ಮಹದೇವಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಬೆಳ್ಳಂದೂರಿನಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಶನಿವಾರ ಬೈಕ್ ರ್ಯಾಲಿ ನಡೆಯಿತು.
ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ವೇಗವಾಗಿ ಪ್ರಗತಿ ಹೊಂದುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ್ದು,
ಕೇಂದ್ರದ ಮುದ್ರಾ, ಉಜ್ವಲ, ಸುಕನ್ಯಾ ಸಮೃದ್ಧಿ, ಪ್ರಧಾನಮಂತ್ರಿ ಜನಧನ್, ಜೀವನಜ್ಯೋತಿ ವಿಮೆ, ಮೇಕ್ ಇನ್ ಇಂಡಿಯಾ, ಬೇಟಿ ಬಚಾವೋ; ಬೇಟಿ ಪಡಾವೋ ಸೇರಿದಂತೆ ಹಲವಾರು ಯೋಜನೆಗಳಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ.
ಇನ್ನೂ ಹೆಚ್ಚಿನ ಸಂಖ್ಯೆಯ ಜನ ಈ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಅರಿವು ಮೂಡಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳ್ಳಂದೂರಿನಿಂದ ಆರಂಭವಾದ ಬೈಕ್ ರ್ಯಾಲಿ ಪಣತೂರು, ವರ್ತೂರು, ಮಾರತ್ತಹಳ್ಳಿ, ರಾಮಗೊಂಡನಹಳ್ಳಿ, ವೈಟ್‌ಫೀಲ್ಡ್ ಸೇರಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ರ್ಯಾಲಿ ಸಾಗಿತು. ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ, ಯುವಮೋರ್ಚಾ ಅಧ್ಯಕ್ಷ ರಾಜೇಶ್, ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಜಯಚಂದ್ರಾ ರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಮಿಥುನ್ ರೆಡ್ಡಿ, ಸುರೇಶ್, ಚನ್ನಸಂದ್ರ ಚಂದ್ರಶೇಖರ್, ನಾಗೇಶ್, ಯೋಗೇಶ್ ಆರಾಧ್ಯ ಮತ್ತಿತರರು ಇದ್ದರು.