ಪಾಟ್ನಾ: ಪತಿ ರಾಮ ಸಿಂಗ್ ಅವರನ್ನು ಆರ್ ಜೆಡಿ ಪಕ್ಷಕ್ಕೆ ಬರಮಾಡಿಕೊಳ್ಳಲು ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಸಿಂಗ್ ಪತ್ನಿ ವೀಣಾ ಸಿಂಗ್ ಅವರನ್ನು ರಾಷ್ಟ್ರೀಯ ಜನತಾ ದಳ ಬಿಹಾರದ ಮಹನಾರ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಲೋಕಸಭಾ ಮಾಜಿ ಸಂಸದ ರಾಮ ಸಿಂಗ್ ಅವರು, ತಾನು ಇನ್ನು ಒಂದೆರಡು ದಿನಗಳಲ್ಲಿ ಆರ್ ಜೆಡಿಗೆ ಸೇರ್ಪಡೆಗೊಳ್ಳಲಿದ್ದೇನೆ ಎಂದು ತಿಳಿಸಿದ್ದರು. ತನ್ನ ಪತ್ನಿ ಮಹನಾರ್ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಅಕ್ಟೋಬರ್ 14ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದರು.
ಏತನ್ಮಧ್ಯೆ ರಾಮ ಸಿಂಗ್ ಆರ್ ಜೆಡಿ(ರಾಷ್ಟ್ರೀಯ ಜನತಾ ದಳ)ಗೆ ಸೇರ್ಪಡೆಗೊಳ್ಳದಂತೆ ಈ ಮೊದಲು ತಡೆದವರು ಕೇಂದ್ರ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್. ರಾಮ ಸಿಂಗ್ ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು. ರಘುವಂಶ್ ಅವರು ಸೆಪ್ಟೆಂಬರ್ 13ರಂದು ನಿಧನರಾಗಿದ್ದರು. ಇಬ್ಬರು ಮುಖಂಡರು ವೈಶಾಲಿಯಲ್ಲಿ ರಾಜಕೀಯ ಶತ್ರುಗಳಾಗಿದ್ದರು.
ಆರ್ ಜೆಡಿ ಬೆಂಬಲಿಗರು ಹಾಗೂ ವೈಶಾಲಿ ಜನರು ರಾಮ ಸಿಂಗ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದನ್ನು ಬಲವಾಗಿ ವಿರೋಧಿಸಿದ್ದರು. ರಘುವಂಶ್ ಅವರ ನಿಧನದಿಂದ ಆರ್ ಜೆಡಿಗೆ ಯಾವುದೇ ನಷ್ಟವಾಗಿಲ್ಲ. ಯಾಕೆಂದರೆ ವೈಶಾಲಿಯಲ್ಲಿ ಆರ್ ಜೆಡಿ ಪಕ್ಷ ಬಲಿಷ್ಠವಾಗಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಕುಟುಂಬದ ಸದಸ್ಯರೊಬ್ಬರು ಬೇಕು ಎಂದು ಆರ್ ಜೆಡಿ ಬಯಸಿತ್ತು. ನಂತರ ಪತ್ನಿ ಬಿಎಸ್ ಎನ್ ಎಲ್ ಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರ್ಪಡೆಗೊಂಡಿರುವುದಾಗಿ ರಾಮ ಸಿಂಗ್ ವಿವರಿಸಿದ್ದಾರೆ.