ಪಾಟ್ನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದ ಕೈದಿಯೊಬ್ಬ ತಪಾಸಣೆಗೆ ಬಂದ ಜೈಲು ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಭಯದಲ್ಲಿ ಜೈಲಿನೊಳಗೆ ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ನುಂಗಿದ ವಿಲಕ್ಷಣ ಘಟನೆಯೊಂದು ವರದಿಯಾಗಿದೆ.
ಬಿಹಾರ ಮೂಲದ ಖೈಶರ್ ಅಲಿ ಎಂಬಾತನೇ ಮೊಬೈಲ್ ನುಂಗಿದ ಆಸಾಮಿ.
ಘಟನೆ ವಿವರ: ಶನಿವಾರ ಬಿಹಾರದ ಗೋಪಾಲ್‌ಗಂಜ್ ನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಜೈಲು ಅಧಿಕಾರಿಗಳು ತಪಾಸಣೆಗೆ ಬಂದಿದ್ದಾರೆ ಈ ವೇಳೆ ಜೈಲಿನಲ್ಲಿದ್ದ ಕೈದಿ ಖೈಶರ್ ಅಲಿ ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡಿದ್ದ ಅಧಿಕಾರಿಗಳು ತಪಾಸಣೆಗೆ ಬರುತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಗಾಬರಿಗೊಂಡ ಕೈದಿ ಕೈಯಲ್ಲಿದ್ದ ಮೊಬೈಲ್ ಅನ್ನು ಬಾಯೊಳಗೆ ಹಾಕಿ ನುಂಗಿದ್ದಾನೆ, ಆದರೆ ಶನಿವಾರ ಜೈಲು ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದ ಕೈದಿಗೆ ರವಿವಾರ ಹೊಟ್ಟೆನೋವು ಶುರುವಾಗಿದೆ. ನೋವು ಜೋರಾದಾಗ ಅಧಿಕಾರಿಗಳಿಗೆ ಹೊಟ್ಟೆನೋವಿನ ವಿಚಾರ ತಿಳಿಸಿದ್ದಾನೆ, ಕೂಡಲೇ ಅಧಿಕಾರಿಗಳು ಕೈದಿಯನ್ನು ಗೋಪಾಲ್ಗಂಜ್ ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅಲ್ಲಿನ ವೈದ್ಯರು ಕೈದಿಯ ಹೊಟ್ಟೆಯ ಎಕ್ಸ್-ರೇ ಮಾಡಿದಾಗ ಹೊಟ್ಟೆಯೊಳಗೆ ಮೊಬೈಲ್ ಇರುವುದು ಪತ್ತೆಯಾಗಿದೆ.
ಈ ಕುರಿತು ಮಾತನಾಡಿದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಸಲಾಮ್ ಸಿದ್ದಿಕಿ, ಕೈದಿಯನ್ನು ಪರಿಶೀಲಿಸಿದಾಗ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಕಂಡುಬಂದಿದೆ, ಅಲ್ಲದೆ ಕೈದಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಆತನನ್ನು ಪಾಟ್ನಾ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲು ತಯಾರಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಡ್ರಗ್ಸ್ ಮಾರಾಟ ದಂದೆ ಪ್ರಕರಣಕ್ಕೆ ಸಂಬಂಧಿಸಿ ಖೈಶರ್ ಅಲಿ ಕಳೆದ ಮೂರು ವರ್ಷಗಳಿಂದ ಗೋಪಾಲ್‌ಗಂಜ್ ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಬಿಹಾರ ಜೈಲುಗಳ ಒಳಗೆ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವ ಕುರಿತು ಆಗಾಗ ದೂರುಗಳು ಬರುತ್ತಿದ್ದವು ಅಲ್ಲದೆ ಕಳೆದ ಮಾರ್ಚ್ 2021 ರಲ್ಲಿ ರಾಜ್ಯದಾದ್ಯಂತ ಜೈಲುಗಳಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 35 ಸೆಲ್‌ಫೋನ್‌ಗಳು, ಏಳು ಸಿಮ್ ಕಾರ್ಡ್‌ಗಳು ಮತ್ತು 17 ಸೆಲ್‌ಫೋನ್ ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಜೈಲು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ವಿಮಾನದಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ ಪ್ರಯಾಣಿಕ… ಬಳಿಕ ಆದದ್ದೇ ಬೇರೆ