Advertisement

ನಾಳೆ 2022 ಬೈಕ್‌ಗಳ ಮಹಾ ರ್ಯಾಲಿ

12:43 PM Apr 30, 2022 | Team Udayavani |

ಬೀದರ: ಈ ಬಾರಿಯ ಬಸವ ಜಯಂತಿಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ದಿಸೆಯಲ್ಲಿ ನಗರದಲ್ಲಿ ಮೇ 1, 2 ಮತ್ತು 3ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಹೇಳಿದರು.

Advertisement

ಮೇ 1ರಂದು 2022 ಬೈಕ್‌ಗಳ ಮಹಾ ರ್ಯಾಲಿ, ಮೇ 2ರಂದು ವಚನ ಸಂಗೀತ ಮತ್ತು ನೃತ್ಯೋತ್ಸವ ಹಾಗೂ ಮೇ 3 ರಂದು ಮೆರವಣಿಗೆ ನಡೆಯಲಿದೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 1ರಂದು ಬೆಳಿಗ್ಗೆ 9:30ಕ್ಕೆ ಸಿದ್ಧಾರೂಢ ಮಠದಲ್ಲಿ ಡಾ| ಶಿವಕುಮಾರ ಸ್ವಾಮೀಜಿ ಅವರು ಬೈಕ್‌ ರ್ಯಾಲಿಗೆ ಚಾಲನೆ ನೀಡುವರು. ರ್ಯಾಲಿಯು ಪ್ರಮುಖ ಬೀದಿಗಳ ಮೂಲಕ ಪಾಪನಾಶ ದೇವಸ್ಥಾನಕ್ಕೆ ತಲುಪಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ಅಂದು ಸಂಜೆ 5:30ಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬಸವ ಜಯಂತಿ ಉತ್ಸವಕ್ಕೆ ಚಾಲನೆ ನೀಡುವರು. ಜಹೀರಾಬಾದ್‌ ಸಂಸದ ಬಿ.ಬಿ. ಪಾಟೀಲ ಷಟ್‌ಸ್ಥಲ ಧ್ವಜಾರೋಹಣ ಮಾಡುವರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಸಾಹಿತಿ ರಂಜಾನ್‌ ದರ್ಗಾ ಅನುಭಾವ ಮಂಡಿಸುವರು. ಉತ್ಸವ ಸಮಿತಿಯ ಹಿರಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡುವರು. ಜಿಲ್ಲೆಯ ಮಠಾ ಧೀಶರು ಪಾಲ್ಗೊಳ್ಳುವರು. ಗುಲಬರ್ಗಾ ವಿವಿ ಗೌರವ ಡಾಕ್ಟರೇಟ್‌ಗೆ ಭಾಜನರಾದ ಬೆಲ್ದಾಳ ಸಿದ್ಧರಾಮ ಶರಣರು, ಗುರಮ್ಮ ಸಿದ್ದಾರೆಡ್ಡಿ ಹಾಗೂ ಬಸವರಾಜ ಪಾಟೀಲ ಅಷ್ಟೂರು ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮೇ 2ರಂದು ಸಂಜೆ 5ಕ್ಕೆ ರಂಗ ಮಂದಿರದಲ್ಲಿ ರಾಜ್ಯಮಟ್ಟದ ಖ್ಯಾತ ಕಲಾವಿದರಿಂದ ವಚನ ಸಂಗೀತ ಹಾಗೂ ನೃತ್ಯೋತ್ಸವ ಜರುಗಲಿದೆ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಉದ್ಘಾಟಿಸುವರು. ಬಸವ ಜಯಂತಿ ಉತ್ಸವ ಸಮಿತಿಯ ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

Advertisement

ಮೇ 3ರಂದು ಸಂಜೆ 5ಕ್ಕೆ ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡುವರು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಷಟ್‌ಸ್ಥಲ ಧ್ವಜಾರೋಹಣ ಮಾಡುವರು ಎಂದು ತಿಳಿಸಿದರು.

ಬಸವ ಜಯಂತಿ ಪ್ರಯುಕ್ತ ಬಸವ ಭಕ್ತರು ತಮ್ಮ ಮನೆಗಳಿಗೆ ದೀಪಾಲಂಕಾರ ಮಾಡಿ, ಷಟ್‌ಸ್ಥಲ ಧ್ವಜಾರೋಹಣ ಮಾಡಬೇಕು ಎಂದು ಬಿಡಿಎ ಅಧ್ಯಕ್ಷ ಬಾಬುವಾಲಿ ತಿಳಿಸಿದರು. ಮೆರವಣಿಗೆಯಲ್ಲಿ ಶರಣರ ವೇಷಧಾರಿ ಮಕ್ಕಳು ಕುದುರೆ, ಒಂಟೆಗಳ ಮೇಲೆ ಇರಲಿದ್ದಾರೆ. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಕಳೆತಂದುಕೊಡಲಿದೆ ಎಂದು ಮೆರವಣಿಗೆ ಸಮಿತಿಯ ಅಧ್ಯಕ್ಷ ವಿರೂಪಾಕ್ಷ ಗಾದಗಿ ಹೇಳಿದರು.

ಈ ಬಾರಿ ಎಲ್ಲ ಸಮುದಾಯದವರು ಸೇರಿ ಬಸವ ಜಯಂತಿ ಆಚರಿಸುತ್ತಿರುವುದು ವಿಶೇಷವಾಗಿದೆ. ಶಾಹೀನ್‌ ಕಾಲೇಜಿನವರು ಚೌಬಾರಾ ಬಳಿ ಬಸವ ಜಯಂತಿ ಮೆರವಣಿಗೆಗೆ ಸ್ವಾಗತ ಕೋರಲಿದ್ದಾರೆ. ಪ್ರತಿ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಿ ಪೂಜೆ ಸಲ್ಲಿಸಬೇಕು ಎಂದು ಬಸವ ಜಯಂತಿ ಉತ್ಸವ ಸಮಿತಿಯ ಗೌರವ ಸಲಹೆಗಾರ ಶಿವಶರಣಪ್ಪ ವಾಲಿ ಮನವಿ ಮಾಡಿದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷ ಕುಶಾಲರಾವ್‌ ಪಾಟೀಲ ಖಾಜಾಪುರ, ಕೋಶಾಧ್ಯಕ್ಷ ಡಾ| ರಜನೀಶ್‌ ವಾಲಿ, ಮುಖಂಡರಾದ ಬಸವರಾಜ ಬುಳ್ಳಾ, ಶರಣಪ್ಪ ಮಿಠಾರೆ, ದೀಪಕ್‌ ವಾಲಿ, ಅಶೋಕುಮಾರ ಕರಂಜಿ, ಯೋಗೇಂದ್ರ ಯದಲಾಪುರೆ, ಬಸವರಾಜ ಭತಮುರ್ಗೆ, ಆನಂದ ಘಂಟೆ, ಪ್ರಕಾಶ ಸಾವಳಗಿ, ನಂದಕುಮಾರ ಪಾಟೀಲ, ನಿತಿನ್‌ ನವಲಕಿಲೆ, ಸುರೇಶ ಹಳೆಂಬರ್‌, ಸಂಜುಕುಮಾರ ಪಾಟೀಲ, ವಿಶಾಲ್‌ ಪಾಟೀಲ, ಸುರೇಶ ಸ್ವಾಮಿ, ರವಿ ಪಾಟೀಲ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next