Advertisement

ಬಿಗ್‌ ಬಾಸ್‌ ಜಯಶ್ರೀ

12:50 PM Oct 08, 2017 | Team Udayavani |

ಅಪ್ಪ ಲಾಯರ್‌ ಆಗಿದ್ದರಿಂದ, ಜಯಶ್ರೀಗೂ ಲಾಯರ್‌ ಆಗಬೇಕು ಅಂತ ಆಸೆ ಇತ್ತಂತೆ. ಆದರೆ, ತಾನು ಓದೋ ಹುಚ್ಚಿಗೆ ಅದೆಲ್ಲಿ ಸಾಧ್ಯ ಅಂತನಿಸಿ ಬಿಬಿಎಂ ಮಾಡಿದ್ದಾರೆ. ಅಲ್ಲಿಂದ ಕಂಪೆನಿಯೊಂದರಲ್ಲಿ ಎಚ್‌ಆರ್‌ ಆಗಿ ಕೆಲಸ ಮಾಡುತ್ತಲೇ, ನಿರುಪಮಾ ರಾಜೇಂದ್ರ ಅವರ ಬಳಿ ಕಥಕ್‌ ಕಲಿತಿದ್ದಾಗಿದೆ. ಇವೆರೆಡರ ಜೊತೆಜೊತೆಗೆ ಮಾಡೆಲಿಂಗ್‌ ಕ್ಷೇತ್ರ ಕರೆದಿದೆ. ಮಾಡೆಲಿಂಗ್‌ ಮಾಡುವಾಗ “ಬಿಗ್‌ ಬಾಸ್‌’ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಅಲ್ಲಿಂದ ಚಿತ್ರರಂಗಕ್ಕೆ ಬರುವ ಯೋಗ ಬಂದಿದೆ. ಈಗ ಚಿತ್ರರಂಗದಲ್ಲಿ ಪಯಣ ಮುಂದುವರೆಯುತ್ತಿದೆ.

Advertisement

ಇದು ಜಯಶ್ರೀ ನಡೆದು ಬಂದ ಹಾದಿ. ಬಿಗ್‌ ಬಾಸ್‌ಗೂ ಮುನ್ನ ಜಯಶ್ರೀ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಜಯಶ್ರೀ ಕೇವಲ ಎರಡು ವಾರಗಳ ಕಾಲ ಭಾಗವಹಿಸಿದ್ದೇ ಭಾಗವಹಿಸಿದ್ದು, ಅಲ್ಲಿಂದ ಆಕೆ ಜನಪ್ರಿಯವಾಗಿದ್ದಷ್ಟೇ ಅಲ್ಲ, ಒಂದೊಂದೇ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬರುತ್ತಿವೆ. ಈಗಾಗಲೇ ಜಯಶ್ರೀ, ಉಪ್ಪು ಹುಳಿ ಖಾರ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದರ ಬಿಡುಗಡೆಯ ಮುನ್ನವೇ ಜಯಶ್ರೀ ಇನ್ನೂ ಒಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ ಗಡ್ಡ ವಿಜಿ ನಿರ್ದೇಶನದ ಶಿರಾಡಿ ಘಾಟ್‌.

ಜಯಶ್ರೀಗೆ ಒಂದು ಗುರುತು ತಂದುಕೊಟ್ಟಿದ್ದು ಬಿಗ್‌ ಬಾಸ್‌ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಆದರೆ, ಬಿಗ್‌ ಬಾಸ್‌ಗೆ ಹೇಗೆ ಆಯ್ಕೆಯಾಗಿದ್ದು ಅಂತ ಜಯಶ್ರೀಗೆ ಗೊತ್ತಿಲ್ಲವಂತೆ. “”ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಮಾಡೆಲ್‌ಗ‌ಳ ಹುಡುಕಾಟ ನಡೆಯುತಿತ್ತು. ಆಡಿಷನ್‌ ಕೊಟ್ಟೆ. ಆ ಟೈಮ್‌ನಲ್ಲಿ ನಾನು ಹೆವೀ ತರಲೆಯಾಗಿದ್ದೆ. ಈಗ ಸ್ವಲ್ಪ ಕಡಿಮೆ. ಬಿಗ್‌ ಬಾಸ್‌ನಲ್ಲಿ ನನ್ನನ್ನು ಕರೆಕ್ಟ್ ಮಾಡಿಕೊಳ್ಳುವುದಕ್ಕೆ ಒಳ್ಳೆಯ ಅವಕಾಶ ಸಿಕ್ಕಿತು. ಅಲ್ಲಿದ್ದಿದ್ದು ಎರಡೇ ವಾರ ಆದರೂ ಅದೊಂದು ಒಳ್ಳೆಯ ಅನುಭವ. ಆ ತಂಡದಲ್ಲೇ ಚಿಕ್ಕವಳು ಅಂದರೆ ನಾನೇ” ಎಂದು ನೆನಪಿಸಿಕೊಳ್ಳುತ್ತಾರೆ ಜಯಶ್ರೀ. ಇನ್ನು ಅವರು ವೆಂಕಟ್‌ಗೆ ಹೂವು ಕೊಟ್ಟಿದ್ದು ಆ ಸೀಸನ್‌ನಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈ ಕುರಿತು ಮಾತನಾಡುವ ಅವರು, “”ನನಗೆ ಒಂದು ಹೂವು ಕೊಟ್ಟು, ಒಳಗಡೆ ಯಾರಿಗಾದರೂ ಕೊಡಿ ಅಂತ ಹೇಳಿದ್ದರು. ನಾನು ಮನೆಗೆ ಹೋಗುವಾಗ ರಾತ್ರಿ ಎರಡಾಗಿತ್ತು. ಎಲ್ಲರೂ ಸುಸ್ತಾಗಿದ್ದರು. ಎಲ್ಲರಿಗೂ ನಿದ್ದೆ ಆವರಿಸಿತ್ತು. ಸ್ವಲ್ಪ ಗೆಲುವಾಗಿದ್ದವರೆಂದರೆ ಅದು ವೆಂಕಟ್‌. ಅವರು ನನ್ನನ್ನ ವೆಲ್‌ಕಮ್‌ ಮಾಡಿದರು. ಹಾಗಾಗಿ ಅವರಿಗೇ ಕೊಟ್ಟುಬಿಟ್ಟೆ” ಎನ್ನುತ್ತಾರೆ ಅವರು.

ಇನ್ನು ಜಯಶ್ರೀಗೆ ಹೆಚ್ಚು ಮಾತಾಡುವ, ಹೆಚ್ಚು ತರಲೆ ಮಾಡುವ ಪಾತ್ರಗಳು ಬೇಕಂತೆ. “”ನಿಜಜೀವನದಲ್ಲೂ ನಾನು ತರಲೆ. ಹಾಗಾಗಿ ಆ ತರಹದ ಪಾತ್ರಗಳನ್ನ ಮಾಡೋಕೆ ನನಗೆ ಇಷ್ಟ. ಎರಡೂ ಚಿತ್ರಗಳಲ್ಲೂ ಪಾತ್ರಗಳು ಚೆನ್ನಾಗಿವೆ. ಮುಂದೆ ಯಾವ ತರಹದ ಪಾತ್ರಗಳು ಸಿಗುತ್ತವೋ ನೋಡಬೇಕು” ಎನ್ನುತ್ತಾರೆ ಅವರು. ಇನ್ನು ನಿಮ್ಮ ಆಸೆ ಏನು ಎಂದರೆ, “”ಉಪೇಂದ್ರ ಜೊತೆಗೆ ನಟಿಸುವ ಆಸೆ” ಎಂಬ ಉತ್ತರ ಥಟ್ಟನೆ ಅವರಿಂದ ಬರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.