ಕೋಲಾರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರ, ದುರಾಡಳಿತ, ಜನ, ರೈತ ವಿರೋಧಿ ನಿಲುವುಗಳ ವಿರುದ್ಧ ಮೇ 28ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಾಜಿ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ನಗರದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ| ವೈ.ಎ.ನಾರಾಯಣ ಸ್ವಾಮಿ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವರ್ಷದಿಂದ ಒಂದು ಸಮುದಾಯದ ತುಷ್ಟೀಕರಣ ನೀತಿಯಿಂದ ಸಮಾಜದ ವಿಭಜನೆ ಯತ್ನ ನಡೆದಿದೆ.
ಪ್ರತಿನಿತ್ಯ ಕೊಲೆ, ಸುಲಿಗೆ, ಅತ್ಯಾಚಾರ ನಡೆಯುತ್ತಿದ್ದು, ಅತಿ ಹೆಚ್ಚು ಕ್ರಿಮಿನಲ್ ಕೇಸ್ ದಾಖಲಾಗುತ್ತಿದೆ. ರಾಜ್ಯ ಸರಕಾರ ಮನಬಂದಂತೆ ಆಡಳಿತ ನಡೆಸುತ್ತಿದ್ದು, ಪೊಲೀಸ್ ವರ್ಗಾವಣೆಯಲ್ಲೂ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಅತಿವೃಷ್ಟಿಯ ಸಮಸ್ಯೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಇದೆಲ್ಲವನ್ನೂ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಅಮಾಯಕ ಹೆಣ್ಣು ಮಕ್ಕಳ ಹಿತ ಕಾಯುವಲ್ಲಿ ಸಿಎಂ, ಡಿಸಿಎಂ ವಿಫಲ: ಅಶ್ವತ್ಥನಾರಾಯಣ
ಕೋಲಾರ: ಪೆನ್‌ಡ್ರೈವ್ ಹಂಚಿಕೆ ತಪ್ಪಲ್ಲ ಎಂದು ರಾಜ್ಯದ ಓರ್ವ ಮಹಾನ್ ನಾಯಕ ಹೇಳುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಧಾಳಿ ನಡೆಸಿದ ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ, ಮಹಿಳೆಯರ ಮಾನ ಹರಾಜು ಹಾಕುವ ಮೂಲಕ ಅಮಾಯಕ ಹೆಣ್ಣು ಮಕ್ಕಳ ಹಿತ ಕಾಯುವಲ್ಲಿ ಸಿಎಂ, ಡಿಸಿಎಂ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಅಜ್ಞಾನಿಯಂತೆ ಕೆಲಸ ಮಾಡುತ್ತಿದ್ದಾರೆ. ಬಡವರ ಮಕ್ಕಳು ಉನ್ನತ ಹುದ್ದೆಗೆ ಹೋಗಬಾರದು ಎಂಬಂತೆ ಅವರನ್ನು ಹಗಲು ಕಂಡ ಬಾವಿಗೆ ನೂಕುತ್ತಿದ್ದಾರೆ. ಯುಜಿಸಿ ನಿಯಮ ಅನುಷ್ಠಾನಗೊಂಡರೆ ತಾನಾಗಿಯೇ ಎನ್‌ಇಪಿ ಜಾರಿಯಾಗುತ್ತದೆ, ಅದನ್ನು ತಡೆಯಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ ಸೇವೆಗಳ ಬಗ್ಗೆ ಕೇಳಿದರೆ ಮೋದಿ ಕಡೆ ಕೈ ತೋರಿಸ್ತಾರೆ. ಗ್ಯಾರಂಟಿಗಳ ಆಶ್ರಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಕೆಟ್ಟ ಆಡಳಿತ ಎಂದೂ ನೋಡಿರಲಿಲ್ಲ ಎಂದು ಟೀಕಿಸಿದರು.
ಆಪರೇಷನ್‌ಮಾಡಲ್ಲ: ನಾವು ಯಾವುದೇ ಆಪರೇಷನ್ ಮಾಡಲ್ಲ, ಅಭಿವೃದ್ಧಿ ಶೂನ್ಯ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅಲ್ಲಿ ನಾನೇ ಸಿಎಂ ಎಂಬ ಗಲಾಟೆ ಆರಂಭವಾಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ತಾನಾಗಿಯೇ ಪತನಗೊಳ್ಳಲಿದೆ ಎಂದರು.