Advertisement

NEET ಪೇಪರ್ ಲೀಕ್ ಕೇಸ್: ಬಿಹಾರ ಪೊಲೀಸರಿಂದ ಜಾರ್ಖಂಡ್ ನಲ್ಲಿ ಆರು ಮಂದಿ ಸೆರೆ

06:24 PM Jun 22, 2024 | Team Udayavani |

ರಾಂಚಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ ಅಕ್ರಮಗಳಿಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಶುಕ್ರವಾರ ರಾತ್ರಿ ದೇವಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಏಮ್ಸ್ -ದಿಯೋಘರ್ ಬಳಿಯ ಮನೆಯೊಂದರಿಂದ ಅವರನ್ನು ಬಂಧಿಸಲಾಗಿದೆ. ಬಿಹಾರ ಪೊಲೀಸರು ನಮಗೆ ಸುಳಿವು ನೀಡಿದ ಮೇರೆಗೆ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಲ್ಲಾ ಶಂಕಿತರನ್ನು ಬಿಹಾರಕ್ಕೆ ಕರೆದೊಯ್ಯಲಾಗಿದೆ ಎಂದು ಎಸ್‌ಡಿಪಿಒ (ದಿಯೋಘರ್) ರಿತ್ವಿಕ್ ಶ್ರೀವಾಸ್ತವ ಪಿಟಿಐಗೆ ತಿಳಿಸಿದ್ದಾರೆ.

ಶಂಕಿತರು ಜುನು ಸಿಂಗ್ ಎಂಬುವರ ಮನೆಯಲ್ಲಿ ವಾಸಿಸುತ್ತಿದ್ದರು. ಬಂಧಿತರನ್ನು ಬಿಹಾರದ ನಳಂದ ಜಿಲ್ಲೆಯ ನಿವಾಸಿಗಳಾದ ಪರಮ್‌ಜಿತ್ ಸಿಂಗ್ ಅಲಿಯಾಸ್ ಬಿಟ್ಟು, ಚಿಂಟು ಅಲಿಯಾಸ್ ಬಲದೇವ್ ಕುಮಾರ್, ಕಾಜು ಅಲಿಯಾಸ್ ಪ್ರಶಾಂತ್ ಕುಮಾರ್, ಅಜಿತ್ ಕುಮಾರ್, ರಾಜೀವ್ ಕುಮಾರ್ ಅಲಿಯಾಸ್ ಕಾರು ಮತ್ತು ಪಾಂಕು ಕುಮಾರ್ ಎಂದು ಗುರುತಿಸಲಾಗಿದೆ.

NEET-UG ಪರೀಕ್ಷೆಗಳನ್ನು ಮೇ 5 ರಂದು NTA ನಡೆಸಿತ್ತು.ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗಿತ್ತು. ಆದರೆ ಬಿಹಾರ ಸೇರಿ ಕೆಲವು ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಇತರ ಅಕ್ರಮಗಳ ಆರೋಪಗಳು ಕೇಳಿಬಂದಿರುವುದು ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.

ಬ್ರೈನ್ ಮ್ಯಾಪಿಂಗ್ ಪರೀಕ್ಷೆ
ಬಿಹಾರ ಪೋಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ಕಳೆದ ತಿಂಗಳು  ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳೊಂದಿಗೆ ಹೋಲಿಕೆಯಾಗಿಸಲು NEET ಪ್ರಶ್ನೆ ಪತ್ರಿಕೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ಆರೋಪಿಗಳ ನಾರ್ಕೋ ವಿಶ್ಲೇಷಣೆ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

Advertisement

NEET-UG ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಆಪಾದಿತ ಪೇಪರ್ ಸೋರಿಕೆ ತನಿಖೆಯ ವೇಳೆ ಕಳೆದ ತಿಂಗಳು 13 ಮಂದಿಯನ್ನು ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next