯಿತು. 2018ರಲ್ಲಿ ಇಲಾಖೆಯಿಂದ ಕಾಮಗಾರಿ ಅರಂಭಗೊಂಡಿತು. ಇದರ ಭಾಗವಾಗಿ
ದೇಗಲದ ಆವರಣದಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ 8 ಅಡಿ ಅಗಲದಲ್ಲಿ ಸುತ್ತಲೂ 3 ಇಂಚು ದಪ್ಪದ ಕಲ್ಲುಗಳನ್ನು ಬಳಕೆ ಮಾಡಲಾಗಿತ್ತು. ಇಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುವುದರಿಂದ ಚಿಕ್ಕ ರಥೋತ್ಸವ ಜರುಗುವ ಸಮಯದಲ್ಲಿ ಕಲ್ಲು ಒಡೆದು ತೊಂದರೆಯಾಗುವ ಸಾಧ್ಯತೆಗಳು ಇದೆ ಎಂದು ಭಕ್ತರು ಹಾಗೂ ಸಾರ್ವಜನಿಕರು ದೂರಿದ್ದರು. ಈ ಬಗ್ಗೆ ಎಚ್ಚೆತ್ತುಗೊಂಡ ಇಲಾಖೆ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಮತ್ತೆ 1 ಕೋಟಿ ರೂ. ವೆಚ್ಚದಲ್ಲಿ 6 ಇಂಚು ದಪ್ಪ ಇರುವ ನೆಲಹಾಸು ಕಲ್ಲುಗಳನ್ನು ಬಳಸಿಕೊಂಡು ಕಾಮಗಾರಿಗೆ ಚಾಲನೆ ನೀಡಿತ್ತು.

Advertisement

ಆದರೆ, ಇದನ್ನು ಬಿಟ್ಟು ಇದರ ನಡುವೆ 3 ಇಂಚಿನ ಕಲ್ಲುಗಳನ್ನು ಇದರ ಮಧ್ಯ ಬಳಸಿಕೊಂಡು ಕಾಮಗಾರಿ ನಡೆಯುತ್ತಿದ್ದು ಇದು ಚರ್ಚೆಗೆ ಗ್ರಾಸವಾಗಿದೆ.

ಇಷ್ಟಬಂದಂತೆ ಕಾಮಗಾರಿ: ದೇಗುಲದ ಕಾಮಗಾರಿ ನಡೆಯುತ್ತಿದ್ದರೂ ಇದಕ್ಕೆ ಸಂಬಂಧಪಟ್ಟ ಪುರಾತತ್ವ ಇಲಾಖೆಯ ತಾಂತ್ರಿಕ ಸಿಬ್ಬಂದಿ ಇಲ್ಲಿ ಇರುವುದೇ ಇಲ್ಲ. ಕಾಮಗಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯಾರೂ ಹೊತ್ತಿಲ್ಲ. ಸಂಬಂಧಪಟ್ಟ ಗುತ್ತಿಗೆದಾರ ತನಗಿಷ್ಟ ಬಂದಂತೆ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಈ ಸಂಬಂಧ ದೇಗುಲದ ಆಡಳಿತ
ಮಂಡಳಿಯನ್ನು ಕೇಳಿದರೆ ತಾಂತ್ರಿಕ ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂಬ ಉತ್ತರ ನೀಡುತ್ತಾರೆ ಸಂಕ್ರಾಂತಿಯಂದು ನಡೆಯುವ ಚಿಕ್ಕ ರಥೋತ್ಸವವು ದೇಗುಲದ ಆವರಣದಲ್ಲೇ ನಡೆಯುತ್ತದೆ. ಈ ರಥ ದೇಗುಲದ ಸುತ್ತ ಚಲಿಸುತ್ತದೆ. ಗುಣಮಟ್ಟದ ಕಲ್ಲುಗಳನ್ನು ಹಾಕದಿದ್ದಲ್ಲಿ ಇದು ಒಡೆಯುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಅಲ್ಲದೆ ನೆಲಹಾಸಿಗೆ ಮುಂಚೆ ಹಾಕುವ ಕಲ್ಲು ಕಾಂಕ್ರಿಟ್‌ ಕೂಡ ಇಲ್ಲಿ ಸರಿಯಾಗಿ ಬಳಕೆ ಮಾಡಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ಇದನ್ನೂ ಓದಿ : ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

ದಪ್ಪದ ಕಲ್ಲುಗಳ ನಡುವೆ ತೆಳು ಪದರ ಕಲ್ಲುಗಳ ಬಳಕೆ
ದೇಗುಲದ ಪ್ರಾಂಗಣದಲ್ಲಿ ನೆಲಹಾಸು ಕಾಮಗಾರಿ ನಡೆಯುತ್ತಿದೆ. ಈ ಹಿಂದೆ ತಾತ್ಕಾಲಿಕವಾಗಿ 25 ಲಕ್ಷ ರೂ. ವೆಚ್ಚದಲ್ಲಿ ಹಾಕಲಾಗಿದ್ದ ಕಲ್ಲುಗಳನ್ನೇ ಇದಕ್ಕೆ ಮತ್ತೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಹೊಸದಾಗಿ 1 ಕೋಟಿ ರೂ. ಬಿಡುಗಡೆಯಾಗಿದ್ದರೂª 6 ಇಂಚು ದಪ್ಪದ ಕಲ್ಲುಗಳ ನಡುವೆ ಕಳಪೆ ಗುಣಮಟ್ಟದ ಕಲ್ಲುಗಳನ್ನು ಬಳಸಲಾಗುತ್ತಿದ್ದು ಇದರಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗ ಶಾಮೀಲಾಗಿರುವ ಅನುಮಾನವಿದೆ. ಕೂಡಲೇ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ಕ್ರಮ ವಹಿಸಬೇಕಿದೆ ಎಂದು ಭಕ್ತರಾದ ರಂಗಸ್ವಾಮಿ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next