Advertisement

ಬಿಹಾರದ ಫುಲ್ವಾರಿ ಶರೀಫ್ ಭಯೋತ್ಪಾದಕ ಪ್ರಕರಣ: ಖಾತೆ ಬಳಸದೆ ಬ್ಯಾಂಕ್‌ಶಾಖೆಗಳಿಂದ ಹಣ ವರ್ಗ

01:30 AM Mar 16, 2023 | Team Udayavani |

ಬಂಟ್ವಾಳ: ಉಗ್ರ ಚಟುವಟಿಕೆಗಳಿಗೆ ಹಣ ವನ್ನು ಕಳುಹಿಸುವಾಗ ತಾವು ಸಿಕ್ಕಿಬೀಳಬಾರ ದೆಂದು ಆರೋಪಿಗಳು ನಗದು ವ್ಯವಹಾರವನ್ನೇ ಹೆಚ್ಚಾಗಿ ನಡೆಸುತ್ತಿದ್ದುದು ಮತ್ತು ಅದನ್ನು ಬೇರೆ ಬೇರೆ ಹೆಸರಿನಲ್ಲಿ ಬ್ಯಾಂಕ್‌ ಖಾತೆಗೆ ಜಮಾ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

Advertisement

ಪಟ್ನಾದ ಪುಲ್ವಾರಿ ಶರೀಫ್ ನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗೆ ಬಹುರಾಜ್ಯ ಹವಾಲಾ ಜಾಲದ ಮೂಲಕ ಹಣಕಾಸು ನೆರವು ಒದಗಿಸಿದ್ದಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸಿ ದಾಗ ಆರೋಪಿಗಳು ತಮ್ಮ ಖಾತೆಯನ್ನು ಬಳಸದೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಹಲವಾರು ಶಾಖೆಗಳಿಂದ ಹಣ ವರ್ಗಾಯಿಸಿರುವುದು ಗೊತ್ತಾಗಿದೆ.

ಬಂಟ್ವಾಳ ಭಾಗದಿಂದಲೇ ಹಣ ವರ್ಗಾವಣೆಯಾಗಿರುವ ಕುರಿತು ಮಹತ್ವದ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಆಗಮಿಸಿ ಆರೋಪಿಗಳ ಬೆನ್ನು ಹತ್ತಿ ಇಂಥವರೇ ಹಣ ವರ್ಗಾಯಿಸಿರುವುದು ಎಂಬುದನ್ನು ಖಚಿತ ಪಡಿಸಿಕೊಂಡೇ ಅವರ ಬೇಟೆಯಾಡಿದ್ದಾರೆ.

ಆರೋಪಿಗಳ ಬಗ್ಗೆ ಸ್ಪಷ್ಟ ಸುಳಿವಿದ್ದರೂ ಅವರೇ ಆರೋಪಿಗಳು ಎಂಬುದನ್ನು ಖಚಿತ ಪಡಿಸುವುದಕ್ಕಾಗಿ ಕೆಲವೊಂದು ತಂತ್ರಗಾರಿಕೆಯನ್ನೂ ಹೆಣೆದಿರುವ ಮಾಹಿತಿ ಲಭ್ಯ ವಾಗಿದ್ದು, ತನಿಖೆಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಅದನ್ನು ಬಹಿರಂಗ ಪಡಿಸಿಲ್ಲ.

ಹಲವು ಹೆಸರು ದಾಖಲು
ಆರೋಪಿಗಳು ತಮ್ಮ ಖಾತೆಯಿಂದಲೇ ಹಣ ವರ್ಗಾವಣೆ ಮಾಡು ತ್ತಿದ್ದರು ಎಂದು ಭಾವಿಸ ಲಾಗಿತ್ತು. ಆದರೆ ಅದು ಸುಳ್ಳಾಗಿದೆ. ತಮ್ಮ ಗುರುತು, ಮಾಹಿತಿ ಸಿಗಬಾರದು ಎಂದು ಆರೋಪಿಗಳು ತಮ್ಮ ಖಾತೆಯನ್ನು ಬಳಸದೆ ಬ್ಯಾಂಕ್‌ ಶಾಖೆಗಳ ಮೂಲಕ ನೇರವಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

ಒಂದಿಬ್ಬರು ಆರೋಪಿಗಳು ಮಾತ್ರವೇ ಹಣ ವರ್ಗಾವಣೆ ಮಾಡುತ್ತಿದ್ದರೂ ಬ್ಯಾಂಕ್‌ ಸ್ಲಿಪ್‌ನಲ್ಲಿ ಬೇರೆ ಬೇರೆ ಹೆಸರು ಹಾಗೂ ಮೊಬೈಲ್‌ ಸಂಖ್ಯೆ ದಾಖಲಿಸುತ್ತಿದ್ದರು. ಇದರಿಂದಾಗಿ ಆರೋಪಿಗಳ ಜಾಡು ಹಿಡಿಯುವುದು ಆರಂಭದಲ್ಲಿ ಕ್ಲಿಷ್ಟಕರವಾಗಿತ್ತು. ಅದಕ್ಕಾಗಿಯೇ ಎನ್‌ಐಎ ಅಧಿಕಾರಿಗಳು ಇಲ್ಲಿಗೇ ಬಂದು ಮೊಕ್ಕಾಂ ಹೂಡಿ ಇದರ ಹೂರಣವನ್ನು ಹೊರಗೆಡವಿದ್ದಾರೆ

ಪ್ರಸ್ತುತ ಪ್ರಕರಣದಲ್ಲಿ ಬಂಧಿತರಾ ಗಿರುವ ಬಂಟ್ವಾಳ ನಂದಾವರ ಮೂಲದ ಆರೋಪಿಗಳಾದ ಮಹಮ್ಮದ್‌ ಸಿನಾನ್‌ ಹಾಗೂ  ನವಾಜ್‌ ಅವರು ಬ್ಯಾಂಕ್‌ ಶಾಖೆಯ ಮೂಲಕ ಹಣ ವರ್ಗಾವಣೆಯ ಕಾರ್ಯ ಮಾಡುತ್ತಿ ದ್ದರು ಎನ್ನಲಾಗಿದ್ದು, ಇಕ್ಬಾಲ್‌ ಸೇರಿದಂತೆ ಇತರರು ಈ ಕಾರ್ಯಗಳಿಗೆ ನೆರವಾಗಿದ್ದರು ಎಂದು ತನಿಖೆಯ ವೇಳೆ ಬಹಿರಂಗಗೊಂಡಿದೆ.

ಹಲವು ತಂತ್ರದ ಮೂಲಕ ಬಲೆಗೆ
ಬಿಹಾರದಲ್ಲಿ ಬಂಧಿತ ಭಯೋ ತ್ಪಾದಕನ ಖಾತೆಗೆ ವರ್ಗಾವಣೆ ಯಾಗಿದ್ದ ಕೋಟ್ಯಂತರ ರೂಪಾಯಿ ಎಲ್ಲಿಂದ ಬರುತ್ತಿದೆ ಎಂದು ಜಾಡು ಹಿಡಿದಿದ್ದ ಎನ್‌ಐಎಗೆ ಬಂಟ್ವಾಳ ಭಾಗದಿಂದ ಹಣ ಬರುತ್ತಿರುವುದು ಖಚಿತವಾಗಿತ್ತು.
ಹೀಗಾಗಿ ಇಲ್ಲಿಗೆ ಬಂದ ಅಧಿಕಾರಿಗಳು ಆರೋಪಿಗಳ ಚಲನವಲನ ಗಮನಿಸಿ ಬಳಿಕ ಹಣ ವರ್ಗಾವಣೆ ದಂಧೆಯತ್ತ ಗಮನಹರಿಸಿತ್ತು. ಎನ್‌ಐಎ ಮೊದಲೇ ಹಾಕಿಕೊಂಡಿದ್ದ ಯೋಜನೆಯಂತೆ ತಂತ್ರಗಾರಿಕೆ ರೂಪಿಸಿ ಆರೋಪಿಗಳು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬೀಳುವಂತೆ ಮಾಡಿತ್ತು. ಆರೋಪಿಗಳು ಸಮಾ ಜದ ಕಣ್ಣಿಗೆ ಮಣ್ಣೆರೆಚಿದರೂ ಎನ್‌ಐಎ ತಂತ್ರಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದೆ ಬಲೆಗೆ ಬಿದ್ದಿದ್ದಾರೆ.

ಇದೇ ರೀತಿ ಇತರ ಭಾಗದಲ್ಲೂ ಹಣ ವರ್ಗಾಯಿಸಿರುವ ಆರೋಪಿಗಳ ಪತ್ತೆಗೂ ತಂತ್ರ ರೂಪಿಸಿ, ಅವರನ್ನು ವಶಕ್ಕೆ ಪಡೆದುಕೊಂಡಿದೆ. ಇದರಲ್ಲಿ ಇನ್ನಷುc ಮಂದಿ ಇರುವ ಕುರಿತಂತೆ ತನಿಖೆ ನಡೆಯುತ್ತಿದೆ.

ನಗದು ವ್ಯವಹಾರವೇ ಹೆಚ್ಚು
ಬಂಟ್ವಾಳದಲ್ಲಿ ಬಂಧಿತರಾಗಿರುವ ಆರೋಪಿ ಗಳು ನಗದು ಮೂಲಕವೇ ವ್ಯವಹಾರ ನಡೆಸುತ್ತಿ ದ್ದರು. ಅಂದರೆ ಹವಾಲಾ ದಂಧೆ ಮೂಲಕ ಹಣ ಇವರ ಕೈ ತರಿಸಿಕೊಳ್ಳುತ್ತಿದ್ದರು. ಮುಖ್ಯವಾಗಿ ಗಲ್ಫ್ ಸಹಿತ ವಿದೇಶೀ ಮೂಲದಿಂದ ಹಣ ಬೇರೆಯವರ ಮೂಲಕ ಇವರ ಕೈಗೆ ತಲುಪುತಿತ್ತು. ಇವರು ಖಾತೆಗೆ ಹಣವನ್ನು ವರ್ಗಾಯಿಸಿಕೊಳ್ಳುತ್ತಿರಲಿಲ್ಲ. ಅದೇ ರೀತಿ ಹಣವನ್ನು ಇವರ ಖಾತೆಯಿಂದಲೂ ಬೇರೆ ಖಾತೆಗೆ ವರ್ಗಾಯಿಸುತ್ತಿರಲಿಲ್ಲ. ನಗದು ರೂಪದಲ್ಲಿ ಬರುತ್ತಿದ್ದ ಹಣವನ್ನು ಬ್ಯಾಂಕ್‌ ಮೂಲಕ ಬೇರೆ ಖಾತೆಗಳಿಗೆ ನೇರವಾಗಿ ಪಾವತಿಸಿ ತಮ್ಮ ಪಾತ್ರ ಬಹಿರಂಗವಾಗದಂತೆ ನೋಡಿಕೊಳ್ಳುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next