Advertisement

ರಸ್ತೆ ನಿಯಮಗಳ ಪಾಲನೆ ಜಾಗೃತಿಗಾಗಿ ಬೈಕ್‌ ಪರ್ಯಟನೆ

10:36 AM Sep 17, 2019 | Sriram |

ಕಾಪು: ಭಾರತದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಚಟುವಟಿಕೆಗಳು, ವಿವಿಧೆಡೆಗಳಲ್ಲಿನ ಆಚಾರ – ವಿಚಾರ ಮತ್ತು ಆಹಾರ ಶೆ„ಲಿಯ ಬಗ್ಗೆ ಅಧ್ಯಯನದೊಂದಿಗೆ ಚಿತ್ರೀಕರಣ ನಡೆಸಿ, ಸಮಗ್ರ ಸಾಕ್ಷ್ಯಚಿತ್ರ ನಿರ್ಮಿಸುವ ಜೊತೆಗೆ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸಚಿನ್‌ ಶೆಟ್ಟಿ ಕಾಪು ಇವರ ನೇತೃತ್ವದ ತಂಡವು ಕೈಗೆತ್ತಿಕೊಂಡಿರುವ ಮಿಡ್ಲ್ಯಾಂಡ್ ರಾಜ್ಯಗಳ ಕಡೆಗಿನ ಪಯಣಕ್ಕೆ ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಅವರು ರವಿವಾರ ಚಾಲನೆ ನೀಡಿದರು.

Advertisement

ಕಳೆದ ಮೂರು ವರ್ಷಗಳಿಂದ ಬೈಕ್‌ ಮೂಲಕ ದೇಶ ಪರ್ಯಟನೆ ನಡೆಸುತ್ತಿರುವ ಕಾಪುವಿನ ಛಾಯಾಚಿತ್ರಗ್ರಾಹಕ ಸಚಿನ್‌ ಶೆಟ್ಟಿ ಅವರ ಈ ಬಾರಿಯ ಮಿಡ್ಲ್ಯಾಂಡ್ ರಾಜ್ಯಗಳತ್ತ ಪರ್ಯಟನೆಗೆ ಪಡುಬಿದ್ರಿಯ ಸರ್ವಿಸ್‌ ಸ್ಟೇಷನ್‌ ಮಾಲಕ ದಿನೇಶ್‌ ಕೋಟ್ಯಾನ್‌ ಹೆಜಮಾಡಿ ಮತ್ತು ಛಾಯಾಚಿತ್ರಗ್ರಾಹಕ ರವಿ ಆಚಾರ್ಯ ಮೂಡುಬಿದಿರೆ ಅವರು ಕೈ ಜೋಡಿಸಿದ್ದಾರೆ.

ಬೈಕ್‌ ಯಾತ್ರೆಯ ವೇಳೆ ತಾವು ತೆರಳುವ ಪ್ರದೇಶಗಳ ಜನ ಜೀವನ, ಸಂಸ್ಕೃತಿ, ಆಹಾರ ಪದ್ಧತಿಯ ಬಗ್ಗೆ ವೀಡಿಯೋ ದಾಖಲೀಕರಣ ಮಾಡಿ, ಬಳಿಕ ಅದನ್ನು ಶಟರ್‌ ಬಾಕ್ಸ್‌ ಫಿಲ್ಮ್ಸ್ ಹೆಸರಿನ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ. ಈ ಬಾರಿಯ ಯಾತ್ರೆಯ ವೇಳೆ ಸಂಚಾರ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನೂ ನಡೆಸಲಿದ್ದಾರೆ.

45 ದಿನ, 10 ಸಾವಿರ ಕಿಮೀ. ಸಂಚಾರ,
3 ಲಕ್ಷ ರೂ. ವೆಚ್ಚ
411 ಸಿಸಿ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ ಮೂಲಕ 45 ದಿನಗಳ ಕಾಲ ನಡೆಯಲಿರುವ 10 ಸಾವಿರ ಕೀ. ಮೀ. ದೂರದವರೆಗೆ ರೈಡ್‌ ಟು ಮಿಡ್‌ಲ್ಯಾಂಡ್‌ (ಉಡುಪಿ-ಸ್ವಿಟಿ-ಉಡುಪಿ) ಎಂಬ ಹೆಸರಿನ ಸಾಹಸ ಯಾತ್ರೆ ನಡೆಸಲಿದ್ದು, ಇದಕ್ಕೆ 3 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ.

ವಿವಿಧ ಪ್ರಸಿದ್ಧ ಕ್ಷೇತ್ರಗಳ ಭೇಟಿ
ಕಾಪುವಿನಿಂದ ಪ್ರಾರಂಭಗೊಂಡ ಮಿಡ್ಲ್ಯಾಂಡ್ ಪರ್ಯಟನೆಯು ಉಡುಪಿ, ಪುಣೆ, ಮುಂಬೈ, ವಡೋದರಾ, ಉದಯಪುರ, ಜೈಪುರ, ಕುರುಕ್ಷೇತ್ರ, ಜಿಬಿ, ಚಿತುಲ್‌, ತಾಬೊ, ಮಡ್‌ ವಿಲೇಜ್‌, ಖಾಝ, ಚಂದ್ರತಾಲ್‌, ಮನಾಲಿ, ಚಂಡೀಗಡ, ಆಗ್ರಾ, ಇಂದೋರ್‌, ಔರಂಗಾಬಾದ್‌, ಸೋಲಾಪುರ, ಹಂಪಿ, ಬೆಂಗಳೂರು, ಮಡಿಕೇರಿ, ಮಂಗಳೂರು ಮೂಲಕ ಕಾಪುವಿಗೆ ಬಂದು ಸಮಾಪನಗೊಳ್ಳಲಿದೆ.

Advertisement

ವರ್ಷಕ್ಕೆ 13,000 ಕಿ.ಮೀ. ಸಂಚಾರ ಗುರಿ
2017ರಲ್ಲಿ ಲೈಟ್ಸ್‌ ಕೆಮರಾ ಲಡಾಕ್‌ ಎಂಬ ಘೋಷಣೆಯೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ 32 ದಿನಗಳ ಕಾಲ 13 ಸಾವಿರ ಕಿ.ಮೀ. ದೂರದ ಪಯಣ, 2018ರಲ್ಲಿ ಸ್ನೇಹಿತ ಅಭಿಷೇಕ್‌ ಶೆಟ್ಟಿಯವರೊಂದಿಗೆ ಗೋ ಹಿಮಾಲಯಾಸ್‌ ಎಂಬ ಘೋಷಣೆಯೊಂದಿಗೆ ಇಂಡಿಯಾ ಟು ಭೂತಾನ್‌ 40 ದಿನಗಳ 13,560 ಕಿ. ಮೀ. ಬೈಕ್‌ ಸಾಹಸ ಯಾತ್ರೆ ನಡೆಸಿದ್ದರು. ಈ ಬಾರಿ ಕೂಡಾ 45 ದಿನಗಳ ಸಂಚಾರದ ವೇಳೆ 10 ಸಾವಿರ ಕಿಮೀ. ಗೂ ಮಿಕ್ಕ ಸಂಚಾರದ ಗುರಿ ಹೊಂದಿದ್ದಾರೆ.

ಹವ್ಯಾಸಿಗಳ ಜತೆ ಕೈ ಜೋಡಿಸಿದ
ಸರ್ವಿಸ್‌ ಸ್ಟೇಷನ್‌ ಮಾಲಕ
ಹವ್ಯಾಸಿ ಬೈಕ್‌ ರೈಡರ್‌ ಆಗಿರುವ ಸಚಿನ್‌ ಶೆಟ್ಟಿ ಅವರು ವೃತ್ತಿಯಲ್ಲಿ ಛಾಯಾಚಿತ್ರಗ್ರಾಹಕರಾಗಿದ್ದು, ಇವರೊಂದಿಗೆ ಪ್ರಥಮ ಬಾರಿಗೆ ಬೈಕ್‌ ಸಾಹಸ ಯಾತ್ರೆ ಕೈಗೊಳ್ಳಲಿರುವ ದಿನೇಶ್‌ ಕೋಟ್ಯಾನ್‌ ಅವರು ಪಡುಬಿದ್ರಿಯಲ್ಲಿ ಸರ್ವಿಸ್‌ ಸ್ಟೇಷನ್‌ ನಡೆಸುತ್ತಿದ್ದಾರೆ. ಮಂಗಳೂರಿನ ವೈ.ಎಂ.ಸಿ ಸಂಸ್ಥೆಯಡಿ ಅಂತಾರಾಜ್ಯ ಬೈಕ್‌ ಯಾತ್ರೆ ನಡೆಸಿರುವ ರವಿ ಆಚಾರ್ಯ ಅವರು ವೃತ್ತಿಯಲ್ಲಿ ಛಾಯಾಚಿತ್ರಗ್ರಾಹಕರಾಗಿದ್ದಾರೆ.
ಕಾಪು ಹಳೇ ಮಾರಿಗುಡಿ ದೇವಸ್ಥಾನದ ಬಳಿ ನಡೆದ ಯಾತ್ರೆಗೆ ಚಾಲನೆ ನೀಡುವ ಸರಳ ಸಮಾರಂಭದಲ್ಲಿ ಸಮಾಜರತ್ನ ಕೆ. ಲೀಲಾಧರ ಶೆಟ್ಟಿ, ಎಸ್‌.ಕೆ.ಪಿ.ಎ ಸೌಹಾರ್ದ ಸೊಸೈಟಿಯ ಅಧ್ಯಕ್ಷ ವಾಸುದೇವ ರಾವ್‌, ಪುರಸಭೆ ಸದಸ್ಯ ಅನಿಲ್‌ ಕುಮಾರ್‌, ಎಸ್‌.ಕೆ.ಪಿ.ಎ ಕಾಪು ವಲಯದ ಅಧ್ಯಕ್ಷ ವೀರೇಂದ್ರ ಪೂಜಾರಿ ಶಿರ್ವ, ದಿವಾಕರ ಶೆಟ್ಟಿ ಮಲ್ಲಾರು, ಜಯಶ್ರೀ ಶೆಟ್ಟಿ, ವಿವಿಧ ಸಂಘ – ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು, ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಜಾಗೃತಿ ಮೂಡಿಸುವ ಉದ್ದೇಶ
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು. ಆ ಮೂಲಕ ಜನರಲ್ಲಿ ಸಾಂಸ್ಕೃತಿಕವಾದ ಜಾಗೃತಿಯನ್ನು ಮೂಡಿಸಬೇಕು ಎಂಬ ಸಂಕಲ್ಪದೊಂದಿಗೆ ದೇಶ ಸುತ್ತಲು ಆಲೋಚನೆ ಮಾಡಿದ್ದೇನೆ. ವಿವಿಧ ರಾಜ್ಯಗಳ ಜನಜೀವನವು ನಡೆಸುತ್ತಿರುವ ಆಚಾರ-ವಿಚಾರ, ಆಹಾರ ಶೈಲಿ ಮತ್ತು ಸಾಂಸ್ಕೃತಿಕ ಸಾಂಪ್ರದಾಯಿಕ ಚಟುವಟಿಕೆಗಳ ಅಧ್ಯಯನ ನಡೆಸಿ, ಚಿತ್ರೀಕರಣದ ಉದ್ದೇಶ ಹೊಂದಿದ್ದು, ಇದರೊಂದಿಗೆ ಸಂಚಾರಿ ಕಾನೂನು ನಿಯಮಗಳನ್ನು ಪಾಲಿಸುವ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ.
– ಸಚಿನ್‌ ಶೆಟ್ಟಿ ಕಾಪು

ಉದ್ದೇಶ ಫ‌ಲಪ್ರದವಾಗಲಿ
ಯಾತ್ರೆಯ ವೇಳೆ ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ಜನಜಾಗೃತಿ, ವಿವಿಧ ರಾಜ್ಯಗಳ ಜನರ ಜನಜೀವನ, ಸ್ಥಿತಿ ಗತಿ, ಆಚಾರ-ವಿಚಾರ, ಸಂಸ್ಕಾರ, ಸಂಪ್ರದಾಯಗಳ ಬಗ್ಗೆ ಅಧ್ಯಯನ ಮಾಡಿ, ಆ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುವ ಉದ್ದೇಶದೊಂದಿಗೆ ಕಾಪುವಿನ ಯುವಕರು ಕೈಗೆತ್ತಿಕೊಂಡಿರುವ ಬೈಕ್‌ ಸಾಹಸ ಯಾತ್ರೆ ಯಶಸ್ವಿಯಾಗಲಿ. ಯುವಕರು ಯಾತ್ರೆಯ ಜತೆಗೆ ಸಂಚಾರಿ ನಿಯಮಗಳನ್ನು ಪಾಲನೆಮಾಡುವುದರೊಂದಿಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವಂತಾಗಲಿ.
– ಮಹೇಶ್‌ ಪ್ರಸಾದ್‌, ಪೊಲೀಸ್‌ ವೃತ್ತ ನಿರೀಕ್ಷಕರು, ಕಾಪು

Advertisement

Udayavani is now on Telegram. Click here to join our channel and stay updated with the latest news.

Next