ನವದೆಹಲಿ: ದೇಶದಲ್ಲಿ ಜಾರಿಗೆ ಬಂದಿರುವ ನೂತನ ಸಂಚಾರ ನಿಯಮಗಳಿಂದಾಗಿ ದಂಡ ಹಾಕಿಸಿಕೊಳ್ಳುವವರ ಸಂಖ್ಯೆ ಪ್ರತನಿತ್ಯ ಏರತೊಡಗಿದೆ. ಕೇಂದ್ರದ ಈ ನಿಯಮ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದ್ದು ಮಾತ್ರವಲ್ಲದೆ, ವಾಹನ ಸವಾರರು ದಂಡದಿಂದ ತಪ್ಪಿಸಿಕೊಳ್ಳಲು ನಾನಾ ಉಪಾಯಗಳನ್ನು ಮಾಡುತ್ತಾ ಟ್ರಾಫಿಕ್ ಪೊಲೀಸರನ್ನೇ ದಂಗಾಗುವಂತೆ ಮಾಡುತ್ತಿದ್ದಾರೆ.
ಇಲ್ಲೊಂದೆಡೆ ಬೈಕ್ ಸವಾರರು ದುಬಾರಿ ದಂಡ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ನೂತನ ಸಂಚಾರಿ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುವುದು, ಅಗತ್ಯ ದಾಖಲೆಗಳಿಲ್ಲದೇ ಇರುವುದು ಕೂಡ ಅಪರಾಧ. ಇದಕ್ಕಾಗಿ ಟ್ರಾಫಿಕ್ ಪೊಲೀಸರು ಕನಿಷ್ಠ 2000 ರೂ. ದಂಡ ವಿಧಿಸುತ್ತಿದ್ದಾರೆ.
ಭಾರೀ ಪ್ರಮಾಣದ ದಂಡ ಬೀಳುವುದರಿಂದ ಪಾರಾಗಲು ಇಲ್ಲಿ ಬೈಕ್ ಸವಾರರು ಪೊಲೀಸರ ಎದುರೇ ಬೈಕ್ ತಳ್ಳಿಕೊಂಡು ಹೋಗುತ್ತಾರೆ. ಒಬ್ಬರೋ, ಇಬ್ಬರೋ ಬೈಕ್ ತಳ್ಳಿಕೊಂಡು ಹೋದರೆ ತಾಂತ್ರಿಕ ಸಮಸ್ಯೆ ಅಥವಾ ಪೆಟ್ರೊಲ್ ಇಲ್ಲಾ ಎಂದುಕೊಳ್ಳಬಹುದು. ಆದರೇ ಪೊಲೀಸರು ಇರುವ ಜಾಗದವರೆಗೆ ಬೈಕ್ ಓಡಿಸಕೊಂಡು ಬರುವ ಸವಾರರು ಆನಂತರ ಅದರಿಂದ ಇಳಿದು ಸಾಮೂಹಿಕವಾಗಿ ತಳ್ಳಿಕೊಂಡು ಹೋಗುತ್ತಿದ್ದಾರೆ.
ಸಂಚಾರಿ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುವುದು ಅಪರಾಧ. ಆದರೆ ಹೆಲ್ಮೆಟ್ ಇಲ್ಲದೆ ಬೈಕ್ ತಳ್ಳುವುದು ಅಪರಾಧವಲ್ಲ. ಇದನ್ನೇ ಉಪಾಯವಾಗಿ ಬಳಸಿಕೊಂಡ ಎಲ್ಲಾ ಬೈಕ್ ಸವಾರರು ಪೊಲೀಸರ ಎದುರೇ ತಳ್ಳಿಕೊಂಡು ಹೋಗುತ್ತಿದ್ದಾರೆ . ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಪಂಕಜ್ ನೈನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಬೈಕ್ ಸವಾರರ ಈ ಉಪಾಯ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವಂತೆ ಮಾಡಿದೆ.