ಪಾಟ್ನಾ: ದೇಶದಲ್ಲೇ ಅತಿದೊಡ್ಡ ಚಿನ್ನದ ನಿಕ್ಷೇಪ ಹೊಂದಿರುವ ಬಿಹಾರದ ಜಾಮಿ ಜಿಲ್ಲೆಯಲ್ಲಿ ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ಅಲ್ಲಿನ ಸರ್ಕಾರ ತಯಾರಿ ನಡೆಸಿದೆ.
ಭಾರತ ಭೂವಿಜ್ಞಾನ ಸರ್ವೆ(ಜಿಎಸ್ಐ) ಪ್ರಕಾರ, ಇಲ್ಲಿ 222.88 ಮಿಲಿಟನ್ ಟನ್ ಚಿನ್ನದ ನಿಕ್ಷೇಪವಿದೆ. ಅಲ್ಲದೆ, 37.6 ಟನ್ ಖನಿಜಾಂಶ ಭರಿತ ಅದಿರು ಇದೆ. ಇದನ್ನು ತೆಗೆಯುವ ಸಲುವಾಗಿ ಬಿಹಾರ ಸರ್ಕಾರ, ಕೇಂದ್ರ ಸರ್ಕಾರದ ಬಳಿ ಒಪ್ಪಿಗೆ ಕೇಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಬಿಹಾರದ ಗಣಿ ಮತ್ತು ಭೂವಿಜ್ಞಾನ ಸಚಿವಾಲಯ ಕೇಂದ್ರದ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸುತ್ತಿದೆ. ಅಲ್ಲದೆ, ಸರ್ಕಾರವೇ ಕೇಂದ್ರದ ಸಂಸ್ಥೆಗಳ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಗಣಿಗಾರಿಕೆ ಸಚಿವ ಪ್ರಹ್ಲಾದ್ ಜೋಷಿ ಅವರು, ಬಿಹಾರದ ಜಾಮಿ ಜಿಲ್ಲೆಯಲ್ಲಿ ದೇಶದಲ್ಲೇ ಅತಿದೊಡ್ಡ ಬಂಗಾರದ ನಿಕ್ಷೇಪವಿದೆ ಎಂದು ಮಾಹಿತಿ ನೀಡಿದ್ದರು.