ಬೀದರ್: ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಬೀದರ್, ಸಹೋದರರ ಕಾಳಗದಿಂದಾಗಿ ರಾಜ್ಯ ರಾಜಕಾರಣದಲ್ಲೇ ಗಮನ ಸೆಳೆಯುವಂಥ ಜಿಲ್ಲೆ. ಸಿಪಿಎಂ ಮತ್ತು ಬಿಎಸ್‌ಪಿ ಸಹಿತ ಎಲ್ಲ ರಾಜಕೀಯ ಪಕ್ಷಗಳಿಗೆ ನೆಲೆ ನೀಡಿರುವ ಗಡಿನಾಡು ಪ್ರತೀ ಚುನಾ ವಣೆಯಲ್ಲಿ ಬಹುತೇಕ ಕಾಂಗ್ರೆಸ್ ಮತ್ತು ಬಿಜೆಪಿಯೇ ತನ್ನ ಪಾರಮ್ಯ ಮೆರೆದಿವೆ. ಔರಾದ್ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರ ಸಹಿತ ಒಟ್ಟು ಆರು ಕ್ಷೇತ್ರಗಳನ್ನು ಒಳಗೊಂಡಿರುವ ಬೀದರ್ ಜಿಲ್ಲೆಯಲ್ಲಿ ಘಟಾನು ಘಟಿ ನಾಯಕರು ಸ್ಪರ್ಧೆಯಿಂದ ತನ್ನದೇ ಆದ ಛಾಪು ಬೀರಿದೆ. ಹಾಗಾಗಿ ರಾಜ್ಯದಲ್ಲಿ ಪ್ರತೀ ಬಾರಿ ಸರಕಾರ ರಚನೆ ವಿಚಾರದಲ್ಲಿ ಈ ಧರಿನಾಡು ಮಹತ್ವದ ಪಾತ್ರ ವಹಿಸುತ್ತಲೇ ಬಂದಿದೆ. ಇನ್ನೂ ಜಿಲ್ಲೆಯ 2-3 ಕ್ಷೇತ್ರಗಳಲ್ಲಿ ಕೆಲವೇ ಪರಿವಾರಗಳು ಮಾತ್ರ ಅಧಿಕಾರದ ಲಗಾಮು ಹಿಡಿದಿಟ್ಟುಕೊಂಡು ರಾಜಕಾರಣ ಮಾಡಿಕೊಂಡು ಬಂದಿರುವುದು ಇಲ್ಲಿನ ವಿಶೇಷ. ದಕ್ಷಿಣ ಭಾರತದಲ್ಲೇ ಭಾರತೀಯ ಜನಸಂಘ (ಬಿಜೆಎಸ್) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಕ್ಷಗಳ ಮೂಲಕ ಪ್ರತಿನಿಧಿಯೊಬ್ಬರನ್ನು ಮೊದಲ ಬಾರಿಗೆ ವಿಧಾನಸಭೆಗೆ ಕಳುಹಿಸಿದ ಹೆಗ್ಗಳಿಕೆ ಈ ಜಿಲ್ಲೆಗಿದೆ. ಅಷ್ಟೇ ಅಲ್ಲ ಸಿಪಿಎಂ, ಕೆಜೆಪಿ, ಜೆಡಿಎಸ್ ಸಹಿತ ಎಲ್ಲ ರಾಜಕೀಯ ಪಾರ್ಟಿಗಳಿಗೆ ಆಶ್ರಯ ನೀಡಿದೆ.
ಭಾಲ್ಕಿ :
ಖಂಡ್ರೆದ್ವಯರ ಕಾದಾಟದಿಂದಾಗಿ ಭಾಲ್ಕಿ ಸದಾ ಜಿದ್ದಾಜಿದ್ದಿನ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಕ್ಷೇತ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿಟ್ಟುಕೊಂಡಿರುವುದು ಕೇವಲ ಖಂಡ್ರೆ ಪರಿವಾರ ಮಾತ್ರ. ಪ್ರತೀ ಚುನಾವಣೆಯೂ ಪರಿವಾರದ ಮಧ್ಯೆಯೇ ತಂತ್ರ-ಪ್ರತಿತಂತ್ರಗಳು ನಡೆಯುವುದರಿಂದ ಈ ಕ್ಷೇತ್ರ ಚರ್ಚೆಯಲ್ಲಿರುವುದು ಸಾಮಾನ್ಯ. ಮೈಸೂರು ಪ್ರಾಂತಕ್ಕೆ ಒಳಪಟ್ಟ ಅನಂತರ 1957ರಿಂದ 2008ರ ವರೆಗೆ ಭಾಲ್ಕಿ ಕ್ಷೇತ್ರ 14 ಚುನಾವಣೆಗಳನ್ನು ಕಂಡಿದ್ದು, ಅದರಲ್ಲಿ ಸುಭಾಷ ಅಷ್ಟೂರೆ ಮತ್ತು ಕಲ್ಯಾಣರಾವ ಮೊಳಕೇರಿ ಹೊರತುಪಡಿಸಿದರೆ ಖಂಡ್ರೆ ಪರಿವಾರದವರೇ 5 ದಶಕಗಳ ಕಾಲ ವಿಧಾನಸಭೆಗೆ ಆಯ್ಕೆಯಾಗಿರುವುದು ಗಮನಾರ್ಹ. ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರ ಕೋಟೆಯನ್ನಾಗಿಸಿದ ಹಿರಿಮೆ ಹಿರಿಯ ಮುತ್ಸದ್ಧಿ ಭೀಮಣ್ಣ ಖಂಡ್ರೆಗೆ ಸಲ್ಲುತ್ತದೆ. ಇನ್ನು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಕ್ಷೇತ್ರದಲ್ಲಿ ನೆಲೆಯೂರಲು ಸಮಯ ಹಿಡಿಯಿತು. 2008ರಿಂದ ಸತತ ಮೂರು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿರುವ ಈಶ್ವರ ಖಂಡ್ರೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಬೀದರ್ :
Related Articles
ಜೆಡಿಎಸ್ ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳಿಗೆ ಆಶ್ರಯ ನೀಡಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ದಕ್ಷಿಣ ಭಾರತದಲ್ಲೇ ಮೊದಲು ಜನಸಂಘ ಮತ್ತು ಬಿಎಸ್‌ಪಿ ಅರಳಿದ್ದು ಈ ಕ್ಷೇತ್ರದಲ್ಲಿ. 1952ರಿಂದ 2018ರವರೆಗೆ 18 ಚುನಾವಣೆಗಳನ್ನು ಕಂಡಿರುವ ಈ ಮತಕ್ಷೇತ್ರದಲ್ಲಿ ಮೂರು ಬಾರಿ ಉಪ ಚುನಾವಣೆ ನಡೆದಿವೆ. ಒಟ್ಟು 10 ಬಾರಿ ಕಾಂಗ್ರೆಸ್, ಬಿಜೆಪಿ 3, ಪಕ್ಷೇತರ 2 ಬಿಎಸ್‌ಪಿ, ಕೆಜೆಪಿ ಮತ್ತು ಬಿಜೆಎಸ್ ತಲಾ ಒಂದು ಬಾರಿ ಗೆಲ್ಲುವ ಮೂಲಕ ಬೀದರ್ ಕೋಟೆಯನ್ನು ಆಳಿದ್ದಾರೆ. ಸಹಕಾರ ರಂಗದ ಭೀಷ್ಮರಾಗಿದ್ದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರು 2008ರಲ್ಲಿ ಔರಾದ ಮೀಸಲು ಕ್ಷೇತ್ರವಾದ ಹಿನ್ನೆಲೆ ಬೀದÃಕ್ಷೇತ್ರಕ್ಕೆ ವಲಸೆ ಬಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಿಎಸ್‌ಪಿಯ ರಹೀಂ ಖಾನ್ ವಿರುದ್ಧ ಗೆದ್ದಿದ್ದರು. ಎರಡು ಉಪ ಚುನಾವಣೆ ಸೇರಿ ಸತತ ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ನ ರಹೀಂ ಖಾನ್ ಗೆಲುವಿನ ನಗೆ ಬೀರಿದ್ದಾರೆ.
ಹುಮನಾಬಾದ್ :
ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಜೆಡಿಎಸ್ ಮತ್ತು ಬಿಜೆಪಿಗೆ ಈ ಕೋಟೆಯನ್ನು ಭೇದಿಸಲು ಸಾಧ್ಯವಾಗಿದ್ದು ಒಮ್ಮೆ ಮಾತ್ರ. 1952ರಿಂದ 2018ರ ವರೆಗೆ ನಡೆದ 16 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಪಾಟೀಲ ಕುಟುಂಬದ ತಂದೆ ಮತ್ತು ಮಗ ತಲಾ 4 ಬಾರಿ ಗೆದ್ದು ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವುದು ಹಾಗೂ ಸಿಪಿಐನಿಂದ ವಿ.ಎನ್.ಪಾಟೀಲ ಎರಡು ಬಾರಿ ಶಾಸಕರಾಗಿರುವುದು ಇತಿಹಾಸ. ಮಾಜಿ ಸಚಿವ ದಿ| ಬಸವರಾಜ ಪಾಟೀಲ ಎರಡು ಬಾರಿ ರಾಜ್ಯ ಸಚಿವರಾಗಿ, 4 ಬಾರಿ ಶಾಸಕರಾಗಿ, ಮೂರು ಬಾರಿ ಎಂಎಲ್‌ಸಿಯಾಗಿ ಕ್ಷೇತ್ರದಲ್ಲಿ ಪ್ರಬಲ ಹಿಡಿತ ಸಾಧಿಸಿದ್ದರು. 1994ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿದ್ದ ದಿ| ಮಿರಾಜುದ್ದಿನ್ ಪಟೇಲ್ ಮುಂದೆ ಆ ಪಕ್ಷದ ರಾಜ್ಯಾಧ್ಯಕ್ಷರೂ ಆದರು. ಇನ್ನು 1999ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸುಭಾಷ ಕಲ್ಲೂರ ಲಾಭದಾಯಕ ಹುದ್ದೆ ಹಿನ್ನೆಲೆಯಲ್ಲಿ 2003ರಲ್ಲಿ ಶಾಸಕ ಸ್ಥಾನ ಕಳೆದುಕೊಂಡರು. ಒಮ್ಮೆ ಉಪ ಚುನಾವಣೆ ಸಹಿತ 2008ರಿಂದ ಸತತವಾಗಿ ಜಯ ಸಾಧಿಸಿರುವುದು ವಿಶೇಷ. ಸದ್ಯ ಈ ಕ್ಷೇತ್ರದಲ್ಲಿ ರಾಜಶೇಖರ ಬಸವರಾಜ ಪಾಟೀಲ್ ಶಾಸಕರಾಗಿದ್ದಾರೆ.
ಬೀದರ್ ದಕ್ಷಿಣ :
ಬೀದರ್ ದಕ್ಷಿಣ ಈವರೆಗೆ ಕೇವಲ ಮೂರು ಚುನಾವಣೆಗಳನ್ನು ಮಾತ್ರ ಎದುರಿಸಿರುವ ಕ್ಷೇತ್ರ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹುಲಸೂರ (ಮೀಸಲು) ಬದಲಾಗಿ ಈ ಹೊಸ ಅಸ್ತಿತ್ವಕ್ಕೆ ಬಂದಿದೆ. ಅಪ್ಪಟ ಹಳ್ಳಿಗಳನ್ನು ಒಳಗೊಂಡು ವಿಭಿನ್ನ ಎನಿಸಿಕೊಂಡಿರುವ ಬೀದರ್ ದಕ್ಷಿಣ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪುರ್ ಸ್ಪರ್ಧೆಯಿಂದ ಗಮನ ಸೆಳೆದಿದೆ. 2008ರಲ್ಲಿ ಜೆಡಿಎಸ್, 2013ರ ಚುನಾವಣೆಯಲ್ಲಿ ಕರ್ನಾಟಕ ಮಕ್ಕಳ ಪಕ್ಷ ಗೆದ್ದಿದ್ದರೆ, 2018ರಲ್ಲಿ ಮತ್ತೆ ಜೆಡಿಎಸ್ ವಿಜಯಮಾಲೆ ಧರಿಸಿದೆ. ಕ್ಷೇತ್ರವನ್ನು ಸಿಂಗಾಪುರದಂತೆ ಅಭಿವೃದ್ಧಿ ಮಾಡುವ ಕನಸು ಬಿತ್ತಿದ್ದ ಅಶೋಕ ಖೇಣಿ ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಈಗ ಮತ್ತೂಮ್ಮೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಸಂಘಟಿಸಿರುವ ಮಾಜಿ ಸಿಎಂ ದಿ| ಧರ್ಮಸಿಂಗ್ ಅಳಿಯ ಚಂದ್ರಾಸಿಂಗ್ ಅಡ್ಡಗಾಲಾಗಿದ್ದಾರೆ.
ಬಸವಕಲ್ಯಾಣ :
ಸಂಸತ್‌ನ ಪರಿಕಲ್ಪನೆಯನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟ ಹೆಗ್ಗಳಿಕೆ ಬಸವಕಲ್ಯಾಣ ಕ್ಷೇತ್ರಕ್ಕಿದೆ. ಸಮಾನತೆ ಸಂದೇಶ ಸಾರಿದ ಈ ನೆಲದಲ್ಲಿ ಮಹಿಳೆಯೇ ಮೊದಲ ಶಾಸಕರಾದದ್ದು ವಿಶೇಷ. 1957ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಕ್ಷೇತ್ರ ಒಟ್ಟು 15 ಚುನಾವಣೆಗಳನ್ನು ಎದುರಿಸಿದ್ದು, ಜೆಡಿಎಸ್ 7, ಕಾಂಗ್ರೆಸ್ 5, ಬಿಜೆಪಿ 2 ಮತ್ತು ಪಕ್ಷೇತರ ಒಂದು ಬಾರಿ ವಿಜಯ ಮಾಲೆ ಧರಿಸಿದೆ. ಜೆಡಿಎಸ್- ಕಾಂಗ್ರೆಸ್‌ನ ಭದ್ರ ಕೋಟೆಯಲ್ಲಿ ಕಮಲ ಅರಳಲು ನಾಲ್ಕು ದಶಕ (2008) ಹಿಡಿಯಿತು. ಇಲ್ಲಿ ಬಸವರಾಜ ಪಾಟೀಲ ಅಟ್ಟೂರ್ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಸತತ ನಾಲ್ಕು ಬಾರಿ ಸಹಿತ ಒಟ್ಟು ಐದು
ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಕಾಂಗ್ರೆಸ್‌ನ ನಾರಾಯಣ ರಾವ್ ಅವರ ಅಕಾಲಿಕ ನಿಧನ ಹಿನ್ನಲೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಗೆಲುವು ಸಾಧಿಸಿದ್ದಾರೆ.
ಔರಾದ್ :
2 ರಾಜ್ಯಗಳಲ್ಲಿ ಹೊಂದಿ ಕೊಂಡಿರುವ ಔರಾದ್ ಕ್ಷೇತ್ರಕ್ಕೆ ಮಾಜಿ ಗೃಹ ಸಚಿವ ದಿ| ಮಾಣಿಕರಾವ್ ಪಾಟೀಲ ಅವರನ್ನು ನೀಡಿದ ಹೆಗ್ಗಳಿಕೆಯಿದೆ. ರಾಜ್ಯದಲ್ಲೇ ಅತೀ ಹೆಚ್ಚು ತಾಂಡಾಗಳನ್ನು ಹೊಂದಿರುವ ಕ್ಷೇತ್ರಗಳಲ್ಲಿ ಒಂದಾದ ಔರಾದ್‌ಗೆ ಅತೀ ಹಿಂದುಳಿದ ತಾಲೂಕು ಹಣೆಪಟ್ಟಿಯೂ ಇದೆ. ಕ್ಷೇತ್ರದಿಂದ ಸತತ ಮೂರು ಬಾರಿ ಚುನಾಯಿತರಾಗಿದ್ದ ದಿ| ಗುರುಪಾದಪ್ಪ ನಾಗಮಾರಪಳ್ಳಿ, ಅರಣ್ಯ ಮತ್ತು ಉಪ ಬಂದೀಖಾನೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅನಂತರ ಕಾಂಗ್ರೆಸ್‌ನ ಭದ್ರ ಕೋಟೆಯನ್ನು ಒಡೆದು ಬಿಜೆಪಿ ಶಾಸಕ ಪ್ರಭು ಚವ್ಹಾಣ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 2008ರಿಂದ ಮೀಸಲು ಕ್ಷೇತ್ರವಾಗಿರುವ ಔರಾದ್ ಒಟ್ಟು 13 ಚುನಾವಣೆಗಳನ್ನು ಎದುರಿಸಿದ್ದು, ಕಾಂಗ್ರೆಸ್ 5, ಬಿಜೆಪಿ 4, ಜೆಡಿಎಸ್ 3 ಮತ್ತು ಒಂದು ಬಾರಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.