ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ರವಿವಾರ ಬೀಜಾಡಿ ಸರ್ವಿಸ್ ರಸ್ತೆಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು.
ತುರ್ತು ಕಾಮಗಾರಿಗೆ ಕ್ರಮ
ಅವರ ಕಣ್ಣೆದುರೇ ರಾಷ್ಟ್ರೀಯ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಬರುವಂತಹ ವಾಹನಗಳು, ಅರೆಬರೆ ಕಾಮಗಾರಿಯ ಜಲ್ಲಿ ಹಾಕಿದ ಸರ್ವಿಸ್ ರಸ್ತೆಯಲ್ಲಿ ಕಷ್ಟಪಟ್ಟು ಹೋಗುವಂತಹ ವಾಹನಗಳು ಸೇರಿದಂತೆ, ಪಾದಚಾರಿಗಳ ಪಾಡು, ರಾಷ್ಟ್ರೀಯ ಹೆದ್ದಾರಿ ಕುಸಿತದ ಭೀತಿ, ಚರಂಡಿಯ ಅವ್ಯವಸ್ಥೆಯನ್ನು ಕಾಣುವಂತಾಯಿತು. ಇದೆಲ್ಲಾ ಗಮನಿಸಿದ ವರಿಷ್ಠಾಧಿಕಾರಿಗಳು ಇಲಾಖೆಯ ವತಿಯಿಂದ ತುರ್ತು ಕಾಮಗಾರಿಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಸಾರ್ವಜನಿಕರಿಗೆ ನೀಡುತ್ತೇವೆ. ಮಳೆಗಾಲ ಆರಂಭವಾಗುವ ಮುನ್ನ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನವಯುಗ ಕಂಪನಿಗೆ ತಿಳಿಸಿ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ಬಗ್ಗೆ ಭರವಸೆ ನೀಡಿದರು.
ಸರ್ವಿಸ್ ರಸ್ತೆ ಹೋರಾಟ ಸಮಿತಿ ಪದಾಧಿಕಾರಿಗಳಾದ ನಾರಾಯಣ ಬಂಗೇರ ಬೀಜಾಡಿ, ಜಯಕರ್ ಶೆಟ್ಟಿ ಬೀಜಾಡಿ, ಅಣ್ಣಪ್ಪ ಬೆಟ್ಟಿನ ಮನೆ, ದಿನೇಶ್ ದೇವಾಡಿಗ ಕುಂಭಾಶಿ, ಬೀಜಾಡಿ ಗೋಪಾಡಿ ರಿಕ್ಷಾ ಚಾಲಕರ ಸಂಘ ಮುಖಂಡರಾದ ದಿನೇಶ್ ಹಲ್ತೂರು ಮೊದಲಾದವರು ಸ್ಥಳೀಯ ಸಮಸ್ಯೆಯನ್ನು ಎಸ್ಪಿಯವರಿಗೆ ವಿವರಿಸಿದರು.