Advertisement

ಬಿಹಾರ ವಿಧಾನಸಭೆ ಚುನಾವಣೆ: ನಾಮಪತ್ರ ಆನ್‌ಲೈನ್‌!

01:14 AM Aug 22, 2020 | mahesh |

ಹೊಸದಿಲ್ಲಿ: ಆನ್‌ಲೈನ್‌ನಲ್ಲೇ ನಾಮಪತ್ರ, ಠೇವಣಿ ಸಲ್ಲಿಕೆಯೂ ಆನ್‌ಲೈನ್‌, ಮನೆ ಮನೆ ಪ್ರಚಾರಕ್ಕೂ ಮಿತಿ.

Advertisement

-ಇವು ಬಿಹಾರ ವಿಧಾನಸಭೆ ಚುನಾವಣೆಗಾಗಿ ಕೇಂದ್ರ ಚುನಾವಣ ಆಯೋಗ ಪರಿಷ್ಕರಿಸಿ ಪ್ರಕಟಿಸಿರುವ ಹೊಸ ಮಾರ್ಗಸೂಚಿಗಳು. ಎಲ್ಲವೂ ಅಂದುಕೊಂಡಂತಾದರೆ ಇದೇ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು. ಯಾವ ರೀತಿ ಚುನಾವಣೆ ನಡೆಸಬೇಕು, ಅಭ್ಯರ್ಥಿಗಳ ಪಾತ್ರ, ಜನರ ಪಾತ್ರ, ಸಿಬಂದಿ ಪಾತ್ರದ ಬಗ್ಗೆ ಆಯೋಗ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ತಾನು ಹಿಂದೆಯೇ ರೂಪಿಸಿದ್ದ ನೀತಿ ಸಂಹಿತೆಯನ್ನು ಪರಿಷ್ಕರಿಸಿ ಹೊಸದಾಗಿ ಬಿಡುಗಡೆ ಮಾಡಿದೆ.

ಸೆ. 20ರಂದು ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿದ್ದು, ಅಂದಿನಿಂದಲೇ ಪರಿಷ್ಕೃತ ನೀತಿ ಸಂಹಿತೆ ಜಾರಿಯಾಗಲಿದೆ.

ಹೊಸ ನಿಯಮಾವಳಿಗಳಲ್ಲೇನಿದೆ?
=ಆನ್‌ಲೈನ್‌ನಲ್ಲೇ ನಾಮಪತ್ರ, ಅಫಿಡವಿಟ್‌, ಠೇವಣಿ ಸಲ್ಲಿಕೆ
=ಆಫ್ಲೈನ್‌ನಲ್ಲೂ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ
=ಜಿಲ್ಲಾಧಿಕಾರಿ ಕಚೇರಿಗೆ ಸೀಮಿತ ಜನರ ಜತೆ ಬರಬೇಕು
=ಅಭ್ಯರ್ಥಿಗೆ ಸಂಬಂಧಿಸಿದ ವಾಹನಗಳಿಗಷ್ಟೇ ಪ್ರವೇಶ
=ಮನೆ ಮನೆ ಪ್ರಚಾರದ ವೇಳೆ ಕೇವಲ 5 ಜನರಿಗೆ ಮಾತ್ರ ಅವಕಾಶ
=ಬಹಿರಂಗ ಸಭೆ, ರೋಡ್‌ ಶೋಗಳಿಗೆ ಕೇಂದ್ರ, ರಾಜ್ಯ ಸರಕಾರಗಳು ರೂಪಿಸುವ ನಿಯಮ ಪಾಲಿಸಬೇಕು

ಮಾಸ್ಕ್, ಗ್ಲೌಸ್‌ ಕಡ್ಡಾಯ
ಚುನಾವಣ ಪ್ರಕ್ರಿಯೆಗಳ ವೇಳೆ, ಚುನಾವಣ ಸಿಬಂದಿ ಮಾಸ್ಕ್, ಗ್ಲೌಸ್‌, ಫೇಸ್‌ ಶೀಲ್ಡ್‌ ಮತ್ತು ಅಗತ್ಯವಿದ್ದ ಕಡೆ ಪಿಪಿಇ ಕಿಟ್‌ಗಳನ್ನು ಧರಿಸುವುದು ಕಡ್ಡಾಯೆ. ಹಾಗಾಗಿ ಅವರೆಲ್ಲರಿಗೂ ಈ ಪರಿಕರಗಳಿರುವ ಕಿಟ್‌ ನೀಡಲಾಗುತ್ತದೆ. ಮತಗಟ್ಟೆಗಳ ಪ್ರತೀ ಹಂತದಲ್ಲಿಯೂ ಥರ್ಮಲ್‌ ಸ್ಕ್ಯಾನರ್‌ಗಳು, ಸ್ಯಾನಿಟೈಸರ್‌ ಬಳಕೆ ಕಡ್ಡಾಯ. ಕೊರೊನಾ ಲಕ್ಷಣಗಳುಳ್ಳ ಮತದಾರರಿಗೆ ಮತಗಟ್ಟೆ ಪ್ರವೇಶದಿಂದ ನಿರ್ಬಂಧ ವಿಧಿಸಲಾಗುತ್ತದೆ.

Advertisement

ಥರ್ಮಲ್‌ ಸ್ಕ್ಯಾನಿಂಗ್‌ ಕಡ್ಡಾಯ
ಮತಗಟ್ಟೆಯೊಳಗೆ ಬರುವ ಪ್ರತೀ ಮತದಾರನ ಥರ್ಮಲ್‌ ಸ್ಕ್ಯಾನಿಂಗ್‌ ನಡೆಸಲೇಬೇಕಿದ್ದು, ಒಳಬರುತ್ತಿದ್ದಂತೆ ಸ್ಯಾನಿಟೈಸರ್‌ ಹಾಕಿ ಕೈಗಳನ್ನು ಶುಭ್ರಗೊಳಿಸಲು ಸೂಚಿಸಬೇಕು. ಮತದಾರರ ಥರ್ಮಲ್‌ ಸ್ಕ್ಯಾನಿಂಗ್‌ಗಾಗಿ ಆಶಾ ಕಾರ್ಯಕರ್ತೆಯರನ್ನು ಅಥವಾ ಅರೆವೈದ್ಯಕೀಯ ಸಿಬಂದಿ ಬಳಸಬಹುದು. ಇಲ್ಲವಾದರೆ ಬೂತ್‌ನಲ್ಲಿರುವ ಸಿಬಂದಿಯೇ ಇದನ್ನು ನಿರ್ವಹಿಸಬಹುದು ಎಂದು ಸೂಚಿಸಲಾಗಿದೆ. ಅವರು ಮತದಾರರ ಪಟ್ಟಿಯಲ್ಲಿ ಸಹಿ ಹಾಕುವಾಗ ಮತ್ತು ಇವಿಎಂ ಬಟನ್‌ ಒತ್ತುವಾಗ ಕಡ್ಡಾಯವಾಗಿ ಗ್ಲೌಸ್‌ ಧರಿಸಿರಬೇಕೆಂದು ಸೂಚಿಸಲಾಗಿದೆ. ಇದಕ್ಕಾಗಿ ಮತಯಂತ್ರವನ್ನು ನಿರ್ವಹಿಸುವ ಅಧಿಕಾರಿಯ ಬಳಿ ಹೆಚ್ಚಿನ ಸಂಖ್ಯೆಯ ಗ್ಲೌಸ್‌ಗಳನ್ನು ನೀಡಬೇಕೆಂದು ನಿಯಮಗಳಲ್ಲಿ ಉಲ್ಲೇಖೀಸಲಾಗಿದೆ. ಮತದಾರರ ಜತೆಗೆ ಬರುವ ಮಕ್ಕಳಿಗೆ ಸ್ಯಾನಿಟೈಸರ್‌, ಫೇಸ್‌ ಮಾಸ್ಕ್ ನೀಡಬೇಕೆಂದು ಸೂಚಿಸಲಾಗಿದೆ.

ಸಾಮಾಜಿಕ ಅಂತರಕ್ಕೆ ಒತ್ತು
=ಪ್ರತೀ ಮತಗಟ್ಟೆಯಲ್ಲಿ ಸಾಲು ನಿಲ್ಲುವ ಮತದಾರರ ನಡುವೆ ಅಂತರ ಕಡ್ಡಾಯ. ಒಂದು ಮತಗಟ್ಟೆಯಲ್ಲಿ ಮತ ಚಲಾಯಿಸುವ ಮತದಾರರ ಸಂಖ್ಯೆಯನ್ನು 1,000ಕ್ಕೆ ಮಿತಿಗೊಳಿಸಲಾಗಿದೆ. ಮತಗಟ್ಟೆಗಳ ಹೊರಗೆ ಹೆಲ್ಪ್ಡೆಸ್ಕ್ ಸ್ಥಾಪಿಸಬೇಕಿದೆ ಎಂದು ಪರಿಷ್ಕೃತ ನೀತಿ ಸಂಹಿತೆಯಲ್ಲಿ ತಿಳಿಸಲಾಗಿದೆ.

= ರೋಗಿಗಳಿಗೆ ಅಂಚೆ ಮತದಾನ ಅವಕಾಶ
ಕೊರೊನಾ ರೋಗದಿಂದಾಗಿ ಶುಶ್ರೂಷೆ, ಚಿಕಿತ್ಸೆಯಲ್ಲಿರುವ ಮತದಾರರಿಗೆ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನ ಮುಗಿಯಲು ಒಂದು ತಾಸಿನ ಕಾಲಾವಕಾಶ ಇರುವಾಗ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಮತ ಎಣಿಕೆ
ಮತ ಎಣಿಕೆಗೆ ಮುನ್ನ ಕೇಂದ್ರವನ್ನು ಸ್ಯಾನಿಟೈಸ್‌ ಮಾಡಬೇಕು. ಒಂದು ಮತ ಎಣಿಕೆ ಕೇಂದ್ರದಲ್ಲಿ ಏಳಕ್ಕಿಂತ ಹೆಚ್ಚು ಮೇಜುಗಳನ್ನು ಇರಿಸುವಂತಿಲ್ಲ. ಮತ ಎಣಿಕೆಗಾಗಿ ಬಳಸಲಾಗುವ ಸಿಯುಗಳು ಅಥವಾ ವಿವಿಪ್ಯಾಟ್‌ಗಳನ್ನು ಸ್ಯಾನಿಟೈಸ್‌ ಮಾಡಬೇಕು. ಒಂದು ಹಾಲ್‌ನಲ್ಲಿ ಕೇವಲ 7 ಮೇಜುಗಳಿಗೆ ಮಾತ್ರ ಅವಕಾಶವಿರುವುದರಿಂದ ಪ್ರತೀ ಮತಕ್ಷೇತ್ರದ ಮತಗಳ ಎಣಿಕೆಗಾಗಿ ಮೂರು ಅಥವಾ ನಾಲ್ಕು ಮತ ಎಣಿಕೆ ಕೇಂದ್ರಗಳನ್ನು ನಿಗದಿಪಡಿಸಬೇಕು. ಜತೆಗೆ ಆ ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಹೆಚ್ಚುವರಿ ರಿಟರ್ನ್ ಅಧಿಕಾರಿ ಕಡ್ಡಾಯವಾಗಿ ಮೇಲುಸ್ತುವಾರಿ ವಹಿಸಬೇಕು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next