ಪಾಟ್ನಾ: ಪೂರ್ಣ ರೈಲ್ವೆ ಎಂಜಿನ್, ಕಬ್ಬಿಣದಿಂದಲೇ ಮಾಡಿದ ದೊಡ್ಡ ಸೇತುವೆಯನ್ನೇ ಕದ್ದಿದ್ದು ಈಗ ಹಳೆಯಸುದ್ದಿ. ಇದೀಗ ಬಿಹಾರದ ಸಬ್ಜಿಬಾಘನಲ್ಲಿ 29 ಅಡಿ ಎತ್ತರದ ಮೊಬೈಲ್ ಟವರನ್ನೇ ಕದ್ದಿದ್ದಾರೆ.
ಜಿಟಿಎಲ್ ಕಂಪನಿಗೆ ಸೇರಿದ ಈ ಟವರ್ ಕಳುವಾಗಿದೆ ಎಂದು ಗೊತ್ತಾಗಿದ್ದು ಇನ್ನೂ ವಿಚಿತ್ರ ರೀತಿಯಲ್ಲಿ. ಕಂಪನಿಯ ತಂತ್ರಜ್ಞರು ತಮ್ಮ ಕಂಪನಿಯ ಸಾಧನಗಳು ಎಲ್ಲೆಲ್ಲಿವೆ ಎಂದು ಸಮೀಕ್ಷೆ ಮಾಡುವಾಗ, ಇದೊಂದು ಕಾಣಿಸಲಿಲ್ಲ. ಶಹೀನ್ ಖಯೂಮ್ ಎಂಬಾತನ ನಾಲ್ಕು ಅಂತಸ್ತಿನ ಮನೆ ಮೇಲೆ ಇದನ್ನು ಸ್ಥಾಪಿಸಲಾಗಿತ್ತು. ಅವರನ್ನು ಕೇಳಿದರೆ, ದೂರಸಂಪರ್ಕ ಕಂಪನಿಯ ತಂತ್ರಜ್ಞರಂತೆ ಕೆಲವರು ಬಂದು ಟವರ್‌ನಲ್ಲಿ ಸಮಸ್ಯೆಯಿದೆ, ಹೊಸತನ್ನು ಹಾಕುತ್ತೇವೆ ಎಂದು ತೆಗೆದುಕೊಂಡು ಹೋದರು ಎಂದು ತಿಳಿಸಿದ್ದಾರೆ.
ಕೂಡಲೇ ಜಿಟಿಎಲ್‌ನ ನೈಜ ತಂತ್ರಜ್ಞರು ಪ್ರಕರಣ ದಾಖಲಿಸಿದ್ದಾರೆ. ವಿಷಯ ಕೇಳಿ ಸ್ವತಃ ಪೊಲೀಸರು ದಂಗಾಗಿದ್ದಾರೆ. ಇನ್ನು ಸಾರ್ವಜನಿಕರಿಗಂತೂ ಹೇಳತೀರದ ಆತಂಕ ಶುರುವಾಗಿದೆ. ಈ ಟವರ್ ಅನ್ನು 2006ರಲ್ಲಿ ಏರ್‌ಸೆಲ್ ಕಂಪನಿ ಹಾಕಿತ್ತು. 2016ರಲ್ಲಿ ಇದನ್ನು ಜಿಟಿಎಲ್ ಕೊಂಡಿತ್ತು. ಟವರ್ ಕಾರ್ಯಾಚರಣೆ ನಿಲ್ಲಿಸಿದ್ದರಿಂದ, ಮನೆ ಮಾಲಿಕನಿಗೆ ಕಳೆದ ಕೆಲವು ತಿಂಗಳುಗಳಿಂದ ಜಿಟಿಎಲ್ ಬಾಡಿಗೆ ಕೊಡುವುದನ್ನೂ ನಿಲ್ಲಿಸಿತ್ತು.
ಇದರಿಂದ ಮಾಲಿಕ ಟವರನ್ನು ತೆಗೆಯಿರಿ ಎಂದು ಜಿಟಿಎಲ್‌ಗೆ ತಿಳಿಸಿದ್ದರು.
Related Articles