ದಾವಣಗೆರೆ: ಕಾಲೇಜ್ ವಿದ್ಯಾರ್ಥಿಗಳಿಗೆ ಎಲ್ಲಾ ಹೋಟೆಲ್ ಗಳಲ್ಲಿ ಊಟ ಹಾಗೂ ಉಪಹಾರದ ದರದಲ್ಲಿ ಶೇ.25ರಷ್ಟು ರಿಯಾಯಿತಿ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಕರುನಾಡ ಸಮರ ಸೇನೆ ವಿದ್ಯಾರ್ಥಿ ಘಟಕ ಶನಿವಾರ ಬೈಕ್ ರ್ಯಾಲಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಬಿಐಇಟಿ ಕಾಲೇಜಿನಿಂದ ಆರಂಭವಾದ ಬೈಕ್ ರ್ಯಾಲಿ ಬಾಯ್ಸ ಹಾಸ್ಟೆಲ್, ಗುಂಡಿ ವೃತ್ತ, ವಿದ್ಯಾರ್ಥಿ ಭವನ, ಅಂಬೇಡ್ಕರ್ ಸರ್ಕಲ್, ಪಿಬಿ ರಸ್ತೆಯಲ್ಲಿ ಸಾಗಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡಿದ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಐಗೂರು ಸುರೇಶ್, ದಾವಣಗೆರೆ ಜಿಲ್ಲೆಯಲ್ಲಿ ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಬೇರೆ ಬೇರೆ ಗ್ರಾಮಗಳಿಂದ ವ್ಯಾಸಂಗಕ್ಕಾಗಿ ಓಡಾಡುತ್ತಿದ್ದಾರೆ.
ಆ ವಿದ್ಯಾರ್ಥಿಗಳಿಗೆ ಊಟ,ಉಪಹಾರದ ಸಮಸ್ಯೆ ಎದುರಾಗಲಿದೆ. ಇಂದಿನ ಪರಿಸ್ಥಿತಿ ವಿದ್ಯಾರ್ಥಿಗಳು ದುಬಾರಿ ದರ ನೀಡಿ ಹೋಟೆಲ್‌ನಲ್ಲಿ ಊಟ-ಉಪಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಹೋಟೆಲ್ ಮಾಲೀಕರ ಸಭೆ ನಡೆಸಿ,
-ವಿದ್ಯಾರ್ಥಿಗಳಿಗೆ 25% ರಿಯಾಯಿತಿ ದರದಲ್ಲಿ ತಿಂಡಿ, ಊಟ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ರ್ಯಾಲಿಯಲ್ಲಿ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅನಿಲ್‌ಕುಮಾರ್, ಮಂಜು ಮಿಂಚು ಆವರಗೆರೆ, ಜಾಕೀರ್, ಪ್ರಶಾಂತ್, ಕುಮಾರ್, ವಸಂತ್, ಲಿಂಗರಾಜ್, ಡಿ. ನಾಗರಾಜ್ ಇತರರು ಪಾಲ್ಗೊಂಡಿದ್ದರು.