ಶಿವಮೊಗ್ಗ: ಇಲ್ಲಿನ ಉಪವಿಭಾಗಾಧಿಕಾರಿ ಪ್ರಕಾಶ್ ಅವರ ಪತ್ನಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆಕೆ ಕೆಲಸ ನಿರ್ವಹಿಸುತ್ತಿದ್ದ ಶಾಲಾ ಮುಖ್ಯಶಿಕ್ಷಕಿಯ ಮೇಲೆ ಅನುಮಾನ ವ್ಯಕ್ತವಾಗಿದೆ.
ವಲಯ ಉಪವಿಭಾಗಾಧಿಕಾರಿ ಪ್ರಕಾಶ್ ಅವರ ಪತ್ನಿ ಸುಮಾ (45) ಅವರು ಇಲ್ಲಿನ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಡಿಸೆಂಬರ್ 24ರಂದು ಆತ್ಮಹತ್ಯೆಗೆ ಶರಣಾಗಿದ್ದರು.
ಈ ಹಿಂದೆ ಮಕ್ಕಳಾಗಿಲ್ಲ ಎಂದು ಮನನೊಂದು ಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದರೆ ಸದ್ಯ ಪೊಲೀಸ್ ತನಿಖೆಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿದ್ದು, ಸುಮಾ ಕೆಲಸ ಮಾಡುತ್ತಿದ್ದ ಶಾಲೆಯ ಮುಖ್ಯಶಿಕ್ಷಕಿಯ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸುಮಾ ಅವರು ಇತ್ತೀಚೆಗಷ್ಟೇ ಇಲ್ಲಿನ ಸರ್ಕಾರಿ ಬಾಲಕಿಯರ ಶಾಲೆಗೆ ವರ್ಗವಾಗಿ ಬಂದಿದ್ದರು. ಶಾಲಾ ಮುಖ್ಯಶಿಕ್ಷಕಿಯವರು ಸುಮಾಗೆ ಇಲ್ಲ- ಸಲ್ಲದ ಕೆಲಸ ಹೇಳಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಮನನೊಂದು ಸುಮಾ ನೇಣಿಗೆ ಶರಣಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮುಖ್ಯ ಶಿಕ್ಷಕಿಯ ಮಾನಸಿಕ ಕಿರುಕುಳದ ವಿಷಯವನ್ನು ಸುಮಾ ಅವರು ಪತಿ ಎಸಿ ಪ್ರಕಾಶ್ ಅವರ ಗಮನಕ್ಕೆ ಸಹ ತಂದಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ಸುಮಾ ಅವರು ‘ಕೆಜಿಎಸ್’ ಎಂಬುವರಿಗೆ ಕಾಲ್ ಮಾಡಿ ಬೇಸರ ಹೇಳಿ ಕೊಂಡಿದ್ದರು. ಪೊಲೀಸ್ ತನಿಖೆ ವೇಳೆ ಈ ಫೋನ್ ಕಾಲ್ ವಿಚಾರ ಬೆಳಕಿಗೆ ಬಂದು ಪ್ರಕರಣ ಹೊಸ ತಿರುವು ಪಡೆದಿದೆ.
ಡಿಸೆಂಬರ್ 24ರಂದು ಸುಮಾ ಶಿವಮೊಗ್ಗ ಹೊರವಲಯದ ನಿಸರ್ಗ ಬಡಾವಣೆಯಲ್ಲಿರುವ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ತುಂಗಾ ನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.