Advertisement

“ಸಿನೆಮಾ ನಿರ್ಮಾಣ ಕನಸಿದೆ, ಗಲ್ಲಿ ಕಿಚನ್‌ ಮುಂದುವರಿಯಲಿದೆ’

04:50 PM Feb 21, 2020 | Sriram |

ಬಿಗ್‌ಬಾಸ್‌ ಮನೆಯ ಅನುಭವ ಹೇಗಿತ್ತು?
ಬಿಗ್‌ಬಾಸ್‌ ವೇದಿಕೆ ವಿಶೇಷ ಮತ್ತು ಅದ್ಭುತ ಅನುಭವ ನೀಡಿದೆ. ಹುಟ್ಟಿದ ಮನೆಯಲ್ಲಿ ಹೆತ್ತವರು, ಹಿರಿಯರಿಂದ ಕಲಿತ ಸಂಸ್ಕಾರ ಒಂದಾಗಿದ್ದರೆ, ಬಿಗ್‌ಬಾಸ್‌ ಮನೆಯ ಸದಸ್ಯರಿಂದ ಮತ್ತೂಂದಷ್ಟು ಸಂಸ್ಕಾರ ಕಲಿತೆ. ಹೀಗೆ ಎರಡು ಸಲ ಸಂಸ್ಕಾರ ಕಲಿಯುವ ಯೋಗ ನನ್ನದಾಯಿತು.

Advertisement

ಮನೆ ಪ್ರವೇಶಿಸುವಾಗ ಗೆಲ್ಲುವ ನಿರೀಕ್ಷೆ ಇತ್ತಾ?
ಒಳ್ಳೆಯ ಗುಣ ನಡತೆ, ಶಿಸ್ತು ಬದ್ಧ ಜೀವನ ನಡೆಸುವುದು, ಸಮಯ ಕಳೆಯುವ ವಿಧಾನ ಹೀಗೆ ಹೊಂದಾಣಿಕೆಯಿಂದ ಹೇಗೆ ಬದುಕಬೇಕು ಅನ್ನುವ ಕಲೆಯನ್ನು ಬಿಗ್‌ಬಾಸ್‌ ಕಟ್ಟಿಕೊಟ್ಟಿದೆ. ಮನೆ ಪ್ರವೇಶಿಸುವಾಗ ಮನೆಯ ಎಲ್ಲ ಸದಸ್ಯರಿಗೂ ಗೆಲ್ಲಬೇಕು ಅನ್ನುವ ಆಸೆ ಇದ್ದೆ ಇರುತ್ತೆ. ಅದೇ ಆಸೆ ನನ್ನಲ್ಲಿ ಇತ್ತು. ಗೆಲುವಿನ ಬಗ್ಗೆ ಅಷ್ಟು ನಿರೀಕ್ಷೆ ಇಟ್ಟಿರಲಿಲ್ಲ. ಮನೆಯ ಒಳಗಡೆ ಇರುವಷ್ಟು ದಿನ ಎಲ್ಲ ಸಮಯ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಅಂತ ನಿರ್ಧರಿಸಿದ್ದೆ. ಅದರ ಫ‌ಲ ಗೆಲುವಿನ ಮೂಲಕ ದೊರಕಿದೆ.

ಗೆದ್ದ ಹಣದಿಂದ ಏನು ಮಾಡುತ್ತೀರಿ?
ಗೆದ್ದು ಬಂದ ಹಣದಿಂದ ದೇವರ ಹರಕೆ ಮೊದಲು ತೀರಿಸುತ್ತೇನೆ. ಮತ್ತೆ ಉಳಿದ ಬಗ್ಗೆ ಯೋಚನೆ ಮಾಡುವೆ. ಹಿರಿಯರು ದೈವ ದೇವರನ್ನು ಆರಾಧಿಸಿಕೊಂಡು ಬಂದಿದ್ದಾರೆ. ದೇವರ ಮೇಲೆ ಅಪಾರ ನಂಬಿಕೆ, ಕಾಳಜಿ ಇರುವುದರಿಂದ ಅದೆಲ್ಲ ತೀರಿಸಬೇಕಿದೆ. ನಾವು ಕೆಲವರಿಂದ ಹರಕೆ ತಗೊಂಡು ಬಂದಿದ್ದೀವಿ. ಅದನ್ನು ತೀರಿಸಬೇಕಿದೆ.

ಈಗಿನ-ಹಿಂದಿನ ಬದುಕಿಗಿರುವ ವ್ಯತ್ಯಾಸ?
ನನ್ನ ಬದುಕಿನ ಜೀವನ ಹಿಂದಿನಂತೆ ಹಾಗೆಯೇ ಇರಲಿದೆ. ಮೊದಲು ಜೀವನ ಸಲಿಸಾಗಿತ್ತು. ಈಗ ಜವಾಬ್ದಾರಿ ಹೆಚ್ಚಿದೆ.

ವಿಜೇತರಾದ ಬಳಿಕ ಹೊಟೇಲು ವ್ಯಾಪಾರ ಹೇಗಿದೆ?
ಬಿಗ್‌ ಬಾಸ್‌ ಮನೆಯ 114 ದಿವಸಗಳಲ್ಲಿ ನನ್ನ ಹೊಟೇಲು ವಿಚಾರವು ಪ್ರಸ್ತಾವಗೊಂಡಿತ್ತು. ನಾನಿಲ್ಲದಿದ್ದರೂ ಅಭಿಮಾನದಿಂದ ಅಭಿಮಾನಿಗಳು ಹೊಟೇಲಿಗೆ ಬಂದು ತಿಂಡಿ ತಿಂದು ಹೋಗುತ್ತಿದ್ದರು. ಬಿಗ್‌ ಬಾಸ್‌ ವಿಜೇತನಾದ ಬಳಿಕ ವ್ಯಾಪಾರ ಕೂಡ ಹೆಚ್ಚಾಗಿದೆ.

Advertisement

ವಾಸುಕಿ ವೈಭವ ಜತೆ ನಿಮ್ಮ ಅನುಬಂಧ?
ವಾಸುಕಿ ವೈಭವ ನನ್ನ ನೆಚ್ಚಿನ ಗೆಳೆಯ. ಆತನಲ್ಲಿ ಪ್ರತಿಭೆಯಿದೆ. ಚುರುಕುತನವಿದೆ, ಮನಸ್ಸು ಒಳ್ಳೆದಿದೆ. ಸುನಾಮಿ ಬಂದರೂ ನನ್ನ ಮತ್ತು ವಾಸುಕಿ ವೈಭವ್‌ ನಡುವಿನ ಬಾಂಧವ್ಯ ಬೇರೆ ಮಾಡಲು ಸಾದ್ಯವಿಲ್ಲ. ಒಬ್ಬ ಸ್ನೇಹಿತ ಆಗಬೇಕಾದರೆ ಆತನ ಮೇಲೆ ಪ್ರೀತಿ ಇರಬೇಕು. ಆತ ಬರೆದ ಒಂದು ಹಾಡಿದೆ. ಮನಸ್ಸಿನಿಂದ ಯಾರು ಕೆಟ್ಟವರಲ್ಲಂತ. ಆ ಹಾಡಲ್ಲೆ ಆ ವ್ಯಕ್ತಿಯ ವ್ಯಕ್ತಿತ್ವ ಏನು ಅನ್ನೋದು ಗೊತ್ತಾಗುತಿತ್ತು.

ಅಭಿಮಾನಿಗಳಿಗೆ ಏನು ಹೇಳಬಯಸುತ್ತೀರಿ?
ಅಭಿಮಾನಿಗಳಿಗೆ ನಾನು ಹೇಳ ಬಯಸುವುದಿಷ್ಟೆ ನಿಮಗೂ ಒಳ್ಳೆ ಸ್ನೇಹಿತರು ಇರುತ್ತಾರೆ. ಅವರಿವರು ಹೇಳುತ್ತಾರೆ ಅಂತ ತಲೆ ಕೆಡಿಸಿಕೊಳ್ಳಬೇಡಿ. ಸ್ನೇಹಿತನ ಬಗ್ಗೆ ನಿಮಗಿರುವ ನಂಬಿಕೆನ ಉಳಿಸಿಕೊಳ್ಳಿ. ಆ ವ್ಯಕ್ತಿಯಲ್ಲಿ ಅಂತ ಭಾವನೆ ಇದ್ದರೂ ವ್ಯಕ್ತಿ ಬದಲಾಗುವ ಸಾಧ್ಯತೆಗಳಿವೆ.

ಬಿಗ್‌ಬಾಸ್‌ ನಟನೆ ಮತ್ತು ವಾಸ್ತವ ವ್ಯಕ್ತಿತ್ವ ಬಗ್ಗೆ ನಿಮ್ಮ ಅನಿಸಿಕೆ
ಎಷ್ಟೊ ರಿಯಾಲಿಟಿ ಶೋಗಳು ಬರುತ್ತವೆ. ಆದರೆ ಬಿಗ್‌ಬಾಸ್‌ ಮನೆಯಲ್ಲಿ ನಾವು ನಾವಾಗಿರಲು ಸಾಧ್ಯವೇ ಇಲ್ಲ. ಜಾಸ್ತಿ ಎಂದರೆ ಮೂರ್ನಾಲ್ಕು ದಿನ ನಟನೆ ಮಾಡಬಹುದು ಹೆಚ್ಚು ದಿನ ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ತಾನಲ್ಲದ್ದನ್ನು ತೋರಿಸುವುದೆ ಸಾಧ್ಯನೇ ಇಲ್ಲ. ವ್ಯಕ್ತಿತ್ವಕ್ಕೆ ಪ್ರಶಂಸೆ ನೀಡುವ ಒಂದೆ ಒಂದು ವೇದಿಕೆ ಬಿಗ್‌ ಬಾಸ್‌ ವಿಶ್ವದಲ್ಲೇ ಬಿಗ್‌ ಬಾಸ್‌ಗೆ ಸರಿ ಸಾಟಿ ಯಾವುದು ಇಲ್ಲಂತ ನನ್ನ ಅನಿಸಿಕೆ.

ಆರಂಭಿಕ ನಿಮ್ಮ ಜರ್ನಿ ಹೇಗೆ ಆರಂಭವಾಯಿತು?
ಸ್ಥಳೀಯವಾಗಿ ಆ್ಯಂಕರ್‌ ಆಗಿದ್ದೆ. ಡಿಗ್ರಿಯಲ್ಲಿ ಇರಬೇಕಾದರೆ ನಾಲ್ಕನೆ ಸೆಮಿಸ್ಟರ್‌ನಲ್ಲಿ ಬಾಲಾಜಿ ಟೆಲಿ ಫಿಲಂಸ್‌ ಮುಂಬಯಲ್ಲಿನ ಸೆಮಿನಾರ್‌ಗೆ ಆಯ್ಕೆಯಾದೆ ಬಳಿಕ ಮುಂಬಯಿಗೆ ತೆರಳಿದೆ. ಒಂದು ವರ್ಷಗಳ ಕಾಲ ಆ್ಯಕ್ಟಿಂಗ್‌ ಡಿಪ್ಲೊಮಾ ಮಾಡಿದೆ. ಅದಾದ ಮೇಲೆ ಕೆಲವರ ಸಂಪರ್ಕ ಗಳಿಸಿ ಬೆಂಗಳೂರಿಗೆ ಹೋದೆ. ಸೀರಿಯಲ್‌ಗ‌ಳಲ್ಲಿ ಅವಕಾಶ ಪಡಕೊಂಡೆ.

ಯುವಜನತೆಗೆ ನಿಮ್ಮ ಕಿವಿಮಾತೇನು?
ಪ್ರತಿ ಹಂತದಲ್ಲಿ ಸೋಲು ಗೆಲುವು ನಿಶ್ಚಿತ. ಸೋಲು-ಗೆಲುವು ಎರಡನ್ನೂ ಎದುರಿಸಬೇಕು. ಎದೆಗುಂದದೆ ಮುಂದಡಿ ಇಟ್ಟಾಗ ಗುರಿ ಸಾಧಿಸಲು ಸಾಧ್ಯ. ಪ್ರಯತ್ನ, ಪ್ರಾಮಾಣಿಕತೆ, ಪ್ರಯತ್ನ ವಿದ್ದಾಗ ಅಂದುಕೊಂಡ ಗುರಿ ತಲುಪಲು ಸಾಧ್ಯವಿದೆ. ಗೆಲುವಿಗೆಷ್ಟು ಪ್ರಾಮುಖ್ಯತೆ ಇದೆಯೋ ಸೋಲಿಗೂ ಅಷ್ಟೆ ಇರಲಿ. ಸೋಲು ಗೆಲುವು ಎರಡಕ್ಕೂ ಬೇಸರ ಪಡಬಾರದು. ಇದನ್ನು ಯುವಕರು ಹೊಂದಿರಬೇಕು.

ಪತ್ರಿಕೆಗೆ ಶುಭಾಶಯ
“ಉದಯವಾಣಿ’ ಉಡುಪಿ ಕಚೇರಿಗೆ ಆಗಮಿಸಿದ್ದ ಶೈನ್‌ ಶೆಟ್ಟಿ ಅವರನ್ನು ಸ್ವಾಗತಿಸಲಾಯಿತು. ಉದಯವಾಣಿ ದೈನಿಕ 50 ವರ್ಷಾಚರಣೆ ಸಂಭ್ರಮದಲ್ಲಿರುವುದು ಸಂತಸ ತಂದಿದೆ. ನನ್ನ ಬೆಳವಣಿಗೆಯಲ್ಲಿ ಉದಯವಾಣಿ ಪಾತ್ರವೂ ಇದೆ. 50ನೇ ವರ್ಷಾಚರಣೆಯಲ್ಲಿ ಇರುವಾಗಲೆ ತಾನು ಬಿಗ್‌ಬಾಸ್‌ ಮುಡಿಗೇರಿಸಿಕೊಂಡಿರುವುದು ಎರಡೂ ಕೂಡ ಸಂತಸ ಇಮ್ಮಡಿಗೊಳಿಸಿದೆ ಎಂದು ಹೇಳಿದ ಶೈನ್‌ ಶೆಟ್ಟಿ ಪತ್ರಿಕೆಗೆ ಶುಭ ಕೋರಿ. ತುಳು ಹಾಗೂ ಕುಂದಾಪುರ ಭಾಷೆಯಲ್ಲಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next