ಬೆಂಗಳೂರು:ರೈಲು ಪ್ರಯಾಣದ ವೇಳೆ ಪ್ರಯಾಣಿಕರ ಚಿನ್ನಾಭರಣ ದೋಚುತ್ತಿದ್ದ ಅಂತರ್‌ರಾಜ್ಯ ಬಿಹಾರಿ ತಂಡವನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ದಂಡು ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಹಾರ ಶಂಭು ಮಂಡಲ್ (34) ಅಜಯ್ ಕುಮಾರ್ (24) ಗುಜರಾತ್ ಮೂಲದ ಮೊಹಿತ್ ಸಯಾಜಿ ಪರಶುರಾಮ್ (46) ಬಂಧಿತರು.
ಆರೋಪಿಗಳ ಬಂಧನದಿಂದ ಬೈಯಪ್ಪನಹಳ್ಳಿ, ದಂಡು ರೈಲ್ವೇ ಠಾಣೆ, ಬೆಂಗಳೂರು ನಗರ, ಗ್ರಾಮಾಂತರ ರೈಲ್ವೇ ಠಾಣಾ ವ್ಯಾಪ್ತಿಗಳಲ್ಲಿ ನಡೆಸಿದ್ದ 14 ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 800 ಗ್ರಾಂ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತರಾಜ್ಯ ಕಳ್ಳರಾಗಿರುವ ಆರೋಪಿಗಳು ರೈಲು ಪ್ರಯಾಣದಲ್ಲಿ ಪ್ರಯಾಣಿಕರ ಆಭರಣ ಕದಿಯುವ ಕಸುಬು ಮಾಡಿಕೊಂಡಿದ್ದಾರೆ. ವಿವಿಧ ರಾಜ್ಯಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳಿವೆ.
ಪ್ರಯಾಣಿಕರ ಸೋಗಿನಲ್ಲಿ ಕುಳಿತುಕೊಳ್ಳುತ್ತಿದ್ದ ಆರೋಪಿಗಳು ಆಭರಣ ಇರಬಹುದಾದ ಲಗೇಜ್ ಬ್ಯಾಗ್‌ಗಳನ್ನು ಗುರುತಿಸಿ ಬ್ಯಾಗ್ ಜಿಪ್ ಕತ್ತರಿಸಿ ಆಭರಣ ಕಳವು ಮಾಡುತ್ತಿದ್ದರು. ಕಳವು ಮಾಡಿದ ಕೂಡಲೇ ಬೋಗಿ ಬದಲಿಸುತ್ತಿದ್ದರು. ಅಷ್ಟೇ ಅಲ್ಲದೆ ಕಳವು ಮಾಡಿದ ಕೂಡಲೇ ಮುಂದಿನ ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರು ರೈಲ್ವೇ ಉಪವಿಭಾಗದ ಡಿವೈಎಸ್ಪಿ ಅಶೋಕ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಎನ್ ನಾಗರಾಜು, ಪಿಎಸ್‌ಐ ಸತ್ಯಪ್ಪ ಮುಕ್ಕಣವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.