ಪಾಟ್ನಾ: ರೈಲಿನೊಳಗೆ ಪ್ರಯಾಣಿಕರ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದ ಕಳ್ಳನೊಬ್ಬ ಆಕಸ್ಮಿಕವಾಗಿ ಪ್ರಯಾಣಿಕರ ಕೈಗೆ ಸಿಕ್ಕಿಬಿದ್ದಿದ್ದು, ಸುಮಾರು ಹತ್ತು ಕಿಲೋ ಮೀಟರ್ ನಷ್ಟು ದೂರ ರೈಲು ಕಿಟಕಿ ಹಿಡಿದು ಜೋತಾಡುತ್ತ ಸಾಗಿದ ಘಟನೆ ಬಿಹಾರದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಠೇವಣಿದಾರರ ಹಿತಾಸಕ್ತಿ ಕಾಯಿದೆ ಮಂಡನೆ: ವಿಶೇಷ ನ್ಯಾಯಾಲಯ ಸ್ಥಾಪನೆಗೆ ನಿರ್ಧಾರ
ಬಿಹಾರದ ಬೇಗುಸರಾಯ್ ನಿಂದ ಖಗಾರಿಯಾಗೆ ರೈಲು ಸಂಚರಿಸುತ್ತಿದ್ದ ವೇಳೆಯಲ್ಲಿ ಕಳ್ಳ ಕಿಟಕಿಯೊಳಗೆ ಕೈಹಾಕಿ ಪ್ರಯಾಣಿಕರ ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಪ್ರಯಾಣಿಕ ಆತನ ಎರಡು ಕೈಗಳನ್ನು ಹಿಡಿದುಕೊಂಡು ಬಿಟ್ಟಿದ್ದ.
ರೈಲು ಚಲಿಸುತ್ತಿದ್ದು, ಪ್ರಯಾಣಿಕರು ಕಳ್ಳನ ಕೈಯನ್ನು ಹಿಡಿದುಕೊಂಡ ಪರಿಣಾಮ ಆತ ಗಟ್ಟಿಯಾಗಿ ಕೂಗಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ರೈಲಿನ ಹೊರಗೆ ಕಳ್ಳ ನೇತಾಡುತ್ತಿದ್ದು, ಹೀಗೆ ಸುಮಾರು 10 ಕಿಲೋ ಮೀಟರ್ ದೂರದವರೆಗೆ ರೈಲಿನ ಹೊರಭಾಗದಲ್ಲಿ ನೇತಾಡುತ್ತಾ ಹೋಗಿದ್ದ ಎಂದು ವರದಿ ತಿಳಿಸಿದೆ.
ಬಳಿಕ ಖಗಾರಿಯಾ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಆತನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಬೇಗುಸರಾಯ್ ನ ಸಾಹೇಬ್ ಪುರ್ ಕಮಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.
ಮೊಬೈಲ್ ಕಳ್ಳತನ ಮಾಡಲು ಬಂದು ಕಿಟಕಿಯಲ್ಲೇ ಸಿಕ್ಕಿಬಿದ್ದು, ನೇತಾಡುತ್ತಾ ಸಾಗುತ್ತಿದ್ದ ದೃಶ್ಯವನ್ನು ಪ್ರಯಾಣಿಕರು ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.