Advertisement

ಬೈಕ್‌ ಯಾತ್ರೆ; ಮೂರು ದೇಶ ಸುತ್ತಿ ಪರಿಸರ ಜಾಗೃತಿ

11:54 AM Oct 11, 2018 | |

ಮಹಾನಗರ: ಇತ್ತೀಚೆಗೆ ಕೊಡಗು ಮತ್ತು ಕೇರಳದಲ್ಲಾದ ಪ್ರಕೃತಿ ವಿಕೋಪಕ್ಕೆ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದ್ದು, ಅನೇಕ ಮಂದಿ ಪ್ರಾಣತೆತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕೃತಿ ವಿಕೋಪಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ ನೆಟ್ಟು, ಪರಿಸರ ಸಂರಕ್ಷಣೆ ಮಾಡುವುದು ಅತೀ ಮುಖ್ಯ. ಈ ಉದ್ದೇಶವನ್ನಿಟ್ಟುಕೊಂಡು ಗಡಿನಾಡು ಕಾಸರಗೋಡಿನ ಮೂವರು ಮೂರು ದೇಶಗಳಲ್ಲಿ ಬೈಕ್‌ ಸುತ್ತಾಟ ನಡೆಸಲಿದ್ದಾರೆ.

Advertisement

ಕಾಸರಗೋಡಿನ ಸುಧೀರ್‌ ಕೂಡ್ಲು, ಶಾನ್‌ ಕಲ್ಲಂಗಡಿ, ಸಾಹಿರ್‌ ಕುಂಬ್ಳೆ ಅವರು ತಮ್ಮ ರಾಯಲ್‌ ಎನ್‌ ಫೀಲ್ಡ್‌ ಹಿಮಾಲಯ ಬೈಕ್‌ಗಳಲ್ಲಿ 30 ದಿನಗಳ ಯಾತ್ರೆಯನ್ನು ಬುಧವಾರ ಕಾಸರಗೋಡಿನಿಂದ ಆರಂಭಿಸಿದ್ದಾರೆ. ಭಾರತ, ನೇಪಾಳ, ಭೂತಾನ್‌ ದೇಶಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿಗಳ ಬಗ್ಗೆ ಅಧ್ಯಯನಕ್ಕಾಗಿ ಮಂಗಳೂರು ಬುಲ್ಸ್‌ ಮೋಟರ್‌ ಸೈಕಲ್‌ ಕ್ಲಬ್‌ ಸಹಯೋಗದೊಂದಿಗೆ ಯಾತ್ರೆ ನಡೆಯಲಿದೆ. ಗೋವಾ, ಮುಂಬಯಿ, ಸೂರತ್‌, ಅಹಮದಾಬಾದ್‌, ಜೈಪುರ, ಲಕ್ನೋ, ನೇಪಾಳ, ಭೂತಾನ್‌, ಕೊಲ್ಕತ್ತಾ, ಪುರಿ, ಚೆನೈ, ಕರೈಕಲ್‌, ರಾಮೇಶ್ವರ, ಕನ್ಯಾಕುಮಾರಿ, ಕೊಟ್ಟಾಯಂ, ಕೊಚ್ಚಿ, ವಯಾನಾಡ್‌, ಕೇರಳ, ಕೊಡಗು ಮೂಲಕ ಪುನಃ ಕಾಸರಗೋಡಿಗೆ ಈ ಯಾತ್ರೆ ತಲುಪಲಿದೆ.

ಮೂರು ಮಂದಿ ಬೈಕ್‌ ಸವಾರರು ಪ್ರತೀ ದಿನ ತಮ್ಮ ಯಾತ್ರೆಯನ್ನು ಬೆಳಗ್ಗೆ 5 ಗಂಟೆಗೆ ಆರಂಂಭಿಸಿ, ಸಂಜೆ 6 ಗಂಟೆವರೆಗೂ ಬೈಕ್‌ ರೈಡಿಂಗ್‌ ಮಾಡುವ ಯೋಜನೆ ಹೊಂದಿದ್ದಾರೆ. ಪ್ರತೀ ದಿನ 500 ಕಿ.ಮೀ.ಗೂ ಹೆಚ್ಚು ಬೈಕ್‌ ಸವಾರಿ ಮಾಡುವ ಗುರಿ ಹೊಂದಿರುವ ಅವರು, ಮೊಬೈಲ್‌ ಚಾರ್ಜಿಂಗ್‌ಗೆ, ಬ್ಯಾಗ್‌ ಇಡಲು ವ್ಯವಸ್ಥೆ ಮುಂತಾದ ಎಲ್ಲ ಸೌಕರ್ಯಗಳನ್ನೂ ತಮ್ಮ ಬೈಕ್‌ ಗಳಲ್ಲಿಯೇ ಮಾಡಿಕೊಂಡಿದ್ದಾರೆ. ಕೇರಳ ಮತ್ತು ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದ ಸನ್ನಿವೇಷಗಳನ್ನು ತಮ್ಮ ಬೈಕ್‌ ನಲ್ಲಿಯೇ ಅಂಟಿಸಿದ್ದು, ಒಟ್ಟಾರೆ 14,000 ಕಿ.ಮೀ. ದೂರ ಕ್ರಮಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಅವರು ತೆರಳು ವಿವಿಧ ಪ್ರದೇಶಗಳ ಸಂಸ್ಕೃತಿ, ಆಚಾರ, ವಿಚಾರ ಸೇರಿದಂತೆ ಇನ್ನಿತರ ಫೋಟೋಗಳನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ ಮತ್ತು ಫೇಸ್‌ಬುಕ್‌ ಖಾತೆಯನ್ನು ಹಾಕಲಿದ್ದಾರೆ.

ಅಲ್ಲಲ್ಲಿ ಗಿಡ ನೆಟ್ಟು ಅರಿವು 
ಮುಂದಿನ ಜನಾಂಗಕ್ಕೆ ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಯಾತ್ರೆಯ ಉದ್ದೇಶವಾಗಿದೆ. ಆದ್ದರಿಂದ ಪರಿಸರ ಸಂರಕ್ಷಣೆಯೇ ಇದರ ಮುಖ್ಯ ಧ್ಯೇಯ. ಈ ಯಾತ್ರೆಯು ಸಾಗುವ ದಾರಿಯಲ್ಲಿ ಶಾಲಾ-ಕಾಲೇಜು ಸೇರಿದಂತೆ ಸರಕಾರಿ ಕಟ್ಟಡಗಳಿಗೆ ಈ ಮೂರು ತೆರಳಿ ಆ ಪ್ರದೇಶದಲ್ಲಿ ಗಿಡ ನೆಟ್ಟು ಪರಿಸರ ಜಾಗೃತಿ ಬಗ್ಗೆ ತಿಳಿಯಪಡಿಸಲಿದ್ದಾರೆ.

ಗಿಡ ನೆಟ್ಟು ಜಾಗೃತಿ
ಮುಂದಿನ ತಲೆಮಾರಿಗೆ ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ, ಜಾಗೃತರಾಗಬೇಕು. ಇದೇ ಪರಿಕಲ್ಪನೆಯನ್ನಿಟ್ಟು 30 ದಿನಗಳ ಸುಮಾರು 14,000 ಕಿ.ಮೀ., ಮೂರು ದೇಶವನ್ನು ಸುತ್ತಿ, ಆಯಾ ಪ್ರದೇಶದಲ್ಲಿ ಗಿಡ ನೆಟ್ಟು ಜಾಗೃತಿ ಮೂಡಿಸಲಿದ್ದೇವೆ. 
– ಸುಧೀರ್‌ ಕೂಡ್ಲು, ಬೈಕ್‌ ರೈಡರ್‌

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next