ಯಳಂದೂರು: ಹಳೇ ಮೈಸೂರು ಭಾಗದ ಪುರಾಣಪ್ರಸಿದ್ಧ ವೈಷ್ಣವ ದೇವಾಲಯವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿಯ ಮಹಾ ಸಂಪ್ರೋಕ್ಷಣೆ ಶುಕ್ರವಾರ ಸಂಪನ್ನಗೊಂಡಿತು. ಕಳೆದ 4 ವರ್ಷಗಳಿಂದ ದೇಗುಲದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ಕಾರಣ ಚಾತಕ ಪಕ್ಷಿಗಳಂತೆ ದೇವರ ದರ್ಶನಕ್ಕೆ ಕಾದಿದ್ದ ಭಕ್ತರು ಶುಕ್ರವಾರ ರಂಗಪ್ಪನನ್ನು ಕಣ್ತುಂಬಿಕೊಂಡರು.
ನಾಲ್ಕು ದಿನಗಳಿಂದ ಹೋಮ: ಕಳೆದ 5 ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಮಾ.29 ರಿಂದ ಏ.1ರ ವರೆಗೂ ಹೋಮ, ಹವನ ಯಜ್ಞ ಯಾಗಾದಿಗಳು ಜರುಗಿದವು. 5ನೇ ದಿನವಾದ ಶುಕ್ರವಾರ ಮುಂಜಾನೆ 4 ಗಂಟೆಯಿಂದಲೇ ಧಾರ್ಮಿಕ ವಿಧಿಗಳು ಆರಂಭಗೊಂಡವು. ಬಿಳಿಗಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ಗರ್ಭಗುಡಿಯನ್ನು ತೆರೆದು ಮೂಲ ದೇವರುಗಳಿಗೆ ಮಹಾಭಿಷೇಕ, ಮಹಾಮಂಗಳಾರತಿ ಮಾಡಿ ನೂತನವಾಗಿ ನಿರ್ಮಾಣಗೊಂಡಿರುವ ರಾಜಗೋಪುರ, ವಿಮಾನಗೋಪುರ ಹಾಗೂ ಗರುಡಗಂಬಕ್ಕೆ ಕಳಶಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ಸಚಿವರಿಗೆ ಪೂರ್ಣಕುಂಭ ಸ್ವಾಗತ: ದೇಗುಲದ ಮಹಾಸಂಪ್ರೋಕ್ಷಣಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ದಂಪತಿ ಸಮೇತ ಆಗಮಿಸಿದ್ದರು. ಇವರೊಂದಿಗೆ ಶಾಸಕ ಎನ್. ಮಹೇಶ್, ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಗ್ರಾಪಂ ಅಧ್ಯಕ್ಷೆ ರಂಗಮ್ಮ ಅವರಿಗೆ ದೇಗುಲದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ದೇಗುಲಕ್ಕೆ ಆಗಮಿಸಿದ ಇವರು, ರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಯಕಿ ಅಮ್ಮನವರ ದರ್ಶನ ಪಡೆದು ಮಹಾಮಂಗಳಾರತಿಯಾದ ನಂತರ ವಸ್ತ್ರ, ಫಲಪುಷ್ಪ ತಾಂಬೂಲಗಳನ್ನು ನೀಡಿ ಗೌರವಿಸಲಾಯಿತು. ನಂತರ ದೇಗುಲದ ಆವರಣದಲ್ಲೇ ಇವರು ಪ್ರಸಾದ ಸ್ವೀಕರಿಸಿದರು.
ತಿರುಪತಿ ಮಾದರಿ ದೇವರಿಗೆ ತಿರುಪ್ಪಾವಡ ಸೇವೆ
ತಿರುಪತಿಯ ತಿಮ್ಮಪ್ಪ ಹಾಗೂ ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ನೆರವೇರಿಸುವ ತಿರುಪ್ಪಾವಡ ಸೇವೆಯನ್ನು ಈ ಬಾರಿ ಬಿಳಿಗಿರಿರಂಗನಾಥಸ್ವಾಮಿಗೂ ಮಾಡಲಾಗಿದ್ದು, ಇದು ಗಮನ ಸೆಳೆಯಿತು. 300 ಕೆ.ಜಿ. ಅಕ್ಕಿಯಿಂದ ಮಾಡಿದ್ದ ಪುಳಿಯೋಗರೆಗೆ ವಿಶೇಷ ಹೂವು ಹಣ್ಣುಗಳ ಅಲಂಕಾರ ಮಾಡಿ ಪೂಜಿಸಲಾಯಿತು. ನಂತರ ಪ್ರಸಾದದ ರೂಪದಲ್ಲಿ ಭಕ್ತರಿಗೆ ಇದನ್ನು ವಿನಿಯೋಗಿಸ ಲಾಯಿತು. ಬೆಂಗಳೂರಿನ ಸೂರ್ಯನಾರಾಯಣಾಚಾರ್ ರವರು ಇದರ ದಾನಿಗಳಾಗಿದ್ದರು.
ಹೊರ ಭಾಗದ ಭಕ್ತರಿಗೆ ದೇವಾಲಯ ಮುಕ್ತ
ಕೋವಿಡ್ ಹಿನ್ನೆಲೆಯಲ್ಲಿ ಮಹಾಸಂಪ್ರೋಕ್ಷಣೆಗೆ ಕಳೆದ 5 ದಿನಗಳಿಂದ ಸ್ಥಳೀಯರನ್ನು ಹೊರತುಪಡಿಸಿ ಇತರೆ ಗ್ರಾಮ, ಜಿಲ್ಲೆ, ರಾಜ್ಯದ ಭಕ್ತರಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮಹಾಸಂಪ್ರೋಕ್ಷಣೆಗೆ ಶುಕ್ರವಾರ ಸಂಪನ್ನಗೊಂಡಿದೆ. ಶನಿವಾರದಿಂದ ಭಕ್ತರಿಗೆ ದೇಗುಲ ಮುಕ್ತವಾಗಲಿದ್ದು, ಸಾರ್ವಜನಿಕರು ದೇವರ ದರ್ಶನವನ್ನು ಪಡೆಯಬಹುದು ಎಂದು ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.