Advertisement

ಅಮೇರಿಕಾಕ್ಕೆ ಕಳಂಕವಾಗಿರುವ ಬೃಹತ್ ಕಾರಾಗೃಹ “ಗ್ವಾಂಟನಾಮೊ ಬೇ”  ಶಾಶ್ವತ್ ಬಂದ್ …!?

12:53 PM Feb 16, 2021 | Team Udayavani |

ವಾಷಿಂಗ್ಟನ್:  ಅಮೇರಿಕಾ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಂಡರೂ, ಒಂದಲ್ಲಾ ಒಂದು ಕಳಂಕವನ್ನು ಹೊತ್ತುಕೊಂಡೇ ಬಂದಿದೆ. ಆ ಪೈಕಿಯಲ್ಲಿ ವಿವಾದಾತ್ಮಕ ಗ್ವಾಂಟನಾಮೊ ಬೇ ಕಾರಾಗೃಹದ ವಿಚಾರವೂ ಕೂಡ ಸೇರಿಕೊಂಡಿದೆ.

Advertisement

ಇತ್ತೀಚೆಗಷ್ಟೇ ಅಮೇರಿಕಾದ ಅಧ್ಯಕ್ಷ ಪೀಠವನ್ನೇರಿದ ಜೋ ಬೈಡನ್ ಈ ಕಾರಾಗೃಹದ ಬಗ್ಗೆ ಈಗ ವಿಮಾರ್ಶಾತ್ಮಕ ನಿಲುವನ್ನು ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಕಾಣುತ್ತಿದೆ. ಈ ನಿರ್ಧಾರವನ್ನು ಬೈಡನ್ ಪರವಾದಿಗಳು ಶ್ಲಾಘನೀಯ ನಡೆ ಎಂದು ಹೇಳುತ್ತಿದ್ದಾರೆ.

ಜನವರಿ 2002 ರಲ್ಲಿ ಈ ಜೈಲು ಸ್ಥಾಪನೆಯಾದ ಸಂದರ್ಭದಲ್ಲಿ, ಅಂದಿನ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಮ್ಸ್ಫೆಲ್ಡ್ ಅಪಾಯಕಾರಿ ಜನರನ್ನು ಬಂಧಿಸಲು, ಬಂಧಿತರನ್ನು ಸೂಕ್ತ ನೆಲೆಯಲ್ಲಿ ವಿಚಾರಣೆ ಮಾಡಲು ಮತ್ತು ಅಪರಾಧವೆಸಗಿದ ಬಂಧಿತರನ್ನು ವಿಚಾರಣೆಗೆ ಒಳಪಡಿಸಲು ಬಂಧನ ಶಿಬಿರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದರು.

ರಕ್ಷಣಾ ಇಲಾಖೆ ಮೊದಲಿಗೆ ಗ್ವಾಂಟನಾಮೊದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಗಳ ಗುರುತನ್ನು ರಹಸ್ಯವಾಗಿರಿಸಿತ್ತು, ಆದರೆ, ಅಸೋಸಿಯೇಟೆಡ್ ಪ್ರೆಸ್‌ ನ ಮಾಹಿತಿ ಸ್ವಾತಂತ್ರ್ಯ ಕಾಯ್ದೆಯ ವಿನಂತಿಯನ್ನು ನಿರಾಕರಿಸುವ ಪ್ರಯತ್ನಗಳನ್ನು ಕಳೆದುಕೊಂಡ ನಂತರ , ಯು ಎಸ್ ಮಿಲಿಟರಿ ಅಧಿಕೃತವಾಗಿ 779 ಕೈದಿಗಳನ್ನು ಇಟ್ಟುಕೊಂಡಿರುವುದನ್ನು ಒಪ್ಪಿಕೊಂಡಿತು.

Advertisement

ಇನ್ನು, ಬಂಧಿತರು ನಿಂದನೆ ಮತ್ತು ಚಿತ್ರಹಿಂಸೆಯ ಕುರಿತಾಗಿ ವರದಿ ಮಾಡಿದ್ದರು, ಇದನ್ನು ಅಂದಿನ ಬುಷ್ ಆಡಳಿತ ನಿರಾಕರಿಸಿತ್ತು.

2006 ರಲ್ಲಿ, ಗ್ವಾಂಟನಾಮೊ ಕೊಲ್ಲಿ ಬಂಧನ ಶಿಬಿರವನ್ನು ಮುಚ್ಚಬೇಕೆಂದು ವಿಶ್ವಸಂಸ್ಥೆಯು ನಿರ್ಧಾರಕ್ಕೆ ಬಂತಾದರೂ ವಿಶ್ವಸಂಸ್ಥೆಯ ಪ್ರಯತ್ನ ವಿಫಲವಾಯಿತು.

22 ಜನವರಿ 2009 ರಂದು, ಬರಾಕ್ ಒಬಾಮಾ ಅಧ್ಯಕ್ಷಾವದಿಯಲ್ಲಿ ಗ್ವಾಂಟನಾಮೊ ಮಿಲಿಟರಿ ಆಯೋಗದ ವಿಚಾರಣೆಯನ್ನು 120 ದಿನಗಳವರೆಗೆ ಸ್ಥಗಿತಗೊಳಿಸಲು ಮತ್ತು ಆ ವರ್ಷ ಬಂಧನ ಸೌಲಭ್ಯವನ್ನು ಸ್ಥಗಿತಗೊಳಿಸುವಂತೆ ವಿನಂತಿಯನ್ನು ಹೊರಡಿಸಿತು. ಆದರೇ, ಒಬಾಮ ಪ್ರಯತ್ನವೂ ಕೂಡ ಈಡೇರಿರಲಿಲ್ಲ.

ಮಿಲಿಟರಿ ಮತ್ತು ಗುಪ್ತಚರ ಸೇವೆಗಳೊಂದಿಗೆ ಕೆಲಸ ಮಾಡುವ ಆರೋಗ್ಯ ವೃತ್ತಿಪರರು “ಕ್ರೂರ, ಅಮಾನವೀಯ ಮತ್ತು ಅವಮಾನಕರ ಚಿಕಿತ್ಸೆ ಮತ್ತು ಬಂಧಿತರನ್ನು ಹಿಂಸಿಸುವುದನ್ನು ಮಾಡುತ್ತಿದ್ದಾರೆ” ಎಂದು 2013 ರ ಇನ್ಸ್ಟಿಟ್ಯೂಟ್ ಆನ್ ಮೆಡಿಸಿನ್ ಆ್ಯಸ್ ಪ್ರೊಫೆಷನ್ (ಐಎಂಎಪಿ) ವರದಿಯು ಹೆಳಿತ್ತು.

ಸದ್ಯ, ಈ ವಿವಾದಾತ್ಮಕ ಗ್ವಾಂಟನಾಮೊ ಬೇ ಜೈಲಿನ ಬಗ್ಗೆ ಯುಎಸ್ ಅಧ್ಯಕ್ಷ ಜೋ ಬೈಡನ್  ಔಪಚಾರಿಕ ವಿಮರ್ಶೆಯನ್ನು ಪ್ರಾರಂಭಿಸಿದ್ದಾರೆ. ಜೈಲು ಮುಚ್ಚಲು ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಮತ್ತು ಅಧ್ಯಕ್ಷ ಬೈಡೆನ್ ಅವರ ಅವಧಿ ಮುಗಿಯುವುದರೊಳಗಾಗಿ ಕಾರಾಗೃಹವನ್ನು ಮುಚ್ಚುವುದು ಅವರ ಗುರಿ ಎಂದು ಶ್ವೇತಭವನವು ಕಳೆದ ಶುಕ್ರವಾರ ವರದಿ ಮಾಡಿದೆ.

ಮುಂದಿನ ಕೆಲವು ವಾರಗಳಲ್ಲಿ ಅಮೇರಿಕ ಅಧ್ಯಕ್ಷರು ಈ ನಿಟ್ಟಿನಲ್ಲಿ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಬಹುದು ಎಂದು ಜೈಲಿನ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡ ಸಹಾಯಕರು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ಗೆ ತಿಳಿಸಿದ್ದಾರೆ.

ವಿಶ್ವದ ದೊಡ್ಡಣ್ಣ ಅಮೇರಿಕಾ ಗ್ವಾಂಟನಾಮೊ ಬೇ ಕಾರಾಗೃಹಕ್ಕಾಗಿ   ವಿಶ್ವದಾದ್ಯಂತ ಟೀಕೆಗಳನ್ನು ಎದುರಿಸಿದೆ ಮತ್ತು ಈಗಲೂ ಎದುರಿಸುತ್ತಿದೆ. ಈ ಕಾರಾಗೃಹದ ಕಾರಣದಿಂದಾಗಿ ಗಂಭೀರವಾದ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವೂ ಅಮೇರಿಕಾದ ಮೇಲಿದೆ.

ಅಧ್ಯಕ್ಷ ಜೋ ಬೈಡನ್ ಜೈಲು ಮುಚ್ಚುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿರುವುದು ಇದೇ ಕಾರಣಕ್ಕಾಗಿ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಕ್ಯೂಬಾದ ಯು ಎಸ್ ನೇವಲ್ ಅಡಿಯಲ್ಲಿ ಗ್ವಾಂಟನಾಮೊ ಬೇ ಕಾರಾಗೃಹವನ್ನು ಮುಚ್ಚುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ವಕ್ತಾರ ಜೆನ್ ಸಾಕಿ ಇದು ನಮ್ಮ ಪರಮ ಗುರಿ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಮಾತ್ರವಲ್ಲದೇ, ಈ ಕಾರಾಗ್ರಹವನ್ನು ಮುಚ್ಚುವ ಉದ್ದೇಶಕ್ಕಾಗಿ ಹಿಂದಿನ ಸರ್ಕಾರದ ನಡೆ ಮತ್ತು ನಿಲು ಹಾಗು ನಮ್ಮ ನಿಲವನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ.

ಒಬಾಮಾ ಪ್ರಯತ್ನ ಪಟ್ಟಿದ್ದರು, ಆದರೇ, ವಿಫಲರಾದರು..!

ಈ ವಿವಾದಾತ್ಮಕ ಕಾರಾಗ್ರಹವನ್ನು ಮುಚ್ಚಲು  ರಾಷ್ಟ್ರೀಯ ಭದ್ರತಾ ಮಂಡಳಿ, ರಾಜ್ಯ ಮತ್ತು ನ್ಯಾಯ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಎಮಿಲಿ ಹಾರ್ನೆ ಹೇಳಿದ್ದರು. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಕೂಡ ಅಮೇರಿಕಾವನ್ನು ಮಾನವ ಹಕ್ಕುಗಳ ಉಲ್ಲಂಘನೆಗೆ ಗುರಿಯಾಗಿಸಿದ್ದ ಗ್ವಾಂಟನಾಮೊ ಬೇ ಕಾರಾಗೃಹವನ್ನು ಮುಚ್ಚಲು ಪ್ರಯತ್ನಿಸಿದ್ದರು.

ಈ ವಿವಾದಾತ್ಮಕ ಕಾರಾಗೃಹವನ್ನು  ಮುಚ್ಚಲು ಯುನೈಟಡ್ ಸ್ಟೇಟ್ಸ್ ಆಫ್ ಕಾಂಗ್ರೆಸ್ ಗೆ ಪ್ರಸ್ತಾಪಿಸುವುದಾಗಿ ಒಬಾಮಾ ತಮ್ಮ ಅಧಿಕಾರಾವಧಿಯಲ್ಲಿ ಹೇಳಿದ್ದರು. ಅದನ್ನು ಅನುಮೋದಿಸದಿದ್ದರೆ, ಅವರು ತಮ್ಮ ವೀಟೋ ಅಧಿಕಾರವನ್ನು ಬಳಸುವುದಾಗಿಯೂ ಅವರು ಭರವಸೆ ನೀಡಿದ್ದರು. ಆದಾಗ್ಯೂ, ಒಬಾಮ ಅಧಿಕಾರಾವಧಿಯಲ್ಲಿ ಇದು ಸಾಧ್ಯವಾಗಿರಲಿಲ್ಲ.

ಟ್ರಂಪ್‌ ಇದರ ಬಗ್ಗೆ ಯಾವುದೇ ಕಾಳಜಿ ತೋರಿಸಿರಲಿಲ್ಲ..!

ಅಮೇರಿಕಾದಲ್ಲಿ ಅತ್ಯಂತ ಟೀಕೆಗೆ ಒಳಗಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರಾಗೃಹವನ್ನು ಮುಚ್ಚುವ ಯಾವುದೇ ಇಚ್ಛೆಯನ್ನು ಅವರ ಅಧಿಕಾರಾವದಿಯಲ್ಲಿ ವ್ಯಕ್ತಪಡಿಸಿರಲಿಲ್ಲ.

ಈ ಕಾರಾಗೃಹದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಬಗ್ಗೆಯೂ ಟ್ರಂಪ್ ಎಳ್ಳಷ್ಟು ಚಿಂತಿಸಲಿಲ್ಲ. ಸದ್ಯ ಗ್ವಾಂಟನಾಮೊ ಬೇ ಕಾರಾಗೃಹದಲ್ಲಿ 40 ಕೈದಿಗಳು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಯಾವುದೇ ಆರೋಪವಿಲ್ಲದೆ ಬಂಧಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ವಿಷಾದನೀಯ ಸಂಗತಿಯೆಂದರೇ, ಗ್ವಾಂಟನಾಮೊ ಬೇ ಕಾರಾಗೃಹದಲ್ಲಿ ಬಂಧಿತರಾಗಿರುವ ಹಲವರನ್ನು ಯು ಎಸ್ ಸರ್ಕಾರ ಉಗ್ರಗಾಮಿಗಳು ಎಂದು ಘೋಷಿಸಿದೆ.

 2002 ರಲ್ಲಿ ಬಹಿರಂಗಗೊಂಡ ಕಾರಾಗೃಹದ ಕೆಲವು ಚಿತ್ರಗಳು ಖಂಡನೆಗೆ ಒಳಗಾದವು !

ಸೆಪ್ಟೆಂಬರ್  11 2001 ರಂದು ಯುಎಸ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಅಂದಿನ ಬುಷ್ ಆಡಳಿತವು ಗ್ವಾಂಟನಾಮೊ ಬೇ ಕಾರಾಗೃಹದಲ್ಲಿ  ಅಫ್ಘಾನಿಸ್ತಾನ ಮತ್ತು ಇರಾಕ್ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ಶಂಕಿತ ಭಯೋತ್ಪಾದಕರನ್ನು ಸೆರೆಹಿಡಿದು ವಶಕ್ಕೆ ತೆಗೆದುಕೊಂಡಿತು. 2002 ರಲ್ಲಿ, ಈ ಕಾರಾಗೃಹದ ಕೆಲವು ಚಿತ್ರಗಳನ್ನು ಬಹಿರಂಗಪಡಿಸಲಾಯಿತು, ಇದುದರಿಂದಾಗಿ ಯುಎಸ್ ಹಲವು ಟೀಕೆಗಳನ್ನು ಎದುರಿಸಬೇಕಾಯಿತು. ಹಿಂಸಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಬಿಂಬಿಸುವ ಈ ಛಾಯಾಚಿತ್ರಗಳಲ್ಲಿ, ಕೈದಿಗಳನ್ನು ಪಂಜರಗಳಲ್ಲಿ ಮತ್ತು ಆವರಣಗಳಲ್ಲಿ ತೋರಿಸಲಾಗಿದೆ. ಛಾಯಾಚಿತ್ರಗಳು ಹೊರಬಂದ ನಂತರ ಇದನ್ನು ವಿಶ್ವಾದ್ಯಂತ ಖಂಡನೆಗೆ ಒಳಗಾಯಿತು.

ಇದರಿಂದ ಅಮೇರಿಕಾಕ್ಕೆ ಏನು ಪ್ರಯೋಜನವಾಗಲಿದೆ..?

ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಗ್ವಾಂಟನಾಮೊ ಬೇ ಕಾರಾಗೃಹವನ್ನು ವಿಶ್ವದ ಅತ್ಯಂತ ದುಬಾರಿ ಜೈಲು ಎಂದು ಕರೆದರು. ವರದಿಯ ಪ್ರಕಾರ, ಕೈದಿಗಳಿಗಾಗಿ ವಾರ್ಷಿಕವಾಗಿ 5.6 ಕೋಟಿ ರೂ. ಇದಲ್ಲದೆ, ಪೆಂಟಗನ್ ಪ್ರತಿ ವರ್ಷ 9 ಬಿಲಿಯನ್ ರೂಪಾಯಿಗಳನ್ನು ಅದರ ನಿರ್ವಹಣೆಗಾಗಿ ಖರ್ಚು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಕಾರಾಗೃಹವನ್ನು ಮುಚ್ಚಲು ಬೈಡನ್ ನಿರ್ಧರಿಸಿದರೆ, ಅಮೆರಿಕಕ್ಕೆ ಎರಡು ನೇರ ಪ್ರಯೋಜನಗಳಿವೆ. ಮೊದಲಿಗೆ, ಅವರು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳನ್ನು ತೊಡೆದುಹಾಕುತ್ತಾರೆ. ಕಾರಾಗೃಹದಲ್ಲಿ ದೀರ್ಘಕಾಲ ಸೆರೆವಾಸ ಅನುಭವಿಸಿದವರಿಗೆ ಇಲ್ಲಿಂದ ಮುಕ್ತಿ ದೊರಕುತ್ತದೆ.

ಒಟ್ಟಿನಲ್ಲಿ, ಗ್ವಾಂಟನಾಮೊ ಬೇ ಕಾರಾಗೃಹ ಮುಚ್ಚುವ ವಿಚಾರ ಅಮೇರಿಕಾದಲ್ಲಿ ಈಗ ಚರ್ಚೆಯಾಗುತ್ತಿದ್ದು, ಅಧ್ಯಕ್ಷ ಬೈಡನ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕುತೂಹಲ ಮೂಡಿಸಿದೆ.

ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ

 

 

 

Advertisement

Udayavani is now on Telegram. Click here to join our channel and stay updated with the latest news.

Next