Advertisement
ನಾವು ಮೀರುತ್ತಿರುವ ನಿಯಮ ಮತ್ತು ಕಾನೂನುಗಳನ್ನು ಪಟ್ಟಿ ಮಾಡಲು ಹೊರಟರೆ ಭ್ರಷ್ಟಾಚಾರದ ಮೂಲವೇ ಇದೆಂಬುದು ಸಾಬೀತಾಗುತ್ತದೆ. ಎಲ್ಲವೂ ಬೇಡ, ಸಣ್ಣ ಉದಾಹರಣೆಯೆಂದರೆ, ದಿನನಿತ್ಯ ನಮ್ಮೆಲ್ಲರ ಕಣ್ಣೆದುರಿಗೆ ಕಾಣುವ ರಸ್ತೆ ನಿಯಮಗಳ ಉಲ್ಲಂಘನೆ. ಬೇಕಾಬಿಟ್ಟಿ ವಾಹನ ಚಲಾಯಿಸುವುದು, ಅಜಾಗರೂಕತೆಯಿಂದ ಹಾಗೂ ಅತೀವೇಗವಾಗಿ ಚಲಾಯಿಸುವಿಕೆ, ಕುಡಿದು ವಾಹನ ಚಲಾಯಿಸುವುದು, ಎಲ್ಲೆಂದರಲ್ಲಿ ಗಾಡಿಯನ್ನು ನುಗ್ಗಿಸುವುದು ಸರ್ವೇಸಾಮಾನ್ಯವಾಗಿ ಬಿಟ್ಟಿರುವುದು ಚಿಂತಾಜನಕವೇ ಸರಿ. ಒಂದೆಡೆಯಲ್ಲಿ ಆಡಳಿತವನ್ನು ದೂರುತ್ತಿರುತ್ತೇವೆ. ಇನ್ನೊಂದೆಡೆಯಲ್ಲಿ ನಾವೇ ನಿಯಮಗಳನ್ನು ಮೀರುತ್ತಿರುತ್ತೇವೆ. ರಸ್ತೆ ನಿಯಮಗಳೆಲ್ಲವೂ ನಮ್ಮ ಜೀವದ ಸುರಕ್ಷತೆಗೆ ಇರುವಂಥಲ್ಲಾದರೂ ನಾವದನ್ನು ಪಾಲಿಸುವುದಿಲ್ಲ. ಎಲ್ಲಾ ನಿಯಮಗಳನ್ನು ಬದಿಗೆ ತೂರಿ ಗಾಡಿ ಓಡಿಸುವುದರಲ್ಲಿ ನಾವು ನಿಸ್ಸೀಮರು. ನಮಗಿಂದು ಯಾವುದಕ್ಕೂ ಸಮಯವಿಲ್ಲ.
Related Articles
Advertisement
ಹೆಲ್ಮೆಟ್ ಹಾಕಿ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿರೆಂದು ಹೇಳಿದರೂ ಊಹುಂ… ನಾವದಕ್ಕೆ ಕಿವಿಗೊಡುವುದಿಲ್ಲ. ಮೊದಮೊದಲು ದಂಡದ ಮೊತ್ತ ಕಡಿಮೆ ಇದ್ದಾಗ ದಂಡವನ್ನಾದರೂ ತೆತ್ತುತ್ತಿದ್ದರೇ ಹೊರತು ಹೆಲ್ಮೆಟ್ ಧರಿಸುತ್ತಿರಲಿಲ್ಲ. ಈ ದಂಡದ ಮೊತ್ತ ಯಾವಾಗ ಹೆಲ್ಮೆಟ್ ದರಕ್ಕಿಂತ ಜಾಸ್ತಿಯಾಯಿತೋ ಆಗ ಹೆಲ್ಮೆಟ್ ಹೆಚ್ಚಿನ ಬೈಕಿಗಳಲ್ಲಿ ಕಂಡು ಬಂದವು. ಆದಾಗ್ಯೂ ಅದನ್ನು ಧರಿಸುವುದು ಮಾತ್ರ ಪೊಲೀಸರನ್ನು ಕಂಡಾಗ ಮಾತ್ರ. ಬೈಕ್ ಅಫಘಾತದಲ್ಲಿ ಮರಣಹೊಂದಿದವರಲ್ಲಿ 98.6% ರಷ್ಟು ಸಾವಿಗೆ ಹೆಲ್ಮೆಟ್ ಧರಿಸದೇ ಇದ್ದುದೇ ಕಾರಣ. ಹೆಲ್ಮೆಟ್ ಇದ್ದರೂ ಧರಿಸುವ ಬುದ್ಧಿ ಇನ್ನೂ ಬಂದಿಲ್ಲ. ಹೆಲ್ಮೆಟನ್ನು ಬೈಕಿನ ಮೇಲೋ ಅಥವಾ ಕೈಗೆ ಸಿಕ್ಕಿಸಿಯೋ ಹೋಗುವಷ್ಟು ಅಹಂಕಾರ ನಮಗೆ.
ನಾವೇಕೆ ಹೀಗೆ? ಯಾಕೆ ನಾವು ಬದಲಾಗುವುದಿಲ್ಲ? ಎಂಬ ಪ್ರಶ್ನೆಗಳು ಹುಟ್ಟುತ್ತಲೇ ಇರುತ್ತವೆಯೇ ಹೊರತು ಅದರಿಂದಾಗಬೇಕಾದುದು ಏನು ಇಲ್ಲವೆಂಬುದೇ ನಮ್ಮ ಭಾವನೆ. ಇದಕ್ಕೆಲ್ಲಾ ಕಾರಣ ನಾವೇ ಮತ್ತು ನಮ್ಮ ಬೇಜವಾಬ್ದಾರಿತನ. ನಮಗೆ ಕುಟುಂಬ ಬೇಕು, ಜವಾಬ್ದಾರಿ ಬೇಡ. ನಮಗೆ ಸಮಾಜ ಬೇಕು, ಅಲ್ಲಿನ ಜವಾಬ್ದಾರಿ ಬೇಡವೇ ಬೇಡ. ಅಜಾಗರೂಕತೆ ಮತ್ತು ಅತೀವೇಗದಿಂದಾಗಿ ಕುಟುಂಬದ ಆಸರೆಯಾಗಿದ್ದ ಮಗನನ್ನೋ, ಗಂಡನನ್ನೋ, ಸಹೋದರರನ್ನೋ ಕಳಕೊಂಡ ನೋವಿನ ಕತೆಗಳು ಕಣ್ಣೆದುರಿಗೇ ಇದ್ದರೂ ನಾವು ಅವೆಲ್ಲದರಿಂದ ಹೊರಗಿದ್ದಂತೆ ವರ್ತಿಸುತ್ತೇವೆ. ಪತ್ರಿಕೆ, ಫೇಸ್‌ಬುಕ್, ವಾಟ್ಸ್‌ಪ್‌ಗ್ಳಲ್ಲಿ ಅದೆಷ್ಟೋ ಜಾಗೃತಿಯ ಸಂಗತಿಗಳು ಹರಿದಾಡಿದ್ದರೂ ನಾವದನ್ನು ಲೈಕ್, ಶೇರ್, ಫಾರ್ವರ್ಡ್ ಮಾಡುತ್ತೇವೆಯೇ ಹೊರತು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
ಹೊಸದಾಗಿ ಕೊಂಡ ಮೊಬೈಲಿಗೆ ಗೋರಿಲ್ಲಾ ಗ್ಲಾಸ್ ಹಾಕಿ ರಕ್ಷಿಸಿಕೊಳ್ಳಲು ಮುಂದಾಗುತ್ತೇವೆ ಆದರೆ ಹೆಲ್ಮೆಟ್ ಧರಿಸಲು ಮುಂದಾಗುವುದಿಲ್ಲ ಎಂಬ ಮೆಸೇಜು ತಮಾಷೆಯ ರೂಪದಲ್ಲಿ ವಾಟ್ಸಾಪ್‌ನಲ್ಲಿ ಹರಿದಾಡಿತ್ತಾದರೂ ಅದನ್ನು ಓದಿದವರು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಇದಕ್ಕೆ ಸೀದಾಸಾದಾ ಉದಾಹರಣೆಯೆಂದರೆ ಮೊನ್ನೆ ಮೊನ್ನೆ ನಡೆದ ಘಟನೆ.
ನನ್ನ ಮಿತ್ರರೊಬ್ಬರು ಹೆಲ್ಮೆಟ್ ಇದ್ದರೂ ಸಹ ಅದನ್ನು ಧರಿಸದೆ ಬೈಕ್ ಚಲಾಯಿಸುತ್ತಿದ್ದಾಗ ಕಣ್ಣಿನೊಳಗೆ ಕಸವೊಂದು ಹೋಗಿ ಕಣ್ಣು ಬಾತುಕೊಂಡಿದ್ದಲ್ಲದೆ, ಎರಡು ದಿನ ನೋವನ್ನು ಅನುಭವಿಸುವುದರ ಜೊತೆಗೆ ಅದರ ಚಿಕಿತ್ಸೆಗೆ ಒಂದು ಹೆಲ್ಮೆಟಿನ ದರಕ್ಕಿಂತಲೂ ಜಾಸ್ತಿ ಹಣವನ್ನು ಆಸ್ಪತ್ರೆಗೆ ತೆತ್ತು ಬರಬೇಕಾಯಿತು. ಇವತ್ತಿಗೂ ಹೆಲ್ಮೆಟ್ ಇಲ್ಲದೆ, ಇದ್ದರೂ ಕೈಯಲ್ಲಿ ಸಿಕ್ಕಿಸಿ ಬೈಕ್ ಚಲಾಯಿಸುವವರು ನಿತ್ಯ ಸಿಗುತ್ತಾರೆ. ಅಂಥವರನ್ನು ದೇವರೇ ಕಾಪಾಡಲಿ. ರಸ್ತೆಕರವನ್ನು ಕಟ್ಟಿದ ತಕ್ಷಣ ರಸ್ತೆ ನಮ್ಮದಾಗುವುದಿಲ್ಲ. ರಸ್ತೆ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಇದು ಸ್ಮಾರ್ಟ್‌ಯುಗ, ವೇಗವಾಗಿ ಹೋಗುತ್ತಿರುವ ಯುಗದಲ್ಲಿ ನಾವು ಅಪ್‌ಡೇಟ್ ಆದರೆ ಸಾಕು. ವೇಗವಾಗಿ ಹೋಗುವುದು ಬೇಡ. ನಮ್ಮ ಜೀವ ನಮ್ಮ ಕೈಯಲ್ಲಿದೆ, ಸ್ವಯಂ ರಕ್ಷಿಸಿಕೊಳ್ಳೋಣ. ಅಲ್ಲದೆ ನಮ್ಮ ತಪ್ಪಿಂದ ಬೇರೆಯವರಿಗೆ ಆಘಾತವಾಗುವುದು ಬೇಡ.
– ಹೊಸ್ಮನೆ ವಿಷ್ಣು ಭಟ್ಟ