Advertisement

ಬೀದರ್‌ನಲ್ಲಿ ಬೃಹತ್‌ ಲಿಂಗಾಯತ ಮಹಾ ಜಾಥಾ

05:40 AM Jul 20, 2017 | Team Udayavani |

ಬೀದರ: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಲಿಂಗಾಯತ ಧರ್ಮ ಸಮನ್ವಯ ಸಮಿತಿ ನಗರದಲ್ಲಿ ಬುಧವಾರ ಬೃಹತ್‌ ಲಿಂಗಾಯತ ಮಹಾರ್ಯಾಲಿ ನಡೆಸಿತು.

Advertisement

ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟ್ರ, ತೆಲಂಗಾಣದಿಂದ ಸಹಸ್ರಾರು ಸಂಖ್ಯೆಯಲ್ಲಿ ಬಸವಾನುಯಾಯಿಗಳು ಭಾಗವಹಿಸಿದ್ದರು. ಕೂಡಲಸಂಗಮದ ಶ್ರೀ ಮಾತೆ ಮಹಾದೇವಿ, ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಬೃಹತ್‌ ಪಥ ಸಂಚಲನ ನಡೆಸಲಾಯಿತು.

ರ್ಯಾಲಿಗೂ ಮುನ್ನ ನೆಹರು ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ನಡೆಯಿತು. ನಾಡಿನ ಹಲವು ಮಠಾಧಿಧೀಶರು, ಸ್ವಾಮೀಜಿಗಳು ಮತ್ತು ಜಿಲ್ಲೆಯ ಶಾಸಕರು ಸಾಕ್ಷಿಯಾದರು. ರ್ಯಾಲಿ ಬಳಿಕ ಬಳಿಕ ಸ್ವಾಮೀಜಿಗಳು, ಮುಖಂಡರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಅಂದಾಜು ಲಕ್ಷ
ಸಂಖ್ಯೆಯಲ್ಲಿ ಜನರು ಜಾಥಾದಲ್ಲಿ ಹೆಜ್ಜೆ ಹಾಕಿದರು.

ಲಿಂಗಾಯತ ಸ್ವತಂತ್ರ ಧರ್ಮ :
ಮಾತೆ ಮಹಾದೇವಿ
ಬೀದರ:
“ಲಿಂಗಾಯತ ಮತ್ತು ವೀರಶೈವ ಎರಡೂ ಪದಗಳು ಬೇರೆ. ಲಿಂಗಾಯತ 12ನೇ ಶತಮಾನದಲ್ಲಿ ಬಸವಣ್ಣನಿಂದ ಹುಟ್ಟಿದ ಸ್ವತಂತ್ರ ಧರ್ಮ. ಈ ಕುರಿತು ಯಾರೇ ಸ್ವಾಮೀಜಿ, ಸಂಶೋಧಕರು ವೇದಿಕೆ ಏರ್ಪಡಿಸಿದರೆ ಸಾಬೀತು ಮಾಡಿ ತೋರಿಸುತ್ತೇನೆ’ ಎಂದು ಕೂಡಲಸಂಗಮದ ಶ್ರೀ ಮಾತೆ ಮಹಾದೇವಿ ಸವಾಲು ಹಾಕಿದರು.

ಲಿಂಗಾಯತ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತ ಒಂದು ಜಾತಿ, ಪಂಥವಲ್ಲ, ಅದು ಸ್ವತಂತ್ರ ಧರ್ಮ. ಲಿಂಗಾಯತ ಜತೆಗೆ ವೀರಶೈವ ಪದ ಸೇರಿಸುವುದು ಅಪರಾಧ. ಹಿರಿಯ ಚಿಂತಕ ಚಿದಾನಂದ ಮೂರ್ತಿ ವೀರಶೈವ ಪದವೇ ಸತ್ಯ ಎಂದು ವಾದಿಸುತ್ತಿದ್ದರೆ ನಮ್ಮದು ತಕರಾರಿಲ್ಲ. ಒಂದೇ ಮನೆಯಲ್ಲಿ ಇಬ್ಬರು ಜಗಳ ಆಡುವುದು ಬೇಡ. ನೀವು (ವೀರಶೈವರು) ಪಕ್ಕದ ಮನೆಯವರಾಗಿಯೇ ಇರಿ. ಲಿಂಗಾಯತ ಧರ್ಮದಲ್ಲಿ ಬಂದು ಕಲುಷಿತ ಮಾಡಬೇಡಿ ಎಂದು ಹೇಳಿದರು.

Advertisement

ಅವಿವೇಕದ ನಿಲುವು: ಡಾ.ಚಿಮೂ
ಬೆಂಗಳೂರು
: ವೀರಶೈವ ಧರ್ಮವು ಸ್ವತಂತ್ರ ಧರ್ಮವೇ ಹೊರತು ಹಿಂದೂ ಧರ್ಮದ ಭಾಗವಲ್ಲ ಎಂಬ ನಿಲುವು ಮತ್ತು ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಎಂಬುದು ಅಪ್ಪಟ ಅವಿವೇಕ ಎಂದು ಸಂಶೋಧಕ ಎಂ.ಚಿದಾನಂದಮೂರ್ತಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರ ಅಂಕಿತ “ಕೂಡಲಸಂಗ ದೇವ’ ಅಲ್ಲವೆಂದು “ಲಿಂಗದೇವ’ ಎಂಬುದೇ ಅವರ ಅಂಕಿತವೆಂದೂ ಪ್ರತಿಪಾದಿಸಿರುವ ಮಾತೆ ಮಹಾದೇವಿ ತಮ್ಮ ಅವಿವೇಕದ ನಿಲುವನ್ನೇ ಮತ್ತೆ ಮುಂದುವರಿಸಿದ್ದಾರೆ. 12ನೇ ಶತಮಾನದ ಬಸವಣ್ಣನೇ ಲಿಂಗಾ ಯತ ಧರ್ಮದ ಸ್ಥಾಪಕನೆಂದೂ ಅವನು ಸ್ಥಾಪಿಸಿದ್ದು, ವೀರಶೈವ ಅಲ್ಲವೆಂದೂ ಹೇಳಿ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂದು ಕೇಂದ್ರ ಘೋಷಿಸಬೇಕೆಂದು ಒತ್ತಾಯಿಸಿರುವುದು ಅವಿವೇಕತನದಿಂದ ಕೂಡಿದೆ ಎಂದು ದೂರಿದರು. ಮಾತೆ ಮಹಾದೇವಿ ಅವರು ಮೂಲ ದಾಖಲೆಗಳನ್ನು ಅಲಕ್ಷಿಸಿದ್ದಾರೆ ಎಂಬುದು ಸ್ಪಷ್ಟ. ವೀರಶೈವ ಧರ್ಮವು ಸ್ವತಂತ್ರ ಧರ್ಮವೇ ಹೊರತು ಹಿಂದೂಧರ್ಮದ ಭಾಗವಲ್ಲ ಎಂಬ ನಿಲುವು ಕೂಡ ಮತ್ತೂಂದು ಅವಿವೇಕ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next