ಪಾಟ್ನಾ: ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿರುವ ವಿಡಿಯೋ ವೈರಲ್ ಆದ ಬಳಿಕ 50 ವರ್ಷದ ಕಾಮುಕ ತಂದೆಯನ್ನು ಬಂಧಿಸಿರುವ ಘಟನೆ ಬಿಹಾರದ ಸಮಸ್ಠಿಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ‘ಪೇಮೆಂಟ್ ಸೀಟಾ’?’ ಸಿದ್ದರಾಮಯ್ಯ ಪ್ರಶ್ನೆ
ಆರೋಪಿ ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಈತ ಸಮಸ್ಠಿಪುರ್ ನ ರೋಸೆರಾ ನಿವಾಸಿಯಾಗಿದ್ದಾನೆ. ತನ್ನ 18 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ, ಕೊಲ್ಲುವ ಬೆದರಿಕೆ ಒಡ್ಡಿದ್ದ. ಕಾಮುಕ ತಂದೆಯ ಮುಖವಾಡ ಬಯಲು ಮಾಡಲು ಸಂತ್ರಸ್ತೆ ಹಿಡನ್ ಕ್ಯಾಮರಾ ಉಪಯೋಗಿಸಿ ವಿಡಿಯೋವನ್ನು ಸೆರೆ ಹಿಡಿದಿರುವುದಾಗಿ ವರದಿ ವಿವರಿಸಿದೆ.
ಕಾಮುಕ ತಂದೆ ಅತ್ಯಾಚಾರ ಎಸಗುತ್ತಿರುವ ವಿಡಿಯೋ ರೆಕಾರ್ಡ್ ಮಾಡಿದ್ದ ಮಗಳು, ನ್ಯಾಯ ಕೊಡಿಸಿ ಎಂದು ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದು ವೈರಲ್ ಆದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ಇಂಡಿಯಾ ಟುಡೇ ವರದಿ ಹೇಳಿದೆ.
Related Articles
ವಿಡಿಯೋ ವೈರಲ್ ಆದ ನಂತರ ಮಗಳ ದೂರಿನ ಆಧಾರದ ಮೇಲೆ ಆರೋಪಿ ತಂದೆಯನ್ನು ಬಂಧಿಸಲಾಗಿದೆ ಎಂದು ರೋಸೆರಾ ಸಬ್ ಡಿವಿಷನ್ ಡಿಎಸ್ಪಿ ಶಾಹಿಯಾರ್ ಅಖ್ತರ್ ತಿಳಿಸಿದ್ದಾರೆ. ತಂದೆ ಹೀನ ಕೃತ್ಯವನ್ನು ತಾಯಿಯೂ ಕೂಡಾ ವಿರೋಧಿಸಿಲ್ಲ ಎಂದು ಮಗಳು ದೂರಿನಲ್ಲಿ ಆರೋಪಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಇತರ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಖ್ತರ್ ತಿಳಿಸಿರುವುದಾಗಿ ವರದಿಯಾಗಿದೆ.