Advertisement
1 ಗಂಟೆ ಭೀತಿಯ ವಾತಾವರಣ
ಸುಮಾರು ಒಂದು ತಾಸು ನಾವು ತೀರಾ ಹೆದರಿದ್ದೆವು. ಮರ ಬಿದ್ದು 4-5 ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ಇರಲಿಲ್ಲ. ಮೊಬೈಲ್ ಫೋನ್ ನೀರಲ್ಲಿ ಎಲ್ಲೋ ಹೋಗಿತ್ತು. ಎಲ್ಲೆಡೆಯಿಂದ ನೀರು ನುಗ್ಗಿದ್ದರಿಂದ ಏನೂ ಮಾಡಲಾರದ ಸ್ಥಿತಿ ಇತ್ತು. ಸುಮಾರು ಅರ್ಧ ಗಂಟೆಯ ಬಳಿಕ ನೀರು ಇಳಿಯಲಾರಂಭಿಸಿತು. ನಾವು ಮಂಚದ ಮೇಲೆ ನಿಂತಿದ್ದರೂ ಎದೆಮಟ್ಟ ನೀರು ಬಂದಿತ್ತು. ಬದುಕಿದ್ದೇ ಹೆಚ್ಚು ಎಂದು ಹಾನಿಗೀಡಾದ ಮನೆಯ ಮಾಲಕ ಮಾಧವ ಅಮೀನ್ ವಿವರಿಸಿದರು.
ಜನಪ್ರತಿನಿಧಿ, ಅಧಿಕಾರಿಗಳ ಭೇಟಿ
ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. MSEZ ಅಧಿಕಾರಿಗಳೊಂದಿಗೆ ಮಾತನಾಡಿ, ಮನೆ ಹಾಗೂ ದೇವಸ್ಥಾನಕ್ಕೆ ಸೂಕ್ತ ನಷ್ಟ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಘಟನೆಯ ಬಗ್ಗೆ ಡಿಸಿಗೆ ವರದಿ ಸಲ್ಲಿಸಲಾಗುವುದು. ಈ ಸಮಸ್ಯೆಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೈಶಾಲಿ ಹೇಳಿದ್ದಾರೆ. ಸ್ಥಳಕ್ಕೆ ಅಭಯಚಂದ್ರ, ಐವನ್ ಡಿ’ಸೋಜಾ, ತಹಶೀಲ್ದಾರರು, ಬಜಪೆ ಪೊಲೀಸ್ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Related Articles
ಗುರುವಾರ ರಾತ್ರಿ ಸುಮಾರು 11.45ಕ್ಕೆ ಭೂಕಂಪವಾದ ಹಾಗೆ ಭಾರೀ ಸದ್ದು ಕೇಳಿಸಿತು. ನಾಯಿಗಳು ಒಮ್ಮೆಲೆ ಬೊಗಳಲಾರಂಭಿಸಿದವು. ಕಿಟಕಿಯ ಬಾಗಿಲು ತೆರೆದು ನೋಡಿದಾಗ ಸುನಾಮಿ ರೀತಿಯಲ್ಲಿ ನೀರು ಜಗಲಿ ಏರಿಯಾಗಿತ್ತು. ಕಟ್ಟೆ ಒಡೆದಿದೆ ಎಂದು ತತ್ ಕ್ಷಣ ಊಹಿಸಿದೆ. ಮಂಚದ ಮೇಲೆ ನಿಲ್ಲು ಎಂದು ಪತ್ನಿಗೆ ಸೂಚಿಸಿದೆ. ಮನೆ ಬಾಗಿಲು ನೀರಿನ ರಭಸಕ್ಕೆ ಒಡೆದು ಅಡುಗೆ ಮನೆಯ ಗ್ಯಾಸ್ ಸಿಲಿಂಡರ್, ರೆಫ್ರಿಜರೇಟರ್ ಎಲ್ಲವೂ ನೀರಿನೊಂದಿಗೆ ಮುಂದಿನ ಕೋಣೆಗೆ ಬಂದವು. ಮನೆ ಸಾಮಗ್ರಿ ಚೆಲ್ಲಾಪಿಲ್ಲಿಯಾಗಿ ತೇಲಿ ಹೋದವು. ನಾಲ್ಕೂ ಕಡೆಗಳಿಂದ ನೀರು ಒಳ ನುಗ್ಗಿತ್ತು.
Advertisement
ಮದುಮಗ ಸುನಿಲ್ ಬದುಕಿಸಿದ
ಮಾಹಿತಿ ತಿಳಿದ ಸಮೀಪದ ಮನೆಯ ಮದುಮಗ (ಗುರುವಾರ ಮದುವೆ ನಡೆದಿತ್ತು) ಸುನಿಲ್ ಸುವರ್ಣ ಕತ್ತಲಲ್ಲಿಯೇ ಧಾವಿಸಿ ಅರ್ಧ ಒಡೆದಿದ್ದ ಬಾಗಿಲನ್ನು ತೆರೆದು ಮಾಧವ ಅಮೀನ್ ಮತ್ತು ಸುಭಾಷಿಣಿಯವರನ್ನು ಪಾರು ಮಾಡಿದರು. ಅವರೊಂದಿಗೆ ಸ್ಥಳೀಯರಾದ ಗೋಪಾಲ ಸುವರ್ಣ, ಸುಧೀರ್ ಸಹಾಯ ಮಾಡಿದರು. ನಾಯಿ ಸಹಿತ ಗೂಡು ನಾಪತ್ತೆ
ಮನೆ ಎದುರು ನಾಯಿಗೆ ನಿರ್ಮಿಸಿದ್ದ ಗೂಡಿನೊಂದಿಗೆ ಎರಡು ನಾಯಿಗಳು ಕೂಡ ನಾಪತ್ತೆಯಾಗಿವೆ. ಒಟ್ಟು ಮೂರು ನಾಯಿಗಳಿದ್ದು, ಒಂದು ನಾಯಿ ಮಾತ್ರ ಅಲ್ಲಿಂದ ತಪ್ಪಿಸಿಕೊಂಡಿದೆ.
ಒಂದೇ ಕರೆಗೆ ಫೋನ್ ಬಂದ್
ಸುನಾಮಿಯಂತೆ ನೀರು ನುಗ್ಗಿದಾಗ ಮನೆಯಲ್ಲಿದ್ದ ವಸ್ತುಗಳೆಲ್ಲ ಕೊಚ್ಚಿಕೊಂಡು ಹೋದವು. ಪತ್ನಿಯ ಫೋನ್ ಕೂಡ ನೀರಲ್ಲಿ ಬಿದ್ದಿತ್ತು. ಕೂಡಲೇ ಅದನ್ನು ತೆಗೆದು ಬೆಂಗಳೂರಿನಲ್ಲಿದ್ದ ಮಗನಿಗೆ ಮಾಹಿತಿ ನೀಡಿದೆವು. ಅಷ್ಟರಲ್ಲಿ ಅದೂ ಬಂದ್ ಆಯಿತು. ಇದರಿಂದಾಗಿ ಹೊರ ಜಗತ್ತಿನ ಸಂಪರ್ಕವೇ ಕಡಿದು ಹೋಯಿತು. ಮಗ ಬಳಿಕ ಸುನಿಲ್ ನನ್ನು ಸಂಪರ್ಕಿಸಿ ಕೂಡಲೇ ಧಾವಿಸುವಂತೆ ವಿನಂತಿಸಿದ. ಆ ಬಳಿಕ ಸುನಿಲ್ ಬಂದು ಬಾಗಿಲು ಒಡೆದ ಎಂದು ಮಾಧವ ತಿಳಿಸಿದರು. ಗದ್ದೆಯಲ್ಲಿ ಹುದುಗಿದ ವಸ್ತುಗಳು
ಮೇಲಿನಿಂದ ಬಂದ ನೀರು ಮನೆ, ದೇವಸ್ಥಾನಕ್ಕೆ ನುಗ್ಗಿದ ಬಳಿಕ ಆವರಣ ಗೋಡೆಯನ್ನು ಭೇದಿಸಿ ಕೆಳಗಿನ ಸಾಲಿನಲ್ಲಿರುವ ಬೈಲು ಗದ್ದೆಗಳಿಗೆ ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಗದ್ದೆಗೆ ಹೋಗಿ ಕೆಸರಿನಲ್ಲಿ ಹೂತು ಹೋಗಿವೆ. ಅವುಗಳ ಹುಡುಕಾಟ ಇನ್ನಷ್ಟೇ ಆಗಬೇಕಿದೆ. ಸೂಕ್ತ ಪರಿಹಾರದ ಭರವಸೆ
ದೊಡ್ಡಿಕಟ್ಟದಲ್ಲಿ ಸಂಭವಿಸಿರುವ ಅನಾಹುತದ ಕುರಿತಂತೆ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಘಟನೆಯಿಂದ ಹಾನಿ ಸಂಭವಿಸಿದ ಕಡೆಗೆ ಸೂಕ್ತ ಪರಿಹಾರ ನೀಡಲಾಗುವುದು. ಈ ಬಗ್ಗೆ ಪೂರಕ ಕ್ರಮಗಳನ್ನು ಸಂಸ್ಥೆಯ ವತಿಯಿಂದ ಶೀಘ್ರದಲ್ಲಿ ಕೈಗೊಳ್ಳಲಾಗುವುದು. ಅಲ್ಲಿನ ಮನೆ, ದೇವಸ್ಥಾನ ಈ ಮೊದಲು ಹೇಗಿತ್ತೋ ಅದೇರೀತಿ ಮರುವ್ಯವಸ್ಥೆ ಮಾಡಿಕೊಡಲಾಗುವುದು ಎಂದು MSEZನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.